ಬೆಂಗಳೂರು
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಶೇಷಾದ್ರಿ ಪುರಂನ ಜೆಡಿಎಸ್ ಪಕ್ಷದ ಕಚೇರಿಯಿಂದ ಆನಂದ ರಾವ್ ವೃತ್ತದ ಗಾಂಧಿ ಪ್ರತಿಮೆ ಮಾರ್ಗದ ಮೂಲಕ ಪ್ರತಿಭಟನೆ ಆರಂಭಿಸಿ ಸ್ವಾತಂತ್ರ್ಯ ಉದ್ಯಾನದವರೆಗೂ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಪ್ರವಾಹ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಮತ್ತು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಅನುದಾನ ಕಡಿತ ಮಾಡಿ ತಾರತಮ್ಯ ಎಸಗಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡರು, ರಸ್ತೆಯುದ್ದಕ್ಕೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಆರಂಭಕ್ಕೂ ಮೊದಲು ಮಾತನಾಡಿದ ಎಚ್.ಡಿ.ದೇವೇಗೌಡ, ಗೌರವಾನ್ವಿತ ಮುಖ್ಯಮಂತ್ರಿಗಳು 36 ಸಾವಿರ ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದರು. ಆದರೆ, 1200 ಕೋಟಿ ಮಾತ್ರ ಕೇಂದ್ರ ನೀಡಿದೆ.ಅಲ್ಲದೆ, ಮೈತ್ರಿ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಸಂಪೂರ್ಣವಾಗಿ ರದ್ದು ಮಾಡಿದ್ದಾರೆ. ಇದು ಹೇಯವಾದ ಕೃತ್ಯ ಎಂದು ವಾಗ್ದಾಳಿ ನಡೆಸಿದರು.
ದಾಳಿ ಖಂಡನೀಯ:
ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಸೇರಿದಂತೆ ಇತರೆ ನಾಯಕರ ಮನೆ ಮೇಲೆ ಐಟಿ ದಾಳಿ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದು ಖಂಡನೀಯ. ಪ್ರಜಾಪ್ರಭುತ್ವದ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು. ವೈ.ಎಸ್.ವಿ.ದತ್ತಾ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ವಿರುದ್ಧ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದು ಜನವಿರೋಧಿಸಿ ಸರ್ಕಾರ ಎಂದು ಈಗಾಗಲೇ ಗೊತ್ತಾಗಿದೆ.
ಹಾಗಾಗಿ, ಕುಮಾರಸ್ವಾಮಿ ಸರ್ಕಾರದ ಅವಶ್ಯಕತೆ ಇದೆ ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮುಖಂಡರಾದ ಬಂಡಪ್ಪ ಕಾಂಶಪೂರ, ಮನಗೂಳಿ, ಸಾ.ರಾ.ಮಹೇಶ್, ಟಿ.ಎ. ಶರವಣ, ಶಿವರಾಮೇಗೌಡ, ಕೋನರೆಡ್ಡಿ, ಪ್ರಕಾಶ್ ಸೇರಿದಂತೆ ಜೆಡಿಎಸ್ ಪದಾಧಿಕಾರಿಗಳು, ನಾಯಕರು ಪಾಲ್ಗೊಂಡಿದ್ದರು. ಬಿಡಿಗಾಸು ಬಿಡುಗಡೆ ಆಗಿಲ್ಲ ರಾಜ್ಯದ ಬಿಜೆಪಿ ಸರ್ಕಾರ ನೆರೆ ಸಂತ್ರಸ್ತರಿಗೆ ಇದುವರೆಗೂ ಒಂದು ಬಿಡುಗಾಸೂ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ನೆರೆ ಹಾವಳಿ ಇದೆ. ಯಾವುದೇ ರೀತಿಯ ನೆರವು ಸಿಕ್ಕಿಲ್ಲ, ಸರಿಯಾದ ಪರಿಹಾರವೂ ದೊರೆತಿಲ್ಲ. ಇದರ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಮನೆ ಕಳೆದುಕೊಂಡವರಿಗೆ ಮನೆ ಕಟ್ಟು ಕೊಡೋದಾಗಿ ಹೇಳಿದ್ದಾರೆ. ಐದು ಲಕ್ಷ ಮನೆ ಕಟ್ಟಲು ಹಣ ನೀಡಲು ಹೇಳಿದ್ದಾರೆ.ಆದರೆ ಈವರೆಗೂ ನೀಡಿಲ್ಲ. ನೆರೆ ಸಂತ್ರಸ್ತರ ಪರವಾಗಿ ನಿಲ್ಲುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಎಚ್ಚರಿಸುವಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
