ದಾವಣಗೆರೆ:
ಅತ್ತೆ-ಮಾವ ಇಲ್ಲದ ಮನೆಗೆ ಮಗಳನ್ನು ಕೊಡುವ ಮನೋಭಾವ ಇರುವುದರಿಂದ ಹಾಗೂ ಮಕ್ಕಳು ತಂದೆ-ತಾಯಿಗಳನ್ನು ದೂರ ಮಾಡಿ ಬದಕಲು ನಿರ್ಧರಿಸಿರುವುದರಿಂದ ಅವಿಭಕ್ತ ಕುಟುಂಬಗಳು ಒಡೆದು, ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಆವರಗೊಳ್ಳ ಗ್ರಾಮದಲ್ಲಿ ಲಿಂ.ವೀರಗಂಗಾಧರ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ, ಶ್ರೀ ವಿಷಮರ್ಧನ ಸಂಜೀವಿನಿ ಗದ್ದುಗೆಯ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ, ಶಿವದೀಕ್ಷಾ, ಕಾರ್ತೀಕ ದೀಪೋತ್ಸವ, ಧನುರ್ಮಾಸದ ಪೂಜಾ ಅನುಷ್ಠಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಅತ್ತೆ-ಮಾವ ಇಲ್ಲದ ಮನೆಗೆ ತಮ್ಮ ಹೆಣ್ಣುಮಕ್ಕಳನ್ನು ಕೊಡಲು ತಂದೆ-ತಾಯಿಗಳು ಬಯಸುತ್ತಿದ್ದಾರೆ. ಮದುವೆಯಾಗುವ ಯುವಕರು ಸಹ ತಂದೆ-ತಾಯಿಯಿಂದ ದೂರ ಇರಲು ಬಯಸುತ್ತಾರೆ. ಹೀಗಾಗಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ ಎಂದರು.
ಮನುಷ್ಯ ಮೌಲ್ಯಾಧಾರಿತ ಜೀವನ ನಡೆಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಸಂಸ್ಕಾರ ರಹಿತವಾದ ಜೀವನ ಮನುಷ್ಯನಿಗೆ ನೆಮ್ಮದಿಯನ್ನು ತಂದುಕೊಡುವುದಿಲ್ಲ. ಸಂಸ್ಕಾರದಿಂದ ಮಾತ್ರ ಮನುಷ್ಯನಿಗೆ ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿಯನ್ನು ತಂದುಕೊಡುತ್ತದೆ ಎಂದು ಹೇಳಿದರು.
ರಾಮಘಟ್ಟದ ಶ್ರೀರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನಲ್ಲಿರುವ ಅತಿ ಆಸೆಯಿಂದಾಗಿ ಸಾಮಾಜಿಕ ಬದುಕು ಮರೀಚಿಕೆಯಾಗಿದೆ. ನವದಂಪತಿಗಳು ತಮ್ಮ ಜೀವನದಲ್ಲಿ ಪ್ರೀತಿ-ವಾತ್ಸಲ್ಯದಿಂದ ಬದುಕಿದರೆ, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.
ರಾಮಲಿಂಗೇಶ್ವರ ಮಠದ ಶ್ರೀವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಡೇ ನಂದಿಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
