ಬೆಂಗಳೂರು
ರಾಷ್ಟ್ರಕವಿ ಕವಿ ಜಿ ಎಸ್ ಶಿವರುದ್ರಪ್ಪ ಅವರಿಗೆ ಭವಿಷ್ಯದ ಹಾಗೂ ಹೊಸ ತಲೆಮಾರಿನ ಬಗ್ಗೆ ಅಪಾರವಾದ ವಿಶ್ವಾಸವಿತ್ತು ಎಂದು ಲೇಖಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಿಳಿಸಿದರು.
ಬೆಂಕಿಯನ್ನು ಬೆಳಕಾಗಿಸುವುದು ಜಿಎಸ್ ಎಸ್ ಅವರ ಪ್ರಧಾನ ಆಶಯವಾಗಿತ್ತು. ಕವಿರಾಜಮಾರ್ಗದಿಂದ ಹಿಡಿದು ಇಂದಿನ ಬರಹಗಾರರವರೆಗೂ ಅವರ ವಿಮರ್ಶೆಯ ಪ್ರಭಾವ ಇದೆ. ಅಷ್ಟೇ ಅಲ್ಲದೆ, ಕನ್ನಡ ಸಾಹಿತ್ಯದ ಬಗೆಗೆ ಜಿ ಎಸ್‍ಎಸ್ ಗೆ ದೀರ್ಘವಾದ ಗುರಿ ಇತ್ತು ಎಂದು ನುಡಿದರು.
ನಗರದಲ್ಲಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆದ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಸಾಹಿತ್ಯದ ಭಿನ್ನ ನೆಲೆಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಸಂವೇಧನಶೀಲ ಮನಸ್ಸುಳ್ಳವರಿಗೆ ಸುತ್ತಮುತ್ತಲು ನಡೆಯುವ ಘಟನೆಗಳು ಕಂಡಾಗಲೆಲ್ಲ ಮಲಕಲುಕಬೇಕು.ಆದರೆ,ನಮ್ಮ ಸಮಾಜದಲ್ಲಿ ಇಂದು ಎಲ್ಲಿ ನೋಡಿದರೂ ದ್ವೇಷ, ಅಸೂಯೆಯ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಳೆದ 4 ತಿಂಗಳುಗಳಲ್ಲಿ ದೇಶದ ಸ್ಥಿತಿ ನೋಡಿದರೆ, ಜಿಎಸ್‍ಎಸ್ ಅವರ ಏರಬಾರದ ಕಡೆ ಏರಿ, ಹೊಲಸೆಬ್ಬಿಸಿದ್ದಾರೆ ಎಂಬ ಕಾವ್ಯ ನೆನಪಾಗುತ್ತದೆ ಎಂದ ಅವರು,
ಇಂದಿನ ಸಂದರ್ಭಕ್ಕೆ ಜಿಎಸ್‍ಎಸ್ ಅವರ ಸಾಹಿತ್ಯ ಅತಿ ಹೆಚ್ಚು ಪ್ರಸ್ತುತವಾಗಿದೆ ಎಂದು ಬಣ್ಣಿಸಿದರು.
ಬಸವರಾಜ ಕಲ್ಗುಡಿ ಮಾತನಾಡಿ, ಜಿಎಸ್ ಎಸ್ ಹಿಂದೆ ನಿಂತು ಹೊಸ ತಲೆಮಾರಿನ ಬರಹಗಾರರನ್ನು ಪ್ರೋರೀತ್ಸಾಹಿಸು ತ್ತಿದ್ದರು ಕಾವ್ಯಗಳ ಹಾಗೂ ಕವಿಗಳ ಕುರಿತು ತಾತ್ವಿಕ ಚಿಂತನೆ ಮಾಡಿ ಮಾದರಿಯನ್ನು ನೀಡಿದ್ದರು ಆಧುನಿಕ ಕಾವ್ಯ ಮೀಮಾಂಸೆಯನ್ನು ತಮ್ಮ ಕಾವ್ಯದ ಬರವಣಿಗೆ ಹಿನ್ನೆಲೆಯಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಂಡಿದ್ದರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
