ಚಳ್ಳಕೆರೆ
ಪ್ರಸ್ತುತ ಈ ತಿಂಗಳ 18ರಂದು ನಡೆಯುವ ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಡುವಂತೆ ಕ್ಷೇತ್ರದ ಶಾಸಕ, ಲೋಕಸಭೆ ಚುನಾವಣಾ ಜಿಲ್ಲಾ ಉಸ್ತುವಾರಿ ಟಿ.ರಘುಮೂರ್ತಿ ಮನವಿ ಮಾಡಿದರು.
ಅವರು, ಭಾನುವಾರ ಮೀರಸಾಬಿಹಳ್ಳಿ, ರಂಗವ್ವನಹಳ್ಳಿ, ಕರೀಕೆರೆ, ರೆಡ್ಡಿಹಳ್ಳಿ, ವಿಡಪನಕುಂಟೆ, ಬೊಮ್ಮಸಮುದ್ರ, ನಗರಂಗೆರೆ ಮುಂತಾದ ಗ್ರಾಮಗಳಲ್ಲಿ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದರು. ಜಿಲ್ಲೆಯ ಸಂಸದರಾಗಿ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ಧಾರೆ. ಈ ಹಿಂದಿನ ಎಲ್ಲಾ ಸಂಸದರಿಗಿಂತ ಉತ್ತಮ ಸಾಧನೆಯನ್ನು ಮಾಡುವಲ್ಲಿ ಯಶಸ್ಸಿಯಾಗಿದ್ಧಾರೆ.
ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ಧಾರೆ. ಕ್ಷೇತ್ರದ ಮತದಾರರ ಒಲವು ಗಳಿಸಿದ್ದು, ಇದೇ ಮೊದಲ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಎರಡನೇ ಬಾರಿ ಸಂಸದರಾಗಿ ಆಯ್ಕೆ ಮಾಡಿ ತಮ್ಮ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಭದ್ರವಾದ ಕೋಟೆಯಾಗಿದೆ. ಅತಿ ಹೆಚ್ಚು ಮತಗಳು ಎರಡು ಪಕ್ಷಗಳಿಗಿದ್ದು, ಎರಡೂ ಪಕ್ಷಗಳು ಒಬ್ಬರೇ ಅಭ್ಯರ್ಥಿಯಾಗಿ ಬಿ.ಎನ್.ಚಂದ್ರಪ್ಪನವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದು, ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಸೂಚನೆ ಮೇರೆಗೆ ಕಾಂಗ್ರೆಸ್ ಪರವಾಗಿ ಪ್ರಚಾರ ಕೈಗೊಂಡಿದ್ದು, ತಾವೆಲ್ಲರೂ ಚಂದ್ರಪ್ಪನವರ ಆಯ್ಕೆಗೆ ಸಹಕರಿಸುವಂತೆ ಮನವಿ ಮಾಡಿದರು.
ಜೆಡಿಎಸ್ ಮುಖಂಡ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಕಾರ್ಯದಕ್ಷತೆಯನ್ನು ಮನಗಂಡ ನಾನು ರಾಷ್ಟ್ರೀಯಾಧ್ಯಕ್ಷ ದೇವೇಗೌಡ ಮಾರ್ಗದರ್ಶನದಲ್ಲಿ ರಾಜ್ಯದ ಅಭಿವೃದ್ಧಿ ಸಾಧ್ಯವೆಂದು ಮನಗಂಡು ಜೆಡಿಎಸ್ ಸೇರಿದ್ದೇನೆ. ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸರಳ, ಸಜ್ಜನರಾದ ಬಿ.ಎನ್.ಚಂದ್ರಪ್ಪ ಎರಡನೇ ಬಾರಿಗೆ ಸಂಸದರಾಗುವ ಅವಕಾಶವನ್ನು ಪಡೆದಿದ್ಧಾರೆ. ನೀವೆಲ್ಲರೂ ತಮ್ಮ ಅಮೂಲ್ಯ ಮತಗಳನ್ನು ಚಂದ್ರಪ್ಪನವರ ಹಸ್ತದ ಗುರುತಿಗೆ ಚಲಾಯಿಸಬೇಕೆಂದು ಮನವಿ ಮಾಡಿದರು.
ಪ್ರಚಾರ ಕಾರ್ಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ರವಿಕುಮಾರ್, ಹಿರಿಯ ಮುಖಂಡ, ಟಿ.ಪ್ರಭುದೇವ್, ನಗರಂಗೆರೆ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ಬಿ.ಸಿ.ಸತೀಶ್‍ಕುಮಾರ್, ಸದಸ್ಯ ಕುಮಾರ, ಒಬಿಸಿ ಕಾರ್ಯದರ್ಶಿ ಮಂಜುನಾಥ, ಬಿ.ಕೆ.ಗುಜ್ಜಾರಪ್ಪ, ಶೇಖರಪ್ಪ, ನಾಗರಾಜು, ಬಾಬು ಮುಂತಾದವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
