ದಾವಣಗೆರೆ
ಮಹಿಳಾ ಸಮಾನತೆ ಕೇವಲ ಭಾಷಣ ಮತ್ತು ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಎಐಎಂಎಸ್‍ಎಸ್ ರಾಜ್ಯಾಧ್ಯಕ್ಷೆ ಅಪರ್ಣಾ ಬಿ.ಆರ್. ಆರೋಪಿಸಿದ್ದಾರೆ.
ನಗರದ ಜಯದೇವ ವೃತ್ತದ ಬಳಿಯ ನಾಟ್ಯಾಚಾರ್ಯ ಶ್ರೀನಿವಾಸ ಕುಲ್ಕರ್ಣಿ ರಸ್ತೆಯಲ್ಲಿ ಶುಕ್ರವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 72 ವರ್ಷಗಳಲ್ಲಿ ನಮ್ಮನ್ನಾಳಿರುವ ಸರ್ಕಾರಗಳು ಮಹಿಳೆಯರಿಗಾಗಿ ಬೇಟಿ ಬಚಾವೋ, ಬೇಟಿ ಪಡಾವೋ, ಹೆಣ್ಣು ಭ್ರೂಣಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಹಲವು ಘೋಷಣೆಗಳನ್ನು ಕೊಟ್ಟಿವೆ. ಆದರೆ, ಇವೆಲ್ಲವೂ ಬರೀ ಘೋಷಣೆಗೆ ಸೀಮಿತವಾಗಿದ್ದು, ವಾಸ್ತವ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಇನ್ನೂ ಸುಧಾರಣೆಯಾಗಿಲ್ಲ ಎಂದು ಆರೋಪಿಸಿದರು.
ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಎಂಬುದು ದೊಡ್ಡ ಸುಳ್ಳಾಗಿದೆ. ಹೆಣ್ಣುಮಕ್ಕಳು ಸಹ ಶಿಕ್ಷಣ ಪಡೆಯಲು ಸಾವಿರಾರು ರೂ. ಶುಲ್ಕ ಪಾವತಿಸುತ್ತಿದ್ದಾರೆ. ಎಷ್ಟೋ ಹಾಸ್ಟೆಲ್‍ಗಳಲ್ಲಿ ಸೌಲಭ್ಯಗಳಿಲ್ಲ. ಶಾಲಾ-ಕಾಲೇಜಿಗೆ ಹಾಗೂ ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳು ಸುರಕ್ಷಿತವಾಗಿ ಮನೆ ಸೇರುವ ವಾತಾವರಣ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇವಲ ಕಾನೂನುಗಳಿಂದ ಯಾವುದೇ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸಮಾಜದ ಆಲೋಚನೆ ಬದಲಾಗಿ, ಮಹಿಳೆಯರು ಸಹ ಯಾರಿಗೂ ಕಡಿಮೆಯಲ್ಲ ಎಂಬ ಮನೋಭಾವ ಬಂದಾಗ ಮಾತ್ರ, ಹೆಣ್ಣುಮಕ್ಕಳ ಮುಂದಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಅವರು ಪ್ರತಿಪಾದಿಸಿದರು.
ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಭ್ರೂಣಹತ್ಯೆ, ಬಾಲ್ಯ ವಿವಾಹ, ಲಿಂಗ ತಾರತಮ್ಯ, ದೇವದಾಸಿ ಪದ್ದತಿ ಸೇರಿದಂತೆ ಹಲವು ತರತಮಗಳಿವೆ. ಈ ತಾರತಮ್ಯಗಳನ್ನು ಹೋಗಲಾಡಿಸಬೇಕು ಹಾಗೂ ಮಹಿಳೆಯರ ಪರಿಸ್ಥಿತಿ ಸುಧಾರಿಸುವಂತೆ ಮಾಡಬೇಕೆಂದು ಹಲವು ಮಹನೀಯರು ಹೋರಾಟಗಳನ್ನು ನಡೆಸಿದ್ದಾರೆ. ಆದರೆ, ಈ ಹೋರಾಟ ಮುಂದುವರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾತಂತ್ರ ವ್ಯವಸ್ಥೆ ಎಂದರೆ, ಎಲ್ಲಾ ಮನುಷ್ಯರು ಸಮಾನರು. ಹೀಗಾಗಿ ಸಮಾಜದಲ್ಲಿ ಯಾವುದೇ ತಾರತಮ್ಯ ಇರಕೂಡದು. ಇಂತಹ ಪ್ರಜಾಸತ್ತಾತ್ಮಕ ರಾಷ್ಟ್ರ ನಿರ್ಮಾಣವಾಗಬೇದರೆ, ಸಮಾಜದಲ್ಲಿರುವ ಎಲ್ಲಾ ರೀತಿಯ ಭೇದಭಾವಗಳು ತೊಲಗಬೇಕೆಂದು ಹೇಳಿದ ಅವರು, ಲಿಂಗತಾರತಮ್ಯ ಹೋಗುವ ವರೆಗೂ ನಮ್ಮ ದೇಶದಲ್ಲಿ ಮಹಿಳೆಯರ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದರು.
ಪುರುಷರಿಗಿಂತ ಮಹಿಳೆಯರು ಕೀಳು ಎಂಬುದು ಒಂದು ಮೌಢ್ಯವಾಗಿದೆ. ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಸಹ ಬೇಕಾದಷ್ಟನ್ನು ಸಾಧಿಸಿ ತೋರಿಸಿದ್ದಾರೆ. ಆದರೆ, ಸಂಖ್ಯೆ ಬೆರಳೆಣಿಕೆಯಷ್ಟಿದೆ. ಇವರೆಲ್ಲರ ಸಾಧನೆಯು ಹೆಣ್ಣುಮಕ್ಕಳು ಸಹ ಗಂಡುಮಕ್ಕಳಂತೆ ಸಾಧಿಸಬಲ್ಲರೂ ಎಂಬುದಕ್ಕೆ ತಾಜಾ ಉದಾಹರಣೆಗಳಾಗಿದ್ದು, ಹೆಣ್ಣು ಮಕ್ಕಳಿಗೆ ಅವಕಾಶ ಸಿಕ್ಕರೇ, ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಲ್ಲ ಎಂಬುದನ್ನು ಸಾಧಿಸಿ ತೋರಿಸಲಿದ್ದಾರೆ ಎಂದರು.
ಮಹಿಳೆಯರನ್ನೂ ಯಾರೂ ಸಹ ಭೋಗದ ವಸ್ತುವನ್ನಾಗಿ ನೋಡಬೇಕಾಗಿಲ್ಲ. ಸುಂದರಿಯರನ್ನಾಗಿ, ವಿಶ್ವ ಸುಂದರಿಯರನ್ನಾಗಿ ಕಾಣಬೇಕಿಲ್ಲ. ಬದಲಿಗೆ ಮಹಿಳೆ ಗೌರವಯುತವಾಗಿ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಕೊಡಬೇಕು ಹಾಗೂ ಆರ್ಥಿಕವಾಗಿ ಸಬಲಳಾಗಲು ಉದ್ಯೋಗದ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಮಹಿಳೆಯರು ಎಲ್ಲಿಯ ವರೆಗೆ ಗೃಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೋ, ಅಲ್ಲಿಯ ವರೆಗೂ ಸ್ತ್ರೀಯರ ವಿಮೋಚನೆ ಸಾಧ್ಯವಿಲ್ಲ. ಹೀಗಾಗಿ ಅಡುಗೆ ಮನೆಯಿಂದ ಹೊರಬರಬೇಕು ಹಾಗೂ ಮಹಿಳೆಯರ ಮುಂದಿರುವ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಎವಿಕೆ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ.ಅನುರಾಧ ಪಿ.ಎಂ. ಮಾತನಾಡಿ, ಮಹಿಳೆಯರು ಮೊದಲು ಮನೆಯಿಂದ ಗೌರವ ಸಿಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ಬರೀ ಬಡ ಮತ್ತು ಮಧ್ಯಮ ವರ್ಗಗಳ ಮನೆಗಳಲ್ಲಿ ಮಾತ್ರ ಮಹಿಳಾ ಶೋಷಣೆ ನಡೆಯುತ್ತಿಲ್ಲ. ದೊಡ್ಡ, ದೊಡ್ಡ ಶ್ರೀಮಂತರ ಕುಟುಂಬಗಳಲ್ಲೂ ಸಹ ಮಹಿಳಾ ಶೋಷಣೆ ನಡೆಯುತ್ತಿದೆ ಎಂದರು.
ಎಐಎಂಎಸ್‍ಎಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕುವಾಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕುವಾಡ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.ಈ ವೇಳೆಯಲ್ಲಿ ಅಂಕುರ ಸಾಂಸ್ಕೃತಿಕ ವೇದಿಕೆಯ ಕಲಾವಿದರು ಕ್ರಾಂತಿಗೀತೆಗಳನ್ನು ಹಾಡಿದರು. ನವಭಾರತ ನಾಟಕವನ್ನು ಯುವಜನ ಸಾಂಸ್ಕೃತಿಕ ವೇದಿಕೆ, ಸ್ತ್ರೀ ಎಂದರೆ ಅಷ್ಟೇ ಸಾಕೇ? ನೃತ್ಯ ರೂಪಕವನ್ನು ಸೃಜನ ಸಾಂಸ್ಕೃತಿಕ ವೇದಿಕೆ ಹಾಗೂ ಬದುಕಿ ಬದುಕಲು ಬಿಡಿ ನಾಟಕವನ್ನು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಕಲಾವಿದರು ಪ್ರಸ್ತುತ ಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
