ಹೆಚ್ಚಿನ ವಹಿವಾಟು ಗೊತ್ತಿದ್ರು ಗಮನಕ್ಕೆ ತರದಿದ್ರೆ ಬ್ಯಾಂಕ್‍ಗಳ ವಿರುದ್ಧ ಆರ್‍ಬಿಐಗೆ ವರದಿ ಸಲ್ಲಿಕೆ: ಡಿಸಿ ರಾಮ್ ಪ್ರಸಾತ್

ಬಳ್ಳಾರಿ:

    ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಈಗಾಗಲೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಬ್ಯಾಂಕ್ ಮ್ಯಾನೇಜರ್‍ಗಳು ತಮ್ಮ ಬ್ಯಾಂಕ್‍ಗಳಲ್ಲಿ ರೂ.1ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದ ವಿವರ ಹಾಗೂ ಒಂದೇ ಖಾತೆಯಿಂದ ಅನುಮಾಸ್ಪದವಾಗಿ ಅನೇಕ ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿರುವುದನ್ನು ಕೂಡಲೇ ಗಮನಕ್ಕೆ ತನ್ನಿ. ಹೆಚ್ಚಿನ ವಹಿವಾಟು ಗೊತ್ತಿದ್ದರೂ ನಮ್ಮ ಗಮನಕ್ಕೆ ತರದಿದ್ದರೇ ಆರ್‍ಬಿಐ ಮತ್ತು ತಮ್ಮ ಕಾರ್ಪೋರೆಟ್ ಆಫೀಸ್‍ಗೆ ದೂರು ಸಲ್ಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.

       ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬ್ಯಾಂಕ್ ಮ್ಯಾನೇಜರ್‍ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      20 ದಿನಗಳ ಕಾಲ ಹೆಚ್ಚಿನ ನಿಗಾವಹಿಸಬೇಕು. ಈ ಕುರಿತು ವರದಿಯನ್ನು ಪ್ರತಿನಿತ್ಯ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತಾವು ನಮಗೆ ಮಾಹಿತಿ ನೀಡಿ ಸಹಕರಿಸಿದಂತೆ ಈ ಬಾರಿಯೂ ಸಹಕರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಪ್ರಜಾಪ್ರತಿನಿಧ್ಯ ಕಾಯ್ದೆ ಅಡಿ ಕ್ರಮಕೈಗೊಳ್ಳಲಾಗುವುದು ಎಚ್ಚರಿಸಿದರು. 

       ಬ್ಯಾಂಕ್ ರಕ್ಷಣೆಗಾಗಿ ಬ್ಯಾಂಕ್‍ಗಳು ಹೊಂದಿರುವ ಶಸ್ತ್ರಾಸ್ತ್ರ ಪರವಾನಿಗೆಯಲ್ಲಿನ ರಿಟೇನರ್‍ಗಳಿಗೆ ಈಗಾಗಲೇ ವಿನಾಯ್ತಿ ನೀಡಲಾಗಿದ್ದು, ಈ ಕುರಿತು ತಾವು ಆತಂಕ ಬೇಡ ಎಂದು ಹೇಳಿದ ಡಿಸಿ ರಾಮ್ ಪ್ರಸಾತ್ ಮನೋಹರ್ ಅವರು, ಸರಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಲ-ಸೌಲಭ್ಯ ಪ್ರಕ್ರಿಯೆಯನ್ನು ಮಾಡಿ;ಆದರೇ ಸಾಲ ನೀಡುವುದನ್ನು ಮಾತ್ರ ಇನ್ನೂ 15 ದಿನಕ್ಕೆ ಮುಂದೂಡಿ ಎಂದು ಹೇಳಿದರು.

      ಈಗಾಗಲೇ ಬ್ಯಾಂಕ್‍ಗಳು ಉಪಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ಅನುಸರಿಸಬೇಕಾದ ಗೈಡ್‍ಲೈನ್ಸ್‍ಗಳನ್ನು ವಿವರಿಸಿದ ಡಿಸಿ ರಾಮ್ ಪ್ರಸಾತ್ ಅವರು, ತಾವು ಸಹ ತಮ್ಮ ಹಂತದಲ್ಲಿಯೇ ಸಭೆಗಳನ್ನು ನಡೆಸಿ ಈ ಕುರಿತು ಸಿಬ್ಬಂದಿಗೆ ತಿಳಿಸುವ ಕೆಲಸ ಮಾಡಿ ಎಂದರು.ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

      ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಗೋಪಾಲಕೃಷ್ಣ, ವೆಚ್ಚದ ನೋಡಲ್ ಅಧಿಕಾರಿ ಚನ್ನಪ್ಪ, ಎಂಸಿಎಂಸಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ, ಚುನಾವಣಾ ತಹಸೀಲ್ದಾರ್ ಹಲೀಮಾ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಬ್ಯಾಂಕ್‍ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap