ದಾವಣಗೆರೆ :
ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಬರುವ ಬೆಳೆಗಳನ್ನು ಬೆಳೆಯುವ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳಬೇಕೆಂದು ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿ ಡಾ.ಶರಣಪ್ಪ ವೈಜನಾಥ್ ಹಲಸೆ ಸಲಹೆ ನೀಡಿದರು.
ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ತೋಟಗಾರಿಕೆ ಇಲಾಖೆ ನೇತೃತ್ವದಲ್ಲಿ ನಡೆದ ಮಹಿಳಾ ಕೃಷಿಕ ದಿನಾಚರಣೆ, ವಿಶ್ವ ಆಹಾರ ದಿನಾಚರಣೆ ಹಾಗೂ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಳೆ ಅಭಾವದಿಂದ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ರೈತರು ಸಾಲ ಮಾಡಿ ಬೆಳೆದರೂ ನೀರಿನ ಅಭಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುವುದಿಲ್ಲ. ಆದ್ದರಿಂದ ರೈತರು
ಹನಿ ನೀರಾವರಿ ಪದ್ಧತಿಯ ಮೂಲಕ ಬೆಳೆ ಬೆಳೆಯುವುದು ಸೂಕ್ತವಾಗಿದೆ. ಒಟ್ಟಿನಲ್ಲಿ ರೈತರು ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಯುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು, ವಿಜ್ಞಾನಿಗಳು ನೀರಿನ ಸದ್ಬಳಕೆಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೇ, ಯಾವ ಋತುವಿನಲ್ಲಿ ಎಂಥಹ ಬೆಳೆ ಬೆಳೆಯಬೇಕೆಂಬುದರ ಕುರಿತು ಅರಿವು ಮೂಡಿಸಬೇಕು. ಆಗ ಮಾತ್ರ ಕೃಷಿ ಬಗ್ಗೆ ರೈತರಲ್ಲಿ ಆಸಕ್ತಿ ಮೂಡಲಿದೆ ಎಂದು ಹೇಳಿದರು.
ಹಸಿವು ಮುಕ್ತ ದೇಶ ನಿರ್ಮಾಣದ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿವೆ. ಆದರೆ, ದೇಶಕ್ಕೆ ಆಹಾರ ಭದ್ರತೆ ಕಲ್ಪಿಸುವ ರೈತನಿಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಆದ್ದರಿಂದ ರೈತ ಬೆಳೆಯುವ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತಾಗಬೇಕು. ಆಗ ಮಾತ್ರ ರೈತರ ಸಂಕಷ್ಠ ದೂರವಾಗಲಿದೆ ಎಂದರು.
ಹಲವರು ಮದುವೆ, ಸಭೆ-ಸಮಾರಂಭಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಬಡಿಸಿಕೊಂಡು ವ್ಯರ್ಥ ಮಾಡುತ್ತಾರೆ. ಹೀಗಾಗಿ ದೇಶದಲ್ಲಿ ಆಹಾರದ ಕೊರತೆಯ ಜೊತೆಗೆ ರೈತನ ಶ್ರಮವೂ ನೀರಿನಲ್ಲಿ ಹೋಮ ಮಾಡಿದಂತಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ಅವಶ್ಯಕತೆ ಇರುವಷ್ಟು ಆಹಾರವನ್ನು ಮಾತ್ರ ಬಳಕೆ ಮಾಡಿದರೆ, ಮುಂದಿನ ಪೀಳಿಗೆಗೆ ಆಹಾರದ ಸಮಸ್ಯೆ ತಲೆದೂರುವುದಿಲ್ಲ ಎಂದು ನುಡಿದರು.
ಯಾವುದೇ ಒಂದು ಬೆಳೆ ಬೆಳೆಯಾಬೇಕಾದರೆ ಅದರಲ್ಲಿ ರೈತನ ಪರಿಶ್ರಮ ಎಷ್ಟಿದೆ ಎಂಬುದು, ಆತನಿಗೆ ಮಾತ್ರ ಗೊತ್ತಾಗಲಿದೆ. ಆದರೆ, ಆಹಾರ ವ್ಯರ್ಥ ಮಾಡುವವರಿಗೆ ರೈತನ ಶ್ರಮದ ಬೆಲೆ ಗೊತ್ತಿರುವುದಿಲ್ಲ. ಆದ್ದರಿಂದ ಮುಂದಿನ ಪೀಳಿಗೆಗೆ ಆಹಾರದ ಕೊರತೆ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ಕೆ.ಯತಿರಾಜ್ ಮಾತನಾಡಿ, ಅಣಬೆ ಬೇಸಾಯವು ಉತ್ತಮ ಲಾಭದಾಯಕ ಬೆಳೆಯಾಗಿದೆ. ಆದರೆ, ರೈತರು ಸೇರಿದಂತೆ ಹಲವರಲ್ಲಿ ಅಣಬೆ ಮಾಂಸಹಾರಿ ಪದಾರ್ಥ ಎಂಬ ತಪ್ಪು ತಿಳುವಳಿಕೆ ಇದೆ. ದೇಶ, ವಿದೇಶಗಳಲ್ಲಿ ಅಣಬೆಗೆ ಹೆಚ್ಚು ಬೇಡಿಕೆ ಇದೆ. ಆದರೆ, ಬೇಡಿಕೆಗೆ ತಕ್ಕಂತೆ ಅಣಬೆ ಉತ್ಪಾದನೆ ಆಗುತ್ತಿಲ್ಲ. ಆದ್ದರಿಂದ ರೈತ ಮಹಿಳೆಯರು ಅಣಬೆ ಬೇಸಾಯದ ಮಾಹಿತಿ ಪಡೆದು, ಅಣಬೆ ಕೃಷಿಯಲ್ಲಿ ತೊಡಗಿ ಉತ್ತಮ ಆದಾಯ ಗಲಿಸಬೇಕೆಂದು ಸಲಹೆ ನೀಡಿದರು.
ತಾಲೂಕು ಪಂಚಾಯತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡಿ, ಉತ್ತಮ ವೇತನ, ಭತ್ಯೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯುವ ಸರ್ಕಾರಿ ನೌಕರ ವರ್ಗ ಖುಷಿಯಾಗಿದೆ. ಆದರೆ, ಬೆಲೆ ಸಿಗದ ರೈತರು ಮಾತ್ರ ಕಂಗಾಲಾಗಿದ್ದಾರೆ. ಆದ್ದರಿಂದ ರೈತರ ಆದಾಯ ದುಪ್ಪಟ್ಟು ಮಾಡಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಗೈದಿರುವ ರೈತ ಮಹಿಳೆ ನಿಟ್ಟೂರಿನ ಸರೋಜ ಪಾಟೀಲ್ ಮತ್ತು ಜಿಗಳಿ ಗ್ರಾಮದ ಮಮತಾ ಶಿವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷ ಮರಳುಸಿದ್ದಪ್ಪ, ಎಂ.ಜಿ.ಬಸವನಗೌಡ, ಮಲ್ಲಿಕಾರ್ಜುನ್, ಡಾ.ಜಯದೇವಪ್ಪ ಮತ್ತಿತರರು ಉಪಸ್ಥಿತರಿದ್ದರು. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ದೇವರಾಜ್ ಪ್ರಾಸ್ತಾವಿಕ ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
