ಕಾಲ್ಪನಿಕ ವೇತನ ಹಾಗೂ ಪಿಂಚಣಿ ನೀಡಲು ಒತ್ತಾಯ

0
17

ಹೊನ್ನಾಳಿ:

    ನಿವೃತ್ತರಾದ ನಂತರ ನಿವೃತ್ತ ನೌಕರರಿಗೆ ಪ್ರತಿ ತಿಂಗಳೂ ಪಿಂಚಣಿ ಲಭಿಸುವಂತಾಗಬೇಕು. ಇದಕ್ಕಾಗಿ ಶಿಕ್ಷಕರು ಯಾವುದೇ ಹೋರಾಟಕ್ಕೂ ಸಿದ್ಧರಾಗಬೇಕು ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಜಿ. ದೊಡ್ಡಪ್ಪ ಕರೆ ನೀಡಿದರು.

   ತಾಲೂಕಿನ ಕುಂದೂರು ಗ್ರಾಮದ ಬಿಇಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಅನುದಾನಿತ ಶಿಕ್ಷಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

      ಹೋರಾಟದಲ್ಲಿ ಶಕ್ತಿಯಿದೆ ಎಂಬುದನ್ನು ಮಹಾತ್ಮ ಗಾಂಧೀಜಿ ತೋರಿಸಿಕೊಟ್ಟಿದ್ದಾರೆ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡಬೇಕು. ಮುಂದೆ ನಾವು ನಿವೃತ್ತರಾದ ಮೇಲೆ ನಮ್ಮನ್ನು ಅವಲಂಬಿಸಿರುವ ಕುಟುಂಬವು ಬೀದಿಗೆ ಬರುತ್ತದೆ. ಈಗ ತಾಲೂಕಿನಲ್ಲಿ ಮೃತಪಟ್ಟಿರುವ ನಳಂದ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ, ನವ ಸುಮ ಶಾಲೆಯ ಶಿಕ್ಷಕ ಪ್ರಶಾಂತ್ ಅವರ ಕುಟುಂಬಕ್ಕೆ ಪಿಂಚಣಿ ಇಲ್ಲದಂತಾಗಿದ್ದು, ಅವರ ಕುಟುಂಬ ಸಂಕಷ್ಟದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರುವ ಹಲವು ಶಿಕ್ಷಕರಿಗೂ ಯಾವುದೇ ಸೌಲಭ್ಯಗಳು ಇಲ್ಲದ ಸ್ಥಿತಿಯು ನಿರ್ಮಾಣವಾಗಿದೆ ಎಂದು ವಿವರಿಸಿದರು.

      ಸಂಘದ ಅಧ್ಯಕ್ಷ ಎಚ್.ಡಿ. ಧನಂಜಯ್ ಮಾತನಾಡಿ, ಸುಪ್ರೀಂ ಕೋರ್ಟ್ ಸಹ ನಿವೃತ್ತಿಯ ನಂತರ ನೌಕರರಿಗೆ ಪಿಂಚಣಿಯನ್ನು ನೀಡಬೇಕು ಎಂಬ ಆದೇಶ ಮಾಡಿದೆ. ನಾವು ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳು ನಮಗೆ ಕಾಲ್ಪನಿಕ ವೇತನ ಹಾಗೂ ಪಿಂಚಣಿ ನೀಡುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

     ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಂ. ಗಿರೀಶ್, ಬಿಇಎಸ್ ಶಾಲೆಯ ಮುಖ್ಯ ಶಿಕ್ಷಕ ಟಿ.ಎಸ್. ರಾಮಪ್ಪ, ಸಹ ಕಾರ್ಯದರ್ಶಿ ಜೆ. ಮಾರುತಿ, ಉಪಾಧ್ಯಕ್ಷ ಕರೇಗೌಡ ಮಾತನಾಡಿದರು. ಸಭೆಯಲ್ಲಿ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳ ಅನುದಾನಿತ ಶಾಲೆಗಳ ಶಿಕ್ಷಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here