ಬಳ್ಳಾರಿ
ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಅವರ ಸಂದೇಶಗಳನ್ನು ಇಡೀ ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಂದಾಗಿದ್ದು, ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ಬಳ್ಳಾರಿ ಜಿಲ್ಲೆಗೆ ಅ.12ರಂದು ಹೂವಿನಹಡಗಲಿ ಮೂಲಕ ಜಿಲ್ಲೆಗೆ ಪ್ರವೇಶಿಸಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ತಿಳಿಸಿದ್ದಾರೆ.
ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆಯು ಹೂವಿನಹಡಗಲಿಗೆ ಮಧ್ಯಾಹ್ನ 12ಕ್ಕೆ ಹಾವೇರಿ ಮೂಲಕ ಆಗಮಿಸಲಿದ್ದು, ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮತ್ತು ತಹಸೀಲ್ದಾರ್ ರಾಘವೇಂದ್ರ ಅವರು ರಥಯಾತ್ರೆಗೆ ಸ್ವಾಗತಿಸಲಿದ್ದಾರೆ. ಹಡಗಲಿ ಪಟ್ಟಣದಲ್ಲಿ ಮೂರು ಗಂಟೆಗಳ ಕಾಲ ತಂಗಲಿರುವ ಸ್ತಬ್ಧಚಿತ್ರ ರಥಯಾತ್ರೆಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗಾಂಧಿ ಅನುಯಾಯಿಗಳು,ಸಾರ್ವಜನಿಕರು ವೀಕ್ಷಣೆ ಮಾಡಲಿದ್ದಾರೆ.
ನಂತರ ಹಗರಿಬೊಮ್ಮನಹಳ್ಳಿಗೆ ಸಂಜೆ 4ಕ್ಕೆ ಆಗಮಿಸಲಿದ್ದು,ತಹಸೀಲ್ದಾರ್ ವಿಜಯಕುಮಾರ್ ಅವರು ಸ್ವಾಗತ ಕೋರಲಿದ್ದಾರೆ. ಇಲ್ಲಿಯೂ ಶಾಲಾ-ಕಾಲೇಜು ವಿದ್ಯಾರ್ಥಿಗಳು,ಸಾರ್ವಜನಿಕರು ಇದನ್ನು ವೀಕ್ಷಿಸಲಿದ್ದಾರೆ. ರಾತ್ರಿ ತಹಸೀಲ್ದಾರರ ಕಚೇರಿ ಆವರಣದಲ್ಲಿಯೇ ಇರಲಿರುವ ಸ್ತಬ್ಧಚಿತ್ರ ರಥವು ಅ.13ರಂದು ಬೆಳಗ್ಗೆ ಹೊಸಪೇಟೆ ಮಾರ್ಗವಾಗಿ ಹೊರಟು ಬಳ್ಳಾರಿಗೆ ಮಧ್ಯಾಹ್ನ ತಲುಪಲಿದೆ.
ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಸ್ತಬ್ಧಚಿತ್ರ ರಥಯಾತ್ರೆಗೆ ಸ್ವಾಗತ ಕೋರಲಿದ್ದಾರೆ. ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರನ್, ಎಸ್ಪಿ ಅರುಣ ರಂಗರಾಜನ್, ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಇಲ್ಲಿಯೂ ಸಹ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಗಾಂಧಿ ಅನುಯಾಯಿಗಳು ವೀಕ್ಷಣೆ ಮಾಡಲಿದ್ದಾರೆ. ಮದ್ಯಾಹ್ನದ ನಂತರ ರಥಯಾತ್ರೆಯು ಕೊಪ್ಪಳ ಜಿಲ್ಲೆಗೆ ತೆರಳಲಿದೆ ಎಂದು ಅವರು ತಿಳಿಸಿದ್ದಾರೆ. ಈ ಗಾಂಧಿಸ್ತಬ್ಧಚಿತ್ರ ರಥಯಾತ್ರೆಯಲ್ಲಿ ಗಾಂಧೀಜಿ ಹಾಗೂ ಅವರು ನಡೆಸಿದ ಸ್ವಾತಂತ್ರ್ಯ ಹೋರಾಟ ಹಾಗೂ ಅವರಿಗೆ ಸಾಥ್ ನೀಡಿದ ಹೋರಾಟಗಾರರು ಹಾಗೂ ಅವರ ಸಂದೇಶದ ವಿವರ ಹೊಂದಿರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಸ್ತಬ್ಧಚಿತ್ರ ರಥಯಾತ್ರೆಯನ್ನು ವೀಕ್ಷಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








