ನ್ಯಾಯಾಲಯದಲ್ಲಿ 4ನೇ ಶನಿವಾರ ರಜೆ ಮುಂದುವರೆಸಲು ಆಗ್ರಹ..!

ಬೆಂಗಳೂರು

    ರಾಜ್ಯದ ಉಚ್ಛ ನ್ಯಾಯಾಲಯ ಸೇರಿದಂತೆ ಎಲ್ಲ ಅಧೀನ ನ್ಯಾಯಾಲಯಗಳು ಮತ್ತು ನ್ಯಾಯಾಂಗ ಇಲಾಖೆಗೆ ಪ್ರತಿ ತಿಂಗಳ 4ನೇ ಶನಿವಾರದ ಸಾರ್ವತ್ರಿಕ ರಜೆಯನ್ನು ಮೊದಲಿನಂತೆ ಮುಂದುವರೆಸುವಂತೆ ಬೆಂಗಳೂರು ವಕೀಲರ ಸಂಘ ಒತ್ತಾಯಿಸಿದೆ.

   ಉಚ್ಛ ನ್ಯಾಯಾಲಯ ಸೇರಿದಂತೆ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ 4ನೇ ಶನಿವಾರವನ್ನು ಸಾರ್ವತ್ರಿಕ ರಜೆಯನ್ನು ರದ್ದು ಮಾಡಿರುವುದಕ್ಕೆ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.ಬೆಂಗಳೂರು ನಗರ ವಕೀಲರ ಸಂಘದ ಸಭೆಯಲ್ಲಿ ನ್ಯಾಯಾಲಯಗಳಿಗೂ ಮೊದಲಿದ್ದಂತೆ ಪ್ರತಿ ತಿಂಗಳ 4ನೇ ಶನಿವಾರವನ್ನು ರಜಾ ದಿನವಾಗಿ ಘೋಷಿಸುವಂತೆ ನಿರ್ಣಯ ಕೈಗೊಳ್ಳಲಾಗಿದ್ದು, ಈ ಸಂಬಂಧ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ರಂಗನಾಥ್ ತಿಳಿಸಿದ್ದಾರೆ.

   ವಕೀಲರ ಸಂಘದ ಮನವಿಯನ್ನು ಪರಿಗಣಿಸಿ 4ನೇ ಶನಿವಾರವನ್ನು ರಜೆ ದಿನವಾಗಿ ಇನ್ನು 15 ದಿನದಲ್ಲಿ ಘೋಷಣೆ ಮಾಡದಿದ್ದರೆ ಜ. 11 ರಂದು ನಡೆಯುವ ಬೃಹತ್ ಲೋಕ್‌ಅದಾಲತ್‌ನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ವಕೀಲರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.ಸರ್ಕಾರ ವಕೀಲರ ಬೇಡಿಕೆ ಈಡೇರಿಸದಿದ್ದರೆ ಜ. 25 ರಂದು ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ವಕೀಲರು ನೀಡಿದ್ದಾರೆ.

     ಸಮ್ಮಿಶ್ರ ಸರ್ಕಾರಾವಧಿಯಲ್ಲಿ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ 4ನೇ ಶನಿವಾರವನ್ನು ಸಾರ್ವತ್ರಿಕ ರಜೆ ದಿನವಾಗಿ ಘೋಷಿಸಲಾಗಿದ್ದು, ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಿ. 12 ರಂದು ಆದೇಶ ಹೊರಡಿಸಿ, ಕರ್ನಾಟಕ ಉಚ್ಛ ನ್ಯಾಯಾಲಯ, ರಾಜ್ಯದ ಎಲ್ಲ ಅಧೀನ ನ್ಯಾಯಾಲಯ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು, ಸರ್ಕಾರಿ ವಕೀಲರು ಮತ್ತು ಸದರಿ ನ್ಯಾಯಾಲಯಗಳಲ್ಲಿನ ಪ್ರಕರಣಗಳಿಗೆ ಸಮನ್ವಯಿಸಲು ಹಾಗೂ ನ್ಯಾಯಾಲಯಗಳ ಪ್ರಕರಣಗಳಿಗೆ ಹಾಜರಾಗುವ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ 4ನೇ ಶನಿವಾರದ ಸಾರ್ವತ್ರಿಕ ರಜೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link