ಕಾಲ ಕ್ರಮೇಣ ಮೂಲೆಗುಂಪಾಗುತ್ತಿರುವ ಭಜನೆ

ದಾವಣಗೆರೆ:

       ಬದಲಾದ ಕಾಲಘಟ್ಟದಲ್ಲಿ ದೇವರ ನಾಮಸ್ಮರಣೆಯ ಅಸ್ತ್ರವಾಗಿದ್ದ ಭಜನೆಯು ಕಾಲ ಕ್ರಮೇಣ ಮೂಲೆಗುಂಪಾಗಿದೆ ಎಂದು ಸಾಣೇಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

       ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ರಾಜ್ಯ ಮಟ್ಟದ ಕನ್ನಡ ಭಜನೆ ಸ್ಪರ್ಧೆ ಸಮಿತಿಯ ಬೆಳ್ಳಿಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಕನ್ನಡ ಭಜನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ನಮ್ಮ ಆತ್ಮಸಾಕ್ಷಾತ್ಕಾರಕ್ಕಾಗಿ ಮಾಡಲಾಗುತ್ತಿದ್ದ ದೇವರ ನಾಮಸ್ಮರಣೆಯ ಭಜನೆಗಳು ಬದಲಾದ ಕಾಲಘಟ್ಟದ ಹಿನ್ನಲೆಯಲ್ಲಿ ಮೂಲೆಗುಂಪಾಗುತ್ತಿವೆ. ಭಜನೆಯಲ್ಲಿ ಬಳಸುತ್ತಿದ್ದ ವಾದ್ಯಗಳು ಸಹ ಕಣ್ಮರೆಯಾಗಿವೆ ಎಂದು ಆರೋಪಿಸಿದರು.ಭಜನೆಗೆ ತನ್ನದೇಯಾದ ಮಹತ್ವ, ರೋಚಕತೆ ಇರುತ್ತದೆ. ಭಜನೆಯಲ್ಲಿ ಸಿಗುವ ಖುಷಿ ಟಿವಿ ನೋಡುವುದರಲ್ಲಿ ಸಿಗುವುದಿಲ್ಲ. ಮನುಷ್ಯ ಸಾಕಷ್ಟು ಮುಂದೆ ಸಾಗುತ್ತಿದ್ದಂತೆ, ತನ್ನಲ್ಲಿಯ ಮಾನವೀಯತೆ ಹಾಗೂ ಅಂತಃಕರಣವನ್ನು ಕಳೆದುಕೊಳ್ಳುತ್ತಿದ್ದಾನೆ. ಸಿರಿಗೆರೆಯಲ್ಲಿ ಹಲವು ವರ್ಷಗಳಿಂದ ಭಜನೆ, ವೀರಗಾಸೆ, ಸೊಭಾನೆ ಪದಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಆದರೆ ಇತ್ತೀಚೆಗಷ್ಟೇ ನಡೆಯಬೇಕಾಗಿದ್ದ ವೀರಗಾಸೆ ಸ್ಪರ್ಧೆಗೆ ಒಂದು ತಂಡವು ಬರಲಿಲ್ಲ ಎಂದರು.

        ಭಜನೆ ಭಗವಂತನ ಧ್ಯಾನದ ಸಂಕೇತವಾಗಿದೆ. ಇದು ಪ್ರದರ್ಶನ ಮತ್ತು ಆತ್ಮ ದರ್ಶನವು ಹೌದು. ಈ ಹಿಂದೆ ಗ್ರಾಮಗಳಲ್ಲಿ ಸಂಜೆ ಹಿರಿಯರು, ಕಿರಿಯರು ಸೇರಿಕೊಂಡು ಭಜನೆ ಮಾಡುತ್ತಿದ್ದರು. ಇದನ್ನು ಕೇಳಿಸಿಕೊಳ್ಳುವುದಕ್ಕೂ ಸಾಕಷ್ಟು ಜನರು ಸೇರುತ್ತಿದ್ದರು. ಅಷ್ಟೊಂದು ಸಾಮಥ್ರ್ಯ ಭಜನೆಗಿತ್ತು. ಆದರೆ ಈಗ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಇಸ್ಪೀಟ್ ಆಡುವುದೇ ಭಜನೆ ಮಾಡುವುದು ಎಂಬಂತಾಗಿದೆ ಎಂದು ವಿಷಾಧಿಸಿದರು.

       ಯರಗುಂಟೆಯ ಶ್ರೀಪರಮೇಶ್ವರ ಸ್ವಾಮೀಜಿ ಮಾತನಾಡಿ, ಸಂಗೀತದಲ್ಲಿ ಶ್ರೇಷ್ಠತೆ ಇದೆ. ಇದರಿಂದ ಖುಷಿಯೂ ಸಿಗಲಿದೆ. ಡಾಕ್ಟರಿಗೂ ಮಿಗಿಲಾಗಿ ರೋಗವನ್ನು ನಿವಾರಿಸುವ ಶಕ್ತಿ ಸಂಗೀತದಲ್ಲಿ ಕಾಣಬಹುದು. ಸಂಗೀತಕ್ಕೆ ಎಂದಿಗೂ ಸಾವಿಲ್ಲ ಎಂದರು.

         ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ದಾವಣಗೆರೆಯ ಬನ್ನಿ ಮಹಾಂಕಾಳಿ ಭಜನಾ ಸಂಘ, ಬಹದ್ದೂರಘಟ್ಟ ಮಾರುತಿ ಭಜನಾ ಸಂಘ, ಗೌರ ಸಮುದ್ರ ಆಂಜನೇಯ ಸ್ವಾಮಿ ಭಜನಾ ಸಂಘ, ಲೋಕಿಕೆರೆ ಕನಕದಾಸ ಭಜನಾ ಮಂಡಳಿ, ರಾಮಗಿರಿ ಸ್ವರ್ಣಗೌರಿ ಭಜನಾ ಮಂಡಳಿ, ಕಿತ್ತೂರು ಬಸವೇಶ್ವರ ಭಜನಾ ಮಂಡಳಿ, ರಾಮಘಟ್ಟ ರೇವಣಸಿದ್ದೇಶ್ವರ ಭಜನಾ ಸಂಘ, ಹೆಮ್ಮನಬೇತೂರು ಆಂಜನೇಯ ಭಜನಾ ಸಂಘ, ಸೋಗಿ ವೀರೇಶ್ವರ ಭಜನಾ ಮಂಡಳಿ, ದಾವಣಗೆರೆ ವಾಸವಿ ಯುವತಿಯರ ಭಜನಾ ಸಂಘ, ಸಿದ್ದಯ್ಯನಕೋಟೆ ಮಾರುತಿ ಯುವಕರ ಸಂಘ, ಹೊಸಬೆಳವನೂರು ಸರ್ವಜ್ಞ ಭಜನಾ ಮಂಡಳಿ, ಚಿಕ್ಕಮೇಗಳಗೇರೆ ಗುರು ರೇವಣಸಿದ್ದೇಶ್ವರ ಭಜನಾ ಸಂಘ, ದಾವಣಗೆರೆ ಸುಶ್ರಾವ್ಯ ಭಜನಾ ತಂಡ, ದಾವಣಗೆರೆ ಮರಳಸಿದ್ದೇಶ್ವರ ಭಜನಾ ತಂಡ, ದಾವಣಗೆರೆ ಸಾಯಿ ವಚನಾಮೃತ ಭಜನಾತಂಡ, ವಿದ್ಯಾನಗರ ಈಶ್ವರ ಪಾರ್ವತಿ ಗಣಪತಿ ಮಹಿಳಾ ಭಜನಾ ತಂಡ ಸೇರಿದಂತೆ 86 ತಂಡಗಳು ಭಾಗವಹಿಸಿದ್ದವು

        ಕಾರ್ಯಕ್ರಮದಲ್ಲಿ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ದಾವಣಗೆರೆ ವಿವಿ ಕುಲಪತಿ .ಎಸ್.ವಿ.ಹಲಸೆ, ಭಜನಾ ಸ್ಪರ್ಧೆ ಸಮಿತಿ ಅಧ್ಯಕ್ಷ ಡಿ.ಕೆ.ಸದಾನಂದಪ್ಪ ಕುಕ್ಕುವಾಡ, ಉಪಾಧ್ಯಕ್ಷ ಕೆಂಚನಗೌಡರು ಕೆ.ಉಚ್ಚಂಗಿದುರ್ಗ, ಕೆ.ನಾಗಪ್ಪ, ಕಾರ್ಯದರ್ಶಿ ಮಂಜಪ್ಪ ಸಿ. ಸಿರಿಗೆರೆ, ಜಂಟಿ ಕಾರ್ಯದರ್ಶಿ ಎಂ.ಸಿದ್ದಪ್ಪ, ಸಂಘಟನಾ ಕಾರ್ಯದರ್ಶಿ ಎ.ಕೊಟ್ರಪ್ಪ ಕಿತ್ತೂರು ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap