ಹಾನಗಲ್ಲ :
ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ತಾಲೂಕಿನ ಆಡೂರು ಪೊಲೀಸ್ ಅಧಿಕಾರಿಗಳು ಆರೋಪಿಯಿಂದ ಲಕ್ಷಾಂತರ ರೂ ನಗದು ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ತಿಳವಳ್ಳಿ ಗ್ರಾಮದ ಫಯಾಜ್ ಮಟ್ಟೆಣ್ಣನವರ(26) ಎಂಬ ವ್ಯಕ್ತಿಯೇ ಬಂಧಿತ ಆರೋಪಿಯಾಗಿದ್ದಾನೆ. ಇದೇ ಗ್ರಾಮದ ರಜಾಕ್‍ಸಾಬ್ ಅಬ್ದುಲ್‍ರಜಾಕ್ ಯಾದವಾಡ ಎಂಬುವವರ ಮನೆಯಲ್ಲಿ ಹಾಗೂ ಆನವಟ್ಟಿ ಗ್ರಾಮದಲ್ಲಿಯೂ ಮನೆಗಳ್ಳತನ ಮಾಡಿದ್ದ ದೂರು ದಾಖಲಾಗಿತ್ತು. ಈ ದೂರಿನ ಜಾಡು ಹಿಡಿದು ಆಡೂರು ಪೊಲೀಸ್ ಠಾಣೆಯ ಪಿಎಸ್‍ಐ ಟಿ.ಮುರುಗೇಶ್ ಅವರ ನೇತೃತ್ವದ ತಂಡ ಒಂದು ವಾರದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಫಯಾಜ್‍ನಿಂದ 1 ಲಕ್ಷ, 1400ರೂ ನಗದು ಹಣ, 50ಗ್ರಾಂ ಚಿನ್ನ, 70ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ತಿಳವಳ್ಳಿಯ ರಜಾಕ್‍ಸಾಬ ಯಾದವಾಡ ಅವರು ಮಗಳ ಆರತಕ್ಷತೆಗಾಗಿ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ರಾತ್ರಿ 9ರ ಸುಮಾರಿಗೆ ಮನೆಯ ಬಾಗಿಲು ಮುರಿದು ಕಪಾಟಿನಲ್ಲಿದ್ದ ಲಕ್ಷಾಂತರ ಹಣವನ್ನು ದೋಚಿ ಪರಾರಿಯಾಗಿದ್ದನು. ಇದೇ ಆರೋಪಿ ಆನವಟ್ಟಿ ಗ್ರಾಮದ ಬಾಷಾಸಾಬ್ ಅಬ್ದುಲ್‍ಗಫಾರಸಾಬ ಎಂಬುವವರ ಮನೆ ಕಳ್ಳತನದ ದೂರು ದಾಖಲಾಗಿತ್ತು. ಬಾಷಾಸಾಬ್ ಅವರ ಮನೆಯಿಂದ ಕಳ್ಳತನವಾಗಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ತಾನೇ ಕದ್ದಿರುವುದಾಗಿ ಆರೋಪಿ ಫಯಾಜ್ ಒಪ್ಪಿಕೊಂಡಿದ್ದಾನೆ. ಹಾವೇರಿಯಲ್ಲಿ ಇತ್ತೀಚೆಗೆ ಒಂದು ಬೈಕ್ ಕಳ್ಳತನ ಮಾಡಿದ್ದಾಗಿಯೂ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಹಾಗೂ ಡಿವೈಎಸ್‍ಪಿ ಎಲ್.ವೈ.ಶಿರಕೋಳ, ಸಿಪಿಐ ರೇವಪ್ಪ ಕಟ್ಟಿಮನಿ ಅವರ ಮಾರ್ಗದರ್ಶನದಲ್ಲಿ ಆಡೂರ ಪಿಎಸ್‍ಐ ಟಿ.ಮುರುಗೇಶ್ ಹಾಗೂ ಸಿಬ್ಬಂದಿಗಳಾದ ರವಿ ಹರಿಜನ, ಕರಬಸಪ್ಪ ಕರಡಪ್ಪನವರ, ಗಂಗಪ್ಪ, ಬಸಣ್ಣ ಬಿಕ್ಕಣ್ಣನವರ, ಎಸ್.ಜಿ.ಸೋಮಸಾಗರ, ಎನ್.ಎಂ.ಗುಂಡಳ್ಳಿ, ರಾಥೋಡ, ಅಶೋಕ ಕೌಜಲಗಿ, ಆನಂದ ಪಾಟೀಲ, ಬಳ್ಳಾರಿ, ಕೂಸನೂರ ಇತರರು ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ