ಮತದಾರರಿಗೆ ಜಾಗೃತಿ ಮೂಡಿಸಿ : ತಹಶೀಲ್ದಾರ್

ಚಳ್ಳಕೆರೆ

    ರಾಜ್ಯ ಚುನಾವಣಾ ಆಯೋಗ ಈಗಾಗಲೇ ಮತದಾರರ ತಿದ್ದುಪಡಿ ಮತ್ತು ಮತದಾರ ಸೇರ್ಪಡೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳಿಗೆ ನೀಡಿದ್ದು, ಮತದಾರರಿಂದ ಇನ್ನೂ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತೊಮ್ಮೆ ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವಂತೆ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ತಿಳಿಸಿದರು.

     ಅವರು, ಶುಕ್ರವಾರ ಇಲ್ಲಿನ ಛೇಂಬರ್ ಆಫ್ ಕಾರ್ಮಸ್ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾರರ ಪಟ್ಟಿ ತಿದ್ದುಪಡಿ ಕುರಿತಂತೆ ಹಲವಾರು ಹಂತದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಪ್ರಾತ್ಯಕ್ಷತೆಯೊಂದಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆದರೆ, ಕೆಲವು ಮತಗಟ್ಟೆ ಕ್ಷೇತ್ರಗಳಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿಲ್ಲವೆಂಬ ಅಸಮದಾನವಿದೆ.

      ಚುನಾವಣೆ ಕಾರ್ಯವಾದ್ದರಿಂದ ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿ ತನ್ನ ವ್ಯಾಪ್ತಿಯಲ್ಲಿ ಹೆಚ್ಚಿನ ಶ್ರಮವಹಿಸಿ ತಿದ್ದುಪಡಿ ಮತ್ತು ಸೇರ್ಪಡೆ ಕುರಿತಂತೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 253 ಮತಗಟ್ಟೆ ಅಧಿಕಾರಿಗಳ ಸಭೆ ಇದಾಗಿದ್ದು, ಪ್ರತಿಯೊಬ್ಬರೂ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತು ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.

      ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾತನಾಡಿ, ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ವಿಚಾರದಲ್ಲೂ ಯಾವುದೇ ರೀತಿಯ ಸಂದೇಹ ಹಾಗೂ ತಪ್ಪು ತಿಳುವಳಿಕೆ ಉಂಟಾಗಬಾರದು ಎಂಬ ದೃಷ್ಠಿಯಿಂದ ಪಿಪಿಟಿ ಕಾರ್ಯಗಾರಗಳ ಮೂಲಕ ಮತಗಟ್ಟೆ ಅಧಿಕಾರಿಗಳನ್ನು ಜಾಗೃತಿಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ವಿವರಗಳನ್ನು ಗಣಕ ಯಂತ್ರದಲ್ಲಿ ಅಳವಡಿಸಲು ಕೆಲವೆಡೆ ತಾಂತ್ರಿಕ ತೊಂದರೆ ಇದೆ. ಆದರೆ, ಅಂತಹ ತೊಂದರೆಗಳನ್ನು ನಿವಾರಿಸಿಕೊಂಡು ಚುನಾವಣೆಯ ಕಾರ್ಯವನ್ನು ಜವಾಬ್ದಾರಿಯುತ್ತವಾಗಿ ಮಾಡಿ ಮುಗಿಸಬೇಕಿದೆ.

     ರಾಜ್ಯ ಚುನಾವಣಾ ಆಯೋಗ ಈಗಾಗಲೇ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಯಾವ ಮತಗಟ್ಟೆ ಕ್ಷೇತ್ರಗಳಲ್ಲೂ ಸಹ ಮತದಾರ ನನ್ನ ಮತ ಸೇರ್ಪಡೆಯಾಗಿಲ್ಲವೆಂಬ ದೂರು ಎಲ್ಲೂ ಬರಬಾರದು. ಚುನಾವಣಾ ಆಯೋಗದ ಕಾರ್ಯಕ್ಕೆ ಉತ್ತಮ ಹೆಸರು ಪಡೆಯಬೇಕಾದಲ್ಲಿ ಮತಗಟ್ಟೆ ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು. ಈಗಾಗಲೇ ಹಲವಾರು ಬಾರಿ ಸಮಯ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಸಮಯವಿಲ್ಲ.

     ಆದ್ದರಿಂದ ಎಲ್ಲಾ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆ ಕೇಂದ್ರಗಳ ಮತದಾರ ತಿದ್ದುಪಡಿ ಮತ್ತು ಸೇರ್ಪಡೆಯನ್ನು ಯಾವುದೆ ಲೋಪದೋಷವಿಲ್ಲದಂತೆ ನಿರ್ವಹಿಸುವ ಮೂಲಕ ನಾವೆಲ್ಲರೂ ಚುನಾವಣಾ ಕಾರ್ಯವನ್ನು ದಕ್ಷತೆಯಿಂದ ಮಾಡಬಲ್ಲೆವು ಎಂಬುವುದನ್ನು ನಿರೂಪಿಸಬೇಕಿದೆ. ಈಗಾಗಲೇ ಚುನಾವಣಾ ಆಯೋಗ ಮತದಾರರ ಸಮಸ್ಯೆ ತಿಳಿದುಕೊಳ್ಳಲು ಮೊಬೈಲ್ ಆ್ಯಫ್ ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಎಲ್ಲಾ ಮತದಾರರು ಪಡೆದುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಚುನಾವಣಾ ಇಲಾಖೆ ಶಿರಸ್ತೇದಾರ್ ಪ್ರಕಾಶ್, ಸಿಬ್ಬಂದಿಗಳಾದ ಓಬಳೇಶ್, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link