ಹಾವೇರಿ
ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸ್ವಯಂ ದೃಢೀಕೃತ ಪ್ರಮಾಣಪತ್ರಗಳನ್ನು ಪಡೆಯಲಾಗುತ್ತದೆ. ಯಾವುದಾದರೂ ದಾಖಲೆಗಳು ಇಲ್ಲದಿದ್ದರೆ ಯಾರೂ ಆತಂಕಪಡುವುದು ಬೇಡ. ಯಾವುದೇ ಸಮಸ್ಯೆ ಇದ್ದರೆ ಆಯಾ ತಾಲೂಕಿನ ತಹಶೀಲ್ದಾರ ನೇತೃತ್ವದಲ್ಲಿ ರಚಿಸಲಾದ ಸಮಿತಿಯನ್ನು ಸಂಪರ್ಕಿಸಲು ರೈತರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸಲಹೆ ನೀಡಿದರು.
ಸಾಲ ಮನ್ನಾ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರಿಂದ ದಾಖಲೆಗಳ ನೋಂದಣಿ ಪ್ರಕ್ರಿಯೆ ಕುರಿತು ಶಿಗ್ಗಾಂವ ತಾಲೂಕು ಹಿರೇಬೆಂಡಿಗೇರಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ರೈತರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಉತ್ತರಿಸಿದರು.
ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಿ ಈಗಾಗಲೇ ಋಣಮುಕ್ತ ಪತ್ರವನ್ನು ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದೇ ಮಾದರಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿದ ಸಾಲಗಳ ಪೈಕಿ ಎರಡು ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಯಡಿ ಜಿಲ್ಲೆಯ 1.10 ಲಕ್ಷಕ್ಕೂ ಹೆಚ್ಚು ರೈತರು ಅರ್ಹರಿದ್ದಾರೆ. ಸಾಲ ಮನ್ನಾಮಾಡಿ ಋಣಮುಕ್ತ ಪತ್ರ ನೀಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಆರಂಭಗೊಳಿಸಿದೆ ಎಂದು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿದ ರೈತರು ಪ್ರ ಪತ್ರ 95ರಲ್ಲಿ ಘೋಷಣಾ ಪತ್ರ ನೀಡಿ ಆಯಾ ಬ್ಯಾಂಕಿನ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬೇಕು. ಸಾಲಾ ಮಾಡಿದ ರೈತನ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಭೂಮಿಯ ಖಾತೆ ಸಂಖ್ಯೆಯನ್ನು ಗಣಕಯಂತ್ರದಲ್ಲಿ ಅಪ್‍ಲೋಡ್‍ಮಾಡಬೇಕು. ಒಂದೊಮ್ಮೆ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇಲ್ಲದಿದ್ದರೆ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಆಹಾರ ವೆಬ್‍ಸೈಟ್‍ನಲ್ಲಿ ಪರಿಶೀಲಿಸಬೇಕು. ಚಾಲ್ತಿಯಲ್ಲಿ ಇಲ್ಲದಿದ್ದರೆ ಹೊಸ ಕಾರ್ಡ್‍ಗಳನ್ನು ನವೀಕರಿಸಿಕೊಳ್ಳಬೇಕು.
ಒಂದೊಮ್ಮೆ ಉತಾರದಲ್ಲಿ ತಮ್ಮ ತಂದೆಯ ಹೆಸರಿದ್ದು ತಂದೆ ರೀತಿ ಹೋಗಿ ಮಗನ ಹೆಸರು ಖಾತೆಯಲ್ಲಿ ಬರದಿದ್ದರೆ ಪೋತಿಮಾಡಿಸಿಕೊಂಡು ತಮ್ಮ ಹೆಸರನ್ನು ಖಾತೆಯಲ್ಲಿ ನಮೂದಿಸಿಕೊಂಡು ದಾಖಲೆಯನ್ನು ನೀಡಬೇಕಾಗುತ್ತದೆ. ಈ ಕುರಿತ ಯಾವುದೇ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ನಮಗೆ ಸಾಲ ಮನ್ನಾ ಯೋಜನೆ ಅನ್ವಯಿಸುವುದಿಲ್ಲ ಎಂಬ ಆತಂಕಬೇಡ. ತಹಶೀಲ್ದಾರ ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಎಲ್ಲ ಸವಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ನಿಮ್ಮೊಂದಿಗಿದೆ. ಶಾಂತ ರೀತಿಯಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಜಿಲ್ಲೆಯ ಪ್ರತಿ ವಾಣಿಜ್ಯ ಬ್ಯಾಂಕಿನಲ್ಲಿ ಆರು ನೂರರಿಂದ ಒಂದು ಸಾವಿರವರೆಗೆ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬರುವ ರೈತರಿದ್ದಾರೆ. ಎಲ್ಲರನ್ನು ಒಮ್ಮೆಲೆ ನೋಂದಾಯಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿದಿನ 40 ಜನರಂತೆ ನೋಂದಾಯಿಸಿಕೊಳ್ಳಲಾಗುವುದು. ಬ್ಯಾಂಕಿನ ದೈನಂದಿನ ಕೆಲಸದ ಜೊತೆಗೆ ನೋಂದಣಿ ಕೆಲಸವು ನಡೆಸಬೇಕಾಗಿರುವುದರಿಂದ ಸಾಲ ಮನ್ನಾ ಸ್ವಯಂ ದೃಢೀಕರಣ ನೀಡಲು ಬ್ಯಾಂಕಿಗೆ ಬರುವ ರೈತರಿಗೆ ಟೋಕನ್ ಸಂಖ್ಯೆಗಳನ್ನು ನೀಡಲಾಗುತ್ತದೆ. ಸಂಖ್ಯೆಯ ಸರದಿಯಂತೆ ಎಲ್ಲರನ್ನೂ ನೋಂದಾಯಿಸಿ ಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತರು ನಿಯಮಿತವಾಗಿ ಬೆಳೆ ಸಾಲ ತುಂಬಿದ ರೈತರಿಗೂ ಸಾಲ ಮನ್ನಾ ಯೋಜನೆಯ ಪೂರ್ಣ ಲಾಭ ದೊರಕುವಂತಾಗಬೇಕು ಎಂದು ಮನವಿ ಮಾಡಿಕೊಂಡರು. ಈ ಕುರಿತ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು, ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ಸಭೆಗೆ ತಿಳಿಸಿದರು.
ಹಿರೇಬೆಂಡಿಗೇರಿ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಸಾಧನಿ ಎಸ್.ಎಸ್. ಅವರು ಮಾಹಿತಿ ನೀಡಿ, ಈ ಬ್ಯಾಂಕಿನ ಶಾಖೆಯಲ್ಲಿ 1167 ರೈತರು ಸಾಲ ಮನ್ನಾ ಯೋಜನೆಗೆ ಒಳಪಡುತ್ತಾರೆ. ಈಗಾಗಲೇ 220 ರೈತರನ್ನು ನೋಂದಾಯಿಸಿಕೊಳ್ಳಲಾಗಿದೆ. ಅಂದಾಜು 18 ಕೋಟಿ ರೂ. ಬೆಳೆಸಾಲವನ್ನು ಈ ಶಾಖೆಯಿಂದ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕದರಪ್ಪ, ನಬಾರ್ಡ್ ಬ್ಯಾಂಕಿನ ಡಿಡಿಎಂ ಹಾಗೂ ಉಸ್ತುವಾರಿ ಅಧಿಕಾರಿ ಮಹದೇವ ಕೀರ್ತಿ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ