ಸಾರ್ವಜನಿಕ ಕೆಲಸ ಕಾರ್ಯಗಳು ಅಯೋಮಯ
ಸಂಬಂಧಿಕರಿಗೂ ವಿಶೇಷ ಮರ್ಯಾದೆ
ಸಚಿವರ ಅಧಿಕೃತ ಕಾರ್ಯಕ್ರಮಗಳಿಗಾಗಿ ಸಮಯ ಮೀಸಲಿಡುವುದು ಒಂದು ಕಡೆಯಾದರೆ, ಅವರ ಸಂಬಂಧಿಕರು ಬಂದು ಹೋಗುವ ಸಂದರ್ಭಗಳಲ್ಲಿಯೂ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಸಚಿವರ ಸಂಬಂಧಿಗಳು, ಉನ್ನತ ಮಟ್ಟದ ಅಧಿಕಾರಿಗಳ ಸಂಬಂಧಿಕರು ಹೀಗೆ ಬಂದು ಹೋಗುವವರನ್ನೆಲ್ಲ ನಿಭಾಯಿಸಿ ನೋಡಿಕೊಳ್ಳಬೇಕು. ಬೇರೆ ಬೇರೆ ಸಾಂದರ್ಭಿಕ (ಧಾರ್ಮಿಕ, ಖಾಸಗಿ) ಕಾರಣಗಳಿಂದಾಗಿ ಇವರೆಲ್ಲ ನಗರಕ್ಕೆ ಆಗಮಿಸುವವರಿರುತ್ತಾರೆ.
ಖಾಸಗಿ ಕಾರ್ಯಕ್ರಮಗಳಿಗಾಗಿ ಯಾವುದೋ ಒಂದು ರಿಮೋಟ್ ಏರಿಯಾಕ್ಕೆ ಹೋಗಿ ಬರಬೇಕಿರುತ್ತದೆ. ಸಚಿವರು, ಹಿರಿಯ ಅಧಿಕಾರಿಗಳು, ಅವರ ಸಂಬಂಧಿಕರು ಬಂದು ಹೋಗುವ ತನಕ ಎಲ್ಲ ವ್ಯವಸ್ಥೆಗಳನ್ನು ಅಧಿಕಾರಿ ವರ್ಗವೆ ನೋಡಿಕೊಳ್ಳಬೇಕು. ಕಿಂಚಿತ್ತೂ ತೊಂದರೆಯಾಗದಂತೆ ನಿಗಾವಹಿಸಬೇಕು. ಎಂತಹ ಮೆನು ಸಿದ್ಧಪಡಿಸಬೇಕು ಎಂಬುದರಿಂದ ಹಿಡಿದು ಬಂದು ಹೋಗುವ ಎಲ್ಲ ಖರ್ಚು ವೆಚ್ಚಗಳು ಇವರ ಮೇಲೆಯೆ ಬೀಳುತ್ತವೆ. ಅಕಸ್ಮಾತ್ ಅವರಿಗಿಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಲಿಲ್ಲ ಎಂದಿಟ್ಟುಕೊಳ್ಳಿ, ಅದರ
ಪರಿಣಾಮವನ್ನು ಮುಂದೆ ಎದುರಿಸಬೇಕಾದೀತು !
ಅಧಿಕಾರಿಗಳು ಹೀಗೆ ಸಚಿವರುಗಳಿಗೆ ಹೆದರಿ ಅವರ ಹಿಂದೆ ಓಡಲು, ಕೆಲಸ ಕಾರ್ಯ ಬದಿಗೊತ್ತಿ ಅವರ ಮೋಜುಮಸ್ತಿಗಳಿಗೆ ಮಣೆ ಹಾಕಲು ಕಾರಣವೂ ಇದೆ. ಹುದ್ದೆಯಲ್ಲಿನ ಬಡ್ತಿ, ವರ್ಗಾವಣೆ, ತನ್ನ ಮೇಲೆ ಅವರ ಕೃಪಾ ಕಟಾಕ್ಷ ಇರಲಿ, ವಕ್ರದೃಷ್ಟಿ ಬೀರದಿರಲಿ ಎಂಬುದು ಒಂದು ಕಡೆಯಾದರೆ, ಸಭೆಗಳಲ್ಲಿ ನನ್ನನ್ನು ಟಾರ್ಗೆಟ್ ಮಾಡದಿರಲಿ ಎಂಬುದು ಮತ್ತೊಂದು ಕಾರಣ.
ಟಾರ್ಗೆಟ್ ಭಯ
ಜಿಲ್ಲಾ ಪಂಚಾಯತ್ ಮತ್ತಿತರ ಸಭೆಗಳಲ್ಲಿ ನಡೆಯುವ ಪ್ರಹಸನಗಳನ್ನೇ ಒಂದು ಉದಾಹರಣೆಯನ್ನಾಗಿ ಇಟ್ಟುಕೊಳ್ಳಿ. ಅಲ್ಲಿ ಅಧಿಕಾರಿಗಳ ಮೇಲೆ ರಾಜಕಾರಣಿಗಳು ಹೇಗೆ ಮುಗಿಬೀಳುತ್ತಾರೆ? ಯಾರ ಮೇಲೆ ತಿರುಗಿಬೀಳುತ್ತಾರೆ? ಇದರ ಹಿಂದೆಯೂ ಒಂದೊಂದು ಕಾರಣಗಳು ಇರುತ್ತವೆ. ತನ್ನ ಕೆಲಸ ಮಾಡಿಕೊಡದ ಅಧಿಕಾರಿಯ ಮೇಲೆ ಗರಂ ಆಗುವುದು, ತಾನು ಸಚಿವನಾದ ನಂತರ ಬೊಕ್ಕೆ ಹಿಡಿದು ನನ್ನನ್ನು ಕಾಣಲು ಬರಲೆ ಇಲ್ಲ ಎಂಬುದು, ಚುನಾವಣೆ ಸಂದರ್ಭದಲ್ಲಿ ನನ್ನ ಪರ ಕೆಲಸ ಮಾಡಲಿಲ್ಲ ಎಂಬುದು, ಆ ಸಂದರ್ಭದಲ್ಲಿ ಕಪ್ಪ ಕಾಣಿಕೆ ಸಲ್ಲಲಿಲ್ಲ ಎಂಬುದು ಸೇರಿದಂತೆ ಹಲವು ಹತ್ತು ಕಾರಣಗಳು ಸೇರಿರುತ್ತವೆ. ಇಲಾಖಾ ಪರಿಶೀಲನೆಗಿಂತ ಹೆಚ್ಚಾಗಿ ಯಾರನ್ನಾದರೂ ಟಾರ್ಗೆಟ್ ಮಾಡುವುದಕ್ಕೆ ಸಭೆಗಳು ಸೀಮಿತಗೊಳ್ಳುತ್ತಿವೆ ಎಂದರೆ ಅದರ ಹಿಂದೆ ಇಂತಹ ಕಾರಣಗಳು ಇದ್ದೇ ಇರುತ್ತವೆ ಎಂಬುದು ಅಧಿಕಾರಿಗಳಿಗೂ ಗೊತ್ತು. ಇದರಿಂದಾಗಿಯೆ ಬೇರೆಲ್ಲ ಕಾರ್ಯಗಳನ್ನು ಬದಿಗೊತ್ತಿ ಸಚಿವರಿಗೆ ಹುಜೂರ್ ಎನ್ನುವ ಅಧಿಕಾರಿ ವರ್ಗವೇ ಹೆಚ್ಚು.
ಪ್ರತಿ ಇಲಾಖೆಗಳಲ್ಲಿಯೂ ಆಯಾ ಇಲಾಖಾವಾರು ಮಾಸಿಕ ಸಭೆಗಳು ನಡೆಯುತ್ತವೆ. ತ್ರೈಮಾಸಿಕ ಸಭೆಗಳು ನಡೆಯುತ್ತವೆ. ಈ ಸಭೆಗಳಿಗೆ ಅನುಗುಣವಾಗಿ ವರದಿಗಳು ಸಿದ್ಧಗೊಳ್ಳುತ್ತವೆ. ಅದನ್ನು ಸಭೆಗಳಲ್ಲಿ ಮಂಡಿಸಲಾಗುತ್ತದೆ. ಇವೆಲ್ಲವೂ ಪೂರ್ವ ನಿಯೋಜಿತ. ಸರ್ಕಾರಿ ವ್ಯವಸ್ಥೆಯಲ್ಲಿ ಇದೆಲ್ಲವೂ ಅನೂಚಾನವಾಗಿ ನಡೆದು ಹೋಗುತ್ತದೆ. ಇಲಾಖೆಗಳ ಕಾರ್ಯವೈಖರಿ ಅವರು ಸಿದ್ಧಪಡಿಸಿದ ವರದಿ, ಅದರ ಅನುಷ್ಠಾನವನ್ನು ಅವಲಂಬಿಸಿರುತ್ತದೆ. ಇಲಾಖೆಗಳ ಸಭೆ ನಡೆಸುವಾಗ ಅಧಿಕಾರಿಗಳ ಕಾರ್ಯವೈಖರಿ ಏನೆಂಬುದು ಅರ್ಥವಾಗುತ್ತದೆ.
ಆದರೆ ಕೆಲವೊಮ್ಮೆ ಸಚಿವರುಗಳು ದಿಢೀರ್ ಭೇಟಿ ನೀಡುವ ಸಂದರ್ಭಗಳಿರುತ್ತವೆ. ಉದ್ದೇಶಪೂರ್ವಕವಾಗಿ ಇರಬಹುದು ಅಥವಾ ಬೇರಾವುದೋ ಕಾರ್ಯಕ್ರಮಕ್ಕೆ ಆಗಮಿಸಿದಾಗ ಭೇಟಿ ನೀಡುವ ಪ್ರವೃತ್ತಿ ಇರಬಹುದು. ಜನಪ್ರತಿನಿಧಿಗಳು ಹೀಗೆ ಭೇಟಿ ನೀಡಿ ಇಲಾಖಾ ವಿವರಗಳನ್ನು ಪ್ರಶ್ನಿಸಿದಾಗ ಸಿದ್ಧ ಉತ್ತರ ಎಲ್ಲ ಕಾಲಕ್ಕೂ ಸಿಗಲಾರದು. ಕಚೇರಿ ಕಡತಗಳನ್ನು ಪರಿಶೀಲಿಸಿಯೇ ಉತ್ತರಿಸಬೇಕು. ಒಂದು ವೇಳೆ ದಿಢೀರ್ ಭೇಟಿ ನೀಡಿದ ಸಚಿವರ ಸಮ್ಮುಖದಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗಲಿಲ್ಲ ಎಂದರೆ ಸಚಿವರು ಕಡು ಕೋಪಿಷ್ಟರಾಗಿಬಿಡುತ್ತಾರೆ.
ಅಸಮರ್ಥರೆಂಬ ರೀತಿಯಲ್ಲಿ ಮಾಧ್ಯಮಗಳೂ ಬಿಂಬಿಸುತ್ತವೆ. (ಮಾಧ್ಯಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗಿರುತ್ತಾರೆ.) ಆ ಅಧಿಕಾರಿ ಪ್ರಾಮಾಣಿಕನೇ ಇರಲಿ, ಕರ್ತವ್ಯ ಪ್ರಜ್ಞೆ ಹೊಂದಿದ ಕಾಳಜಿಯ ಅಧಿಕಾರಿಯೇ ಆಗಿರಲಿ, ಆ ಸಂದರ್ಭಕ್ಕೆ ಆತ ತಪ್ಪಿತಸ್ಥನಾಗಿಬಿಡುತ್ತಾನೆ. ಇನ್ನು ಜೀವನ ಪರ್ಯಂತ ಆತ ಮಾನಸಿಕ ತೊಳಲಾಟದಲ್ಲಿ ನರಳುತ್ತಾನೆ.
ಏಜೆಂಟರಂತೆ…
ಕೆಲವು ಇಲಾಖೆಗಳಲ್ಲಿ ಸಚಿವರಿಗೆ ಕೆಲವರು ಆಪ್ತರಾಗಿ ಗುರುತಿಸಿಕೊಳ್ಳುತ್ತಾರೆ. ಸಚಿವರಿಗೂ ಇಂತಹವರೆ ಬೇಕು. ಅಲ್ಲಿನ ಆಗುಹೋಗುಗಳನ್ನು ತಿಳಿದುಕೊಳ್ಳಲು ಅಥವಾ ಇತ್ಯಾದಿಗಳಿಗಾಗಿ ಆ ಇಲಾಖೆಯಲ್ಲಿ ಒಬ್ಬ ಪರಮಾಪ್ತ ಬೇಕಾಗಿರುತ್ತಾನೆ. ಸಚಿವರೊಂದಿಗೆ ಈ ಅಧಿಕಾರಿ ಅಥವಾ ನೌಕರ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಹೋದಂತೆಲ್ಲ ಇಲಾಖೆಯಲ್ಲಿ ಆತನಿಗೆ ಹತ್ತಿರವಾಗುವವರು ಹೆಚ್ಚುತ್ತಾರೆ. ಈತನಿಗೆ ಮಿತ್ರನಾದರೆ ನಾನು ಸೇಫ್ ಎಂಬ ಅರ್ಥವೋ ಅಥವಾ ತನ್ನ ಕೆಲಸ ಕಾರ್ಯಗಳು ಈತನಿಂದ ಸಿದ್ಧಿಸಬಹುದು ಎಂತಲೋ ಅಥವಾ ದೂರು ದುಮ್ಮಾನಗಳು ಹೋಗದಿರಲೆಂದೋ ಆತನನ್ನು ಗೌರವದಿಂದ ಕಾಣತೊಡಗುತ್ತಾರೆ.
ಹೀಗೆ ಏಜೆಂಟನಂತೆ ಕಾರ್ಯನಿರ್ವಹಿಸುವ ಅಧಿಕಾರಿ ಕ್ರಮೇಣ ತನ್ನ ಕಾರ್ಯ ಚೌಕಟ್ಟು ಮೀರುವ ಅಪಾಯವಿರುತ್ತದೆ. ಅಲ್ಲಿ ನಡೆಯುವುದೇ ಒಂದು, ಈತ ವರದಿ ಮಾಡುವುದೇ ಒಂದು… ಇಲಾಖೆಯ ವಿಷಯದಲ್ಲಿ ವಾಸ್ತವವಲ್ಲದ ವರದಿಗಳನ್ನು ನೀಡಿ ಬಚಾವ್ ಆಗುವ ಮತ್ಯಾರನ್ನೋ ಸಿಲುಕಿಸುವ ಪ್ರವೃತ್ತಿ ಹೆಚ್ಚುತ್ತದೆ. ಇದು ಸಾರ್ವಜನಿಕ ಕೆಲಸ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ.
ವಿವಿಧ ಇಲಾಖೆಗಳಲ್ಲಿ ಇಂತಹ ಏಜೆಂಟರುಗಳದ್ದೇ ಒಂದು ದೊಡ್ಡ ಪಡೆ ಸೃಷ್ಟಿಯಾಗುತ್ತದೆ. ಇವರ ಮೂಲಕ ಹೋದರೆ ಕೆಲಸ ಕಾರ್ಯಗಳು ಸಲೀಸು ಎನ್ನುವಂತಹ ಭಾವನೆ ಮೂಡುತ್ತದೆ. ಒಮ್ಮೆ ಸಚಿವರ ಕೃಪಾಕಟಾಕ್ಷಕ್ಕೆ ಒಳಗಾದರೆ ಕಚೇರಿ ಕಾರ್ಯಗಳಿಗೆ ಗೈರಾಗುವುದು, ಇಲಾಖೆಗಳ ಕೆಲಸಗಳು ನೆನೆಗುದಿಗೆ ಬೀಳುವುದು ಹೆಚ್ಚುತ್ತಾ ಹೋಗಿ ರಾಜಕೀಯ ಗುಂಪಿನೊಳಗೆ ಇವರು ಸೇರಿ ಹೋಗುತ್ತಾರೆ.
ಮತ್ತೊಂದು ವಿಶೇಷತೆ ಎಂದರೆ ಯಾರೆಲ್ಲ ರಾಜಕಾರಣಿಗಳಿಗೆ ಹತ್ತಿರವಾಗುತ್ತಾರೋ ಅವರೆಲ್ಲ ಆ ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿಯೇ ಗಿರಕಿ ಹೊಡೆಯುತ್ತಾರೆ. ವರ್ಗಾವಣೆ ಎಂಬುದು ಇವರ ಹತ್ತಿರ ಸುಳಿಯುವುದೇ ಇಲ್ಲ. ಬಹಳಷ್ಟು ವರ್ಷಗಳ ನಂತರ ವರ್ಗಾವಣೆಗೊಂಡ ರೂ ಅದೇ ಜಿಲ್ಲೆಯ ಪಕ್ಕದ ತಾಲ್ಲೂಕಿಗೋ ಅಥವಾ ಬೇರೊಂದು ಡಿಪಾರ್ಟ್‍ಮೆಂಟ್‍ಗೋ ಹಾಕಿಸಿಕೊಂಡು ಅವರ ಋಣ ಇವರು ತೀರಿಸುವ , ಇವರ ಋಣವನ್ನು ಅವರು ತೀರಿಸುವ ಮಟ್ಟಕ್ಕೆ ಇಡೀ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾರೆ. ಪ್ರಾಮಾಣಿಕ ಅಧಿಕಾರಿ, ನೌಕರ ವರ್ಗಾವಣೆಯಾದರೆ ಇಲಾಖೆಯಲ್ಲಿ ಬೇರುಬಿಟ್ಟಿರುವ ನೌಕರ ಅಥವಾ ಅಧಿಕಾರಿ ಅಲ್ಲಿಯೇ ತಳವೂರುವಂತಹ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಳ್ಳುತ್ತಾನೆ. ಇಂತಹವರನ್ನು ಹಿರಿಯ ಅಧಿಕಾರಿಗಳು ಏನೂ ಮಾಡಲಿಕ್ಕಾಗದ ಸ್ಥಿತಿ ನಿರ್ಮಾಣವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
