ತುಮಕೂರು:
ತುಮಕೂರು ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ 2012 ರಿಂದ ಕಾರ್ಯನಿರ್ವಹಿಸುತ್ತಿರುವ ಲೆಕ್ಕ ಸಹಾಯಕರು, ಗ್ರೇಡ್-1 ಕಾರ್ಯದರ್ಶಿ, ಗ್ರೇಡ್-2 ಕಾರ್ಯದರ್ಶಿ, ಪಿಡಿಓ, ಬಿಲ್ ಕಲೆಕ್ಟರ್‌ಗಳು ಬಡ್ತಿಗಾಗಿ ಹಲವಾರು ವರ್ಷಗಳಿಂದ ಕಾಯುತ್ತಲೇ ಬಂದಿದ್ದರೂ ಅವರಿಗೆ ಇನ್ನೂ ಬಡ್ತಿ ಯೋಗ್ಯ ದೊರಕದೇ ಇರುವುದು ಇವರ ಆಸೆಗೆ ತಣ್ಣೀರೆರಚಿದಂತಾಗಿದೆ.
ರಾಜ್ಯ ಸರ್ಕಾರದ ವಿಶೇಷ ರಾಜ್ಯ ಪತ್ರದ ಪ್ರಕಾರ 2 ವರ್ಷಗಳಿಗೆ ಬಡ್ತಿ ನೀಡಲು ಅವಕಾಶ ಇದೆ. ಆದರೆ ತುಮಕೂರು ಜಿಲ್ಲಾ ಪಂಚಾಯತಿ ಅದೇಕೋ 8 ವರ್ಷಗಳಿಂದಲೂ ಬಡ್ತಿ ಭಾಗ್ಯವಿಲ್ಲದೆ ಪರಿತಪಿಸುವಂತಾಗಿದೆ. ಈ ಬಗ್ಗೆ 2015 ರಿಂದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರೂ ಇವರ ಕೋರಿಕೆ ಮಾತ್ರ ಇನ್ನೂ ಈಡೇರಿಲ್ಲ.
ಜಿಲ್ಲೆಯಲ್ಲಿ 341 ಗ್ರಾಮ ಪಂಚಾಯತಿಗಳಿದ್ದು, ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸುಮಾರು 20 ವರ್ಷಗಳಿಂದ ಬಿಲ್ ಕಲೆಕ್ಟರ್, ಲೆಕ್ಕ ಸಹಾಯಕ ಹಾಗೂ ಗ್ರೇಡ್-2 ಕಾರ್ಯದರ್ಶಿಯಾಗಿ ಹಲವು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹವರಿಗೆ ಪ್ರತಿವರ್ಷವೂ ಜೇಷ್ಠತಾ ಪಟ್ಟಿ ತಯಾರಿಸಿ ಪದೋನ್ನತಿ ನೀಡಬೇಕೆಂಬುದು ನಿಯಮ. ಆದರೆ ಜಿ.ಪಂ.ಅಧಿಕಾರಿಗಳು ಇದುವರೆಗೂ ಬಡ್ತಿಯೇ ನೀಡದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಬಡ್ತಿ ಇಲ್ಲದೆಯೇ ಸುಮಾರು 28 ಜನರು ಕೆಲಸದಿಂದ ನಿವೃತ್ತರಾಗಿದ್ದಾರೆ. 45 ರಿಂದ 50 ಜನ ನಿವೃತ್ತಿ ಹಂಚಿನಲ್ಲಿದ್ದಾರೆ. 8 ವರ್ಷಗಳಿಂದ 150 ರಿಂದ 200 ಮಂದಿಗೆ ಬಡ್ತಿ ತಡೆ ಹಿಡಿಯಲಾಗಿದೆ. ಉಲ್ಲೇಖ 1 ರಂತೆ ರಾಜ್ಯ ಸರ್ಕಾರ 3:2ರ ಅನುಪಾತದಲ್ಲಿ ಬಡ್ತಿ ನೀಡಲು ಆದೇಶಿಸಿದೆ. ಉಲ್ಲೇಖ 2 ರಲ್ಲಿ ಸತತ ಮೂರು ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಬಡ್ತಿ ನೀಡಲು ಆದೇಶವಿದೆ. ಉಲ್ಲೇಖ 3,4,5,6,7 ಮತ್ತು 8ರವರೆಗೆ ಪರೀಕ್ಷಾರ್ಥ ಅವಧಿಯನ್ನು ಪೂರೈಸಿದ ಅರ್ಹ ನೌಕರರಿಗೆ ನೀಡಬೇಕು ಎಂದು ಮನವಿ ಕೂಡ ಸಲ್ಲಿಸಿದ್ದರು. ತುಮಕೂರು ಹೊರತುಪಡಿಸಿ ಉಳಿದ 29 ಜಿಲ್ಲೆಗಳಲ್ಲಿಯೂ ಅರ್ಹರಿಗೆ ಬಡ್ತಿ ನೀಡಿ ಮೂರು ವರ್ಷ ಕಳೆದಿವೆ. ಆದರೆ ಜಿಲ್ಲೆಯಲ್ಲಿ ಇದು ಅದೇಕೋ ಜಾರಿಯಾಗಿಲ್ಲ ಎಂಬುದು ಸಿಐಟಿಯು ಮುಖಂಡ ಎನ್.ಕೆ.ಸುಬ್ರಹ್ಮಣ್ಯ ಅವರ ವಾದ.
ಪ್ರತಿವರ್ಷ ಸಿಇಓ ಜಿಲ್ಲಾ ಬಡ್ತಿ ಸಮಿತಿಯ ಸಭೆ ನಡೆಸಬೇಕು. ಆದರೆ ಈ ಸಭೆಯೇ ನಡೆದಿಲ್ಲ. ಯಾರಿಗೆ ಬಡ್ತಿ ನೀಡಬಹುದು, ಇಲಾಖೆಯ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗಿದ್ದಾರೆ ಎನ್ನುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬಹುದು. ಸರ್ಕಾರದ ಅಧಿಸೂಚನೆ, ಬೇರೆ ಜಿಲ್ಲೆಗಳಲ್ಲಿ ಆಗಿರುವ ಕ್ರಮಗಳು ಇತ್ಯಾದಿಯ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದ್ದರೂ ಬಡ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ನೊಂದು ನುಡಿಯುತ್ತಾರೆ ಬಡ್ತಿ ವಂಚಿತ ನೌಕರರು.
ಈ ಬಗ್ಗೆ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಈ ಬಗ್ಗೆ ಕ್ರಮ ವಹಿಸಿಲ್ಲ. ಈ ಅವಧಿಯಲ್ಲಿ ನಾಲ್ಕು ಬಾರಿ ನೇರ ನೇಮಕಾತಿಯಲ್ಲಿ ನೌಕರರು ಕೆಲಸಕ್ಕೆ ಬಂದಿದ್ದಾರೆ. ಅಂದ ಮೇಲೆ ನಮ್ಮ ಹಿರಿತನ ಎಲ್ಲಿಗೆ ಹೋಗುತ್ತದೆ ಎಂದು ಬೇಸರದಿಂದ ನುಡಿಯುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
