ಬೆಂಗಳೂರು
ಸೀರೆ ಮಾರುವ ನೆಪದಲ್ಲಿ ಸಂಚರಿಸುತ್ತಾ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಹಗಲು ರಾತ್ರಿ ಬೀಗ ಮುರಿದು ಕಳವು ಮಾಡುತ್ತಿದ್ದ ರಾಜಸ್ತಾನ, ಗುಜರಾತ್ ಮೂವರು ಅಂತರಾಜ್ಯ ಕಳ್ಳರ ಗ್ಯಾಂಗ್‌ನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ದಕ್ಷಿಣ ವಿಭಾಗದ ಪೊಲೀಸರು 32 ಲಕ್ಷ 30 ಸಾವಿರ ಮೌಲ್ಯದ ಚಿನ್ನ, ಬೆಳ್ಳಿ, ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಾಸ್ತಾನದ ಜೋಗಮಲ್ ಪುರೋಹಿತ್ ಆಲಿಯಾಸ್ ಜೋಗರಾಮ್ (22) ರಾಮ್ ಗಿರಿ ಆಲಿಯಾಸ್ ರಾಮ್ (20) ಗುಜರಾತ್‌ನ ವಿಷ್ಣು ಪೂಜಾ ಬಾಯಿ ತರ್ಪದೆ (44) ಬಂಧಿತ ಕಳ್ಳರಾಗಿದ್ದು ಅವರಿಂದ 850 ಗ್ರಾಂ ಚಿನ್ನ, 3 ಕೆ.ಜಿ. 110 ಗ್ರಾಂ ಬೆಳ್ಳಿ, ಹೊಂಡಾ ಆಕ್ಟೀವಾ ಸೇರಿ 32 ಲಕ್ಷ 30 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ಪುಟ್ಟೇನಹಳ್ಳಿಯ 4 ಸುಬ್ರಮಣ್ಯ ಪುರದ 2, ಗಿರಿನಗರ, ಚಂದ್ರಲೇಔಟ್, ಹನುಮಂತನಗರ, ಬನಶಂಕರಿ ತಲಾ ಒಂದು ಸೇರಿ 10 ಹಗಲು ರಾತ್ರಿ ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳು ಬೆಳಗಿನ ವೇಳೆ ಸೀರೆ ಮಾರಾಟ ಮಾಡುತ್ತಾ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೀಗ ಮುರಿದು ಕಳ್ಳತನ ಮಾಡುವುದು ಹಾಗೂ ಸೀರೆ ಕೊಳ್ಳಲು ಬಂದವರು ಒಂಟಿಯಾಗಿದ್ದರೇ ಅಂತವರನ್ನು ಪರಿಚಯ ಮಾಡಿಕೊಂಡು ವಿಶ್ವಾಸಗಳಿಸಿ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದರು.
ಬಾಡಿಗೆಗಿದ್ದ ಮನೆಗಳ ಬಳಿ ಅಕ್ಕಪಕ್ಕದ ನಿವಾಸಿಗಳನ್ನು ಪರಿಚಯ ಮಾಡಿಕೊಂಡು ಅವರ ಮನೆಗೆ ತಾವು ಹೋಗಿ ಊಟದಲ್ಲಿ ನಿದ್ದೆ ಬರುವ ಮಾತ್ರೆಯನ್ನು ಹಾಕಿ ಕಳ್ಳತನ ಮಾಡುತ್ತಿರುವುದು ಪತ್ತೆಯಾಗಿದೆ.ಇತ್ತೀಚೆಗೆ ಪುಟ್ಟೇನಹಳ್ಳಿಯಲ್ಲಿ ಸೀರೆ ಮಾರಾಟ ಮಾಡುವ ವೇಳೆ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರ ಮನೆಗೆ ಹೋಗಿ ನಂಬಿಕೆ ಗಳಿಸಿ ಊಟದಲ್ಲಿ ನಿದ್ದೆ ಮಾತ್ರ ಬೆರೆಸಿ ನೀಡಿ ನಿದ್ದೆ ಮತ್ತಿನಲ್ಲಿದ್ದಾಗ ಅವರ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಆರ್. ಎಸ್.ಚೌಧರಿ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
