ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಗ್ರಿನ್ ಸಿಗ್ನಲ್ …!!

ತುಮಕೂರು

    ಮೈತ್ರಿ ಸರ್ಕಾರವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ದೋಸ್ತಿ ಮುಖಂಡರುಗಳ ಸಮಾಲೋಚನೆ ಮತ್ತು ಚರ್ಚೆಗಳು ಮುಂದುವರೆದಿದ್ದು, ಸಂಪುಟ ವಿಸ್ತರಣೆಗೆ ದೋಸ್ತಿ ನಾಯಕರು ಮುಂದಾಗಿದ್ದಾರೆ. ಇದಕ್ಕಾಗಿ ಈಗಾಗಲೇ ಹೈಕಮಾಂಡ್‍ನಿಂದ ಗ್ರೀನ್ ಸಿಗ್ನಲ್ ಪಡೆಯಲಾಗಿದೆ.

     ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬ ಈ ಹಿಂದಿನ ಬಿಜೆಪಿಯ ಹೇಳಿಕೆಗಳು, ಆನಂತರದಲ್ಲಿ ಅವರ ನಡವಳಿಕೆಗಳನ್ನು ಸೂಕ್ಷ್ಮವಾಗಿಯೇ ಗಮನಿಸುತ್ತಾ ಬಂದ ದೋಸ್ತಿ ನಾಯಕರು ಸುತಾರಾಂ ಈ ಸರ್ಕಾರ ಅಳಿಯಲು ಬಿಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರು. ಅದರಂತೆಯೇ ನಿರಂತರ ಸಭೆ ಹಾಗೂ ಭೇಟಿಗಳನ್ನು ಮುಂದುವರೆಸಿದ್ದಾರೆ.

    ಈ ನಡುವೆ ಸರ್ಕಾರದ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುತ್ತಾ ಸಂಕಟ ಪರಿಸ್ಥಿತಿಗೆ ಕಾರಣರಾಗಿದ್ದವರು ಒಂದು ಹಂತಕ್ಕೆ ಮೌನವಾಗಿದ್ದಾರೆಂದು ಹೇಳಲಾಗಿದೆ. ಸಂಪುಟ ವಿಸ್ತರಣೆಯ ಮೂಲಕವೇ ಅತೃಪ್ತರನ್ನು ಸಮಾಧಾನಪಡಿಸುವ ಹಾಗೂ ಇದೇ ಹಾದಿಯಲ್ಲಿ ಬಿಜೆಪಿ ಮುಖಂಡರ ಬಾಯಿಗೆ ಬೀಗ ಹಾಕುವ ಕೆಲಸ ಮಾಡಲು ದೋಸ್ತಿ ಮುಖಂಡರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಸರಣಿ ಸಭೆಗಳು ನಡೆಯುತ್ತಾ ಬಂದಿವೆ.

    ಶನಿವಾರದಂದು ರಾತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅದರಂತೆ ಸಂಪುಟ ವಿಸ್ತರಣೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ ಪ್ರಸ್ತುತ ಸಂಪುಟದಲ್ಲಿ ಖಾಲಿ ಇರುವ ಜೆಡಿಎಸ್‍ನ ಎರಡು ಹಾಗೂ ಕಾಂಗ್ರೆಸ್‍ನ ಒಂದು ಸ್ಥಾನದ ಪೈಕಿ ಆರ್.ಶಂಕರ್ ಹಾಗೂ ಎನ್.ನಾಗೇಶ್ ಅವರನ್ನು ಪರಿಗಣಿಸುವ ನಿರ್ಧಾರಕ್ಕೆ ಬರಲಾಗಿದೆ. ಬಾಕಿ ಉಳಿದ ಒಂದು ಸ್ಥಾನವನ್ನು ರಮೇಶ್ ಜಾರಕಿ ಹೊಳಿ ಅವರಿಗೆ ನೀಡುವ ಪ್ರಯತ್ನಗಳು ಮುಂದುವರೆದಿವೆ.

     ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಜಾರಕಿ ಹೊಳಿ ಅವರನ್ನು ಮನವೊಲಿಸಿ ಸಂಪುಟಕ್ಕೆ ಸೇರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದು, ಈ ಪ್ರಯತ್ನ ಯಶಸ್ವಿಯಾಗುವುದಾದರೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಸಿದ್ದರಾಮಯ್ಯ ಕೂಡ ಹೇಳಿದ್ದಾರೆನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಅತೃಪ್ತ ಶಾಸಕರ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿ ಅವರ ಮನವೊಲಿಸುವ ಕಾರ್ಯ ಮುಂದುವರೆಯಲಿದ್ದು, ಒಪ್ಪಿದರೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

    ಒಂದು ವೇಳೆ ಒಪ್ಪದಿದ್ದಲ್ಲಿ ಕಾಂಗ್ರೆಸ್‍ನ ಬಿ.ಸಿ.ಪಾಟೀಲ್ ಅವರನ್ನು ಪರಿಗಣಿಸುವಂತೆ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ. ಆದರೂ ಇವೆಲ್ಲವೂ ಇನ್ನೂ ಪಕ್ಕಾ ಆಗಿಲ್ಲ. ಆದರೆ ಸಂಪುಟ ವಿಸ್ತರಣೆಯಲ್ಲಿ ಪಕ್ಷೇತರರಾದ ಶಂಕರ್ ಹಾಗೂ ನಾಗೇಶ್ ಅವರನ್ನು ಪರಿಗಣಿಸುವುದು ಮಾತ್ರ ಖಚಿತ ಎಂದೇ ಹೇಳಲಾಗುತ್ತಿದೆ.

      ಒಟ್ಟಾರೆ ಬಿಜೆಪಿಯಲ್ಲಿ ಏನೇ ತಂತ್ರಗಾರಿಕೆಗಳು ನಡೆದರೂ ಅದನ್ನು ಮೆಟ್ಟಿ ನಿಲ್ಲುವ ಪ್ರತಿ ತಂತ್ರಗಾರಿಕೆಗೆ ಸ್ವತಃ ಸಿ.ಎಂ.ಕುಮಾರಸ್ವಾಮಿಯೇ ಅಖಾಡಕ್ಕೆ ಇಳಿದಿದ್ದಾರೆ. ಮಾಜಿ ಸಿ.ಎಂ.ಸಿದ್ದರಾಮಯ್ಯ ಕೂಡ ಸ್ಪಂದಿಸಿದ್ದಾರೆ. ಹೀಗಾಗಿ ಭದ್ರಕೋಟೆ ಕಟ್ಟಿಕೊಂಡು ಸರ್ಕಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ. ಸರ್ಕಾರ ಸುಭದ್ರ ಎನ್ನುವ ಮಾಹಿತಿಗಳನ್ನು ಖಚಿತಪಡಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯದ ಕಾರ್ಯಕ್ಕೆ ಆಸಕ್ತಿ ವಹಿಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap