ಪೋಷಕರಿಂದ ಕನ್ನಡ ಭಾಷೆ ನಿರ್ಲಕ್ಷ್ಯ

0
11

ಹುಳಿಯಾರು

      ತಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಸಲುವಾಗಿ ಮನೆಯಲ್ಲೂ ಇಂಗ್ಲಿಷ್ ಮಾತನಾಡುವ ಮೂಲಕ ಪೋಷಕರು ಕನ್ನಡ ಭಾಷೆ ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಹಿರಿಯ ಪತ್ರ ಬರಹಗಾರ ಎಚ್.ಎಸ್.ಲಕ್ಷ್ಮೀನರಸಿಂಹಯ್ಯ ಅವರು ಅಭಿಪ್ರಾಯಪಟ್ಟರು.
ಹುಳಿಯಾರಿನ ಡಾ.ರಾಜ್ ಕುಮಾರ್ ಅಭಿಮಾನಿಗಳ ಬಳಗದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

        ಮಕ್ಕಳು ಇಂದು ಏನನ್ನೂ ಕಲಿಯದಿದ್ದರೂ ಪರವಾಗಿಲ್ಲ. ಇಂಗ್ಲಿಷ್ ಭಾಷೆ ಒಂದು ಕಲಿತರೆ ಸಾಕು ಎನ್ನುವ ಮನೋಭಾವದಲ್ಲಿ ಪೋಷಕರಿದ್ದಾರೆ. ಹೀಗಾದರೆ ಮಕ್ಕಳಲ್ಲಿ ಕನ್ನಡಾಭಿಮಾನ ಮೂಡಿಸುವುದಾದರೂ ಹೇಗೆ, ಕನ್ನಡ ಭಾಷೆ ಬೆಳೆದು ಬೆಳಗುವುದಾದರೂ ಹೇಗೆ, ನಾಡಿನ ನೆಲ, ಜಲ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಶಾಲೆಯಲ್ಲಿ ಶಿಕ್ಷಕರು ಕಲಿಸುವ ಇಂಗ್ಲಿಷ್ ಕಲಿತರೂ ಸಾಕು ನಿಮ್ಮ ಮಕ್ಕಳು ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಯುತ್ತಾರೆ. ಭವಿಷ್ಯದಲ್ಲಿ ಇಂಗ್ಲಿಷ್‍ನಲ್ಲಿ ವ್ಯವಹಾರ ಸಹ ಮಾಡುತ್ತಾರೆ. ಈ ಬಗ್ಗೆ ಆತಂಕ ಬಿಟ್ಟು ಮನೆಯಲ್ಲಾದರೂ ಕನ್ನಡ ಭಾಷೆ ಮಾತನಾಡುವ ಮೂಲಕ ಭಾಷಾಭಿಮಾನ ಪ್ರದರ್ಶಿಸಿ ಎಂದರು ಕಿವಿ ಮಾತು ಹೇಳಿದರು.

         ಹಿಂದೆ ಕನ್ನಡ ಪರ ಸಂಘಟನೆಗಳಿಗೆ ಇದ್ದ ಹೋರಾಟದ ಕಿಚ್ಚು ಇಂದಿನ ಸಂಘಟಕರಿಗೆ ಇಲ್ಲದಾಗಿದೆ. ಹಾಗಾಗಿಯೇ ಪಟ್ಟಣ ಪ್ರದೇಶದಲ್ಲಿ ಇಂಗ್ಲಿಷ್ ಬೋರ್ಡ್‍ಗಳು ರಾರಾಜಿಸುತ್ತಿವೆ. ಕನ್ನಡ ಭಾಷೆ, ನೆಲೆ, ಜಲದ ಮೇಲೆ ಆಕ್ರಮಣಗಳು ನಡೆಯುತ್ತಿದೆ. ಸರ್ಕಾರಗಳು ಕನ್ನಡ ಶಾಲೆಗಳನ್ನು ಮುಚ್ಚಿ ಆಂಗ್ಲ ಭಾಷೆ ಶಾಲೆ ತೆರೆಯಲು ಅನುಮತಿ ನೀಡುತ್ತಿದೆ. ಇವುಗಳನ್ನು ತಡೆಯದಿದ್ದರೆ ಕನ್ನಡ ಭಾಷೆಗೆ ಉಳಿಗಾಲವಿಲ್ಲ.

         ಇನ್ನಾದರೂ ಯುವ ಜನತೆ ಜಾಗೃತರಾಗಿ ಕನ್ನಡ ಭಾಷೆ, ನೆಲ, ಜಲ ರಕ್ಷಿಸಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ರಾಜ್ ಕುಮಾರ್ ಸಂಘದ ಅಧ್ಯಕ್ಷ ಪರಪ್ಪ ಅವರು ವಹಿಸಿದ್ದರು. ಉಪಾಧ್ಯಕ್ಷ ಹೊನ್ನಪ್ಪ, ಚಲನಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ, ಬಗರ್ ಹುಕುಂ ಕಮಿಟಿ ಮಾಜಿ ಸದಸ್ಯ ಎಚ್.ಅಶೋಕ್, ಮುಖ್ಯ ಶಿಕ್ಷಕ ಪಿ.ಬಿ.ನಂದವಾಡಗಿ, ರಂಗಭೂಮಿ ಕಲಾವಿದ ರಾಜಣ್ಣ, ಅರ್ಚಕ ರಾಜಣ್ಣ, ರಂಗಸ್ವಾಮಣ್ಣ ಮತ್ತಿತರರು ಇದ್ದರು.

 

LEAVE A REPLY

Please enter your comment!
Please enter your name here