ನಿರುದ್ಯೋಗಿಗಳಿಗೆ ಭರವಸೆಯ ಬೆಳಕು ನೀಡಿದ ಉದ್ಯೋಗ ಮೇಳ

ಕೊಟ್ಟೂರು
 
       “ಉದ್ಯೋಗಾವಕಾಶ ಇಲ್ಲದೆ ಗ್ರಾಮೀಣ ಯುವಶಕ್ತಿ ವ್ಯರ್ಥವಾಗುತ್ತಿದೆ. ನಿರುದ್ಯೋಗಿಗಳು ಉದ್ಯೋಗ ಪಡೆಯಲು ಉದ್ಯೋಗ ಮೇಳ ಸಹಕಾರಿಯಾಗಿದೆ” ಎಂದು ಬಳ್ಳಾರಿ ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷರಾದ ಎನ್. ಮರಿಸ್ವಾಮಿರೆಡ್ಡಿಯವರು ತಿಳಿಸಿದರು. 
            ಬಳ್ಳಾರಿ ಜಿಲ್ಲಾ ಕೊಟ್ಟೂರಿನ ಇಂದು ಸಿ.ಬಿ.ಎಸ್.ಇ. ಶಾಲೆಯಲ್ಲಿ ಭಾನುವಾರ ನಡೆದ ಬಳ್ಳಾರಿ ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಕೊಟ್ಟೂರು ತಾಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉದ್ಯೋಗ ಮೇಳವನ್ನು ಗಿಡವೊಂದಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡಿದರೆ, ಇಡೀ ಕುಟುಂಬಕ್ಕೆ ನೆರವಾದಂತೆ. ಈ ಹಿನ್ನೆಲೆಯಲ್ಲಿ ಅರ್ಹ ಹಾಗೂ ಆಸಕ್ತ ಯುವಜನತೆಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.
 
         ಕೊಟ್ಟೂರು ತಾಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ  ಕಾರ್ಯದರ್ಶಿಗಳಾದ ಹೆಚ್.ಎನ್. ವೀರಭದ್ರಪ್ಪ ಇವರು ಮಾತನಾಡಿ ರಾಜ್ಯದ ವಿವಿಧೆಡೆಗಳಲ್ಲಿ ನಿರಂತರ ಬರಗಾಲದಿಂದಾಗಿ ಯುವ ಸಮುದಾಯ ಕೃಷಿ ಚಟುವಟಿಕೆಗಳನ್ನು ಅವಲಂಬಿಸಲು ಸಾಧ್ಯವಾಗದೆ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಖಾಸಗಿ ಅನುದಾನರಹಿತ ಶಾಲಾ ಮಂಡಳಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ನೀಡುವುದರಿಂದ ಯುವ ಸಮುದಾಯಕ್ಕೆ ಸಹಕಾರಿಯಾಗಲಿದೆ. ಉದ್ಯೋಗ ಮೇಳದಲ್ಲಿ 63 ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳು ಹಾಗೂ 400ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿರುವುದಾಗಿ ತಿಳಿಸಿದರು.
        ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ಚಂದ್ರಶೇಖರ್, ಅಧ್ಯಕ್ಷತೆಯನ್ನು ಎನ್. ಮರಿಸ್ವಾಮಿರೆಡ್ಡಿ ವಹಿಸಿಕೊಂಡಿದ್ದು ಕೊಟ್ಟೂರು ತಾಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು ವೇದಿಕೆ ಮೇಲೆ ಹಾಜರಿದ್ದರು. ಹೆಚ್.ಎನ್. ವೀರಭದ್ರಿ ನಿರೂಪಿಸಿದರು. ವಿದ್ಯಾರ್ಥಿನಿ ಮಧು ಪ್ರಾರ್ಥಿಸಿದರು, ಉಪನ್ಯಾಸಕರಾದ ವೀರೇಶ್ ಸ್ವಾಗತಿಸಿದರು, ಸಂತೋಷ್ ವಂದಿಸಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link