ಚಳ್ಳಕೆರೆ
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇಯಾದ ಸ್ಥಾನಮಾನಗಳಿಂದ ತನ್ನ ಬದುಕನ್ನು ಉತ್ತಮ ರೀತಿಯಲ್ಲಿ ಸಾಗುವಂತೆ ಮಾಡಲು ನಮ್ಮ ಕಾನೂನು ಅವಕಾಶ ಮಾಡಿಕೊಟ್ಟಿದೆ. ಕಾನೂನಿನ ಸಹಕಾರವಿಲ್ಲದೆ ಯಾವುದೇ ರೀತಿಯ ಚಟುವಟಿಕೆ ನಡೆಸಲು ಸಾಧ್ಯವಾಗುವುದಿಲ್ಲ.
ವಿಶೇಷವಾಗಿ ಕಳೆದ ಹಲವಾರು ಶತಮಾನಗಳಿಂದ ಮಾನವ ಸಮಾಜಕ್ಕೆ ಕಳಂಕಪ್ರಾಯವಾದ ಸ್ತ್ರೀ ಸಮುದಾಯಕ್ಕೆ ಅವಮಾನವನ್ನುಂಟು ಮಾಡುವ ಬಾಲ್ಯ ವಿವಾಹ ಪದ್ದತಿಯನ್ನು ದೂರ ಮಾಡುವ ಶಕ್ತಿ ಕೇವಲ ಶಿಕ್ಷಣದಲ್ಲಿ ಮಾತ್ರ ಇದ್ದು, ಪ್ರತಿಯೊಬ್ಬ ಹೆಣ್ಣು ಮಗುವು ಶಿಕ್ಷಣವನ್ನು ಕಲಿಯಬೇಕೆಂದು ಹಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಇಲ್ಲಿನ ಎಚ್‍ಟಿಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬಾಲ್ಯವಿವಾಹ ತಡೆ ಕುರಿತು ಏರ್ಪಡಿಸಲಾದ ಕಾನೂನು ಅರಿವು ನೆರವು ಹಾಗೂ ಡಿವಿಜಿಯವರ ಮಂಕುತಿಮ್ಮನ ಕಗ್ಗ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ನಮ್ಮ ಹಿರಿಯರು ನಮ್ಮ ಸಂಪ್ರದಾಯಗಳ ಆಚರಣೆ ಹಿನ್ನೆಲೆಯಲ್ಲಿ ಮಹಿಳೆಯರನ್ನು ಕೇಳದೆ ವಯಸ್ಸನ್ನು ಲೆಕ್ಕಸದೆ ಮಹಿಳೆಯ ಅಭಿಪ್ರಾಯವನ್ನು ಸಂಗ್ರಹಿಸಿದೆ ಏಕಪಕ್ಷಿಯವಾಗಿ ತಮಗೆ ತೋಚಿದ ರೀತಿಯಲ್ಲಿ ವಿವಾಹನವನ್ನು ನೆರವೇರಿಸುತ್ತಿದ್ದರು. ಅತಿ ಚಿಕ್ಕ ವಯಸ್ಸಿನಲ್ಲೇ ಲೌಕಿಕ ಜ್ಞಾನವಿಲ್ಲದ ಜೀವನ ನಿರ್ವಹಿಸಲು ಸಮರ್ಥವಲ್ಲದ ಪುಟ್ಟ ಬಾಲಕಿಗೆ ಮದುವೆ ಎಂಬ ಹಣೆಪಟ್ಟಿ ಕಟ್ಟಿ ಜವಾಬ್ದಾರಿ ನೀಡುತ್ತಿದ್ದರು. ಇದರಿಂದ ಪುಟ್ಟ ಬಾಲಕಿ ಹಿರಿಯ ಮಾತಿಗೆ ಅಂಜಿ, ಅಳಕಿ ಅವರು ಹೇಳಿದಂತೆ ಅವರು ತೋರಿಸಿದ ಗಂಡುನೊಂದಿಗೆ ಮದುವೆಯಾಗುತ್ತಿದ್ದರು.
ಇಲ್ಲಿ ಸ್ತ್ರೀ ಸಮಾನತೆ ಮಾಯವಾಗಿ ಯಾವುದೇ ರೀತಿಯ ಕಾನೂನಿನ ಪರಿಪಾಲನೆ ಆಗುತ್ತಿರಲಿಲ್ಲ. ಇದರಿಂದ ರೋಸಿ ಹೋದ ಅನೇಕ ಬಾಕಿಯರು ಕಾನೂನಿನ ನೆರವು ಕೇಳಿದ ಕಾನೂನು ತನ್ನದೇಯಾದ ರೂಪುರೇಷೆಗಳಿಂದ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸುವ ಮತ್ತು ಬಾಲ್ಯ ವಿವಾಹ ಮಾಡುವವರ ವಿರುದ್ದ ಕಠಿಣ ಕಾನೂನು ಕೈಗೊಂಡ ಹಿನ್ನೆಲೆಯಲ್ಲಿ ಇಂದು ಈ ಅನಿಷ್ಠ ಪದ್ದತಿ ನಮ್ಮ ಸಮಾಜದಿಂದ ದೂರವಾಗಿದೆ. ಇನ್ನೂ ಈ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶ ನಮ್ಮ ನ್ಯಾಯಾಂಗ ಇಲಾಖೆಗೆ ಇದೆ. ಇದಕ್ಕೆ ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಕೈಜೋಡಿಸುವಂತೆ ಸಲಹೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ಬಾಲ್ಯವಿವಾಹ ನಮ್ಮ ಇಡೀ ಸಮಾಜವನ್ನು ಆವರಿಸಲು ಕಾರಣ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡದೇ ಇರುವುದು. ಈ ಹಿಂದೆ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರುವುದಕ್ಕೆ ನಮ್ಮ ಹಿರಿಯರು ಆಕ್ಷೇಪಣೆ ವ್ಯಕ್ತ ಪಡಿಸುತ್ತಿದ್ದರು. ಮಹಿಳೆಯರಿಗೆ ಶಿಕ್ಷಣ ಪಡೆಯುವ ಹಕ್ಕನ್ನು ಕಿತ್ತುಕೊಂಡಿದ್ದರು. ಆದರೆ, ಇಂದು ಕಾಲ ಬದಲಾಗಿದ್ದು, ಮಹಿಳೆ ಯಾವುದೇ ಶಿಕ್ಷಣವನ್ನು ಸರ್ಕಾರದಿಂದ ಪಡೆಯುವ ಸ್ವಾತಂತ್ರ್ಯವನ್ನು ಹೊಂದಿದ್ದಾಳೆ. ಮಹಿಳೆ ಶಿಕ್ಷಣ ವಂತರಾದರೆ ಮಾತ್ರ ಯಾವುದೇ ಕೆಟ್ಟ ಪದ್ದತಿಗಳು ನಮ್ಮತ್ತ ಸುಳಿಯುವುದಿಲ್ಲವೆಂದರು.
ನ್ಯಾಯಾಧೀಶ ಮನುಪಾಟೀಲ್ ಮಾತನಾಡಿ, ಮಹಿಳೆಯ ಸಂರಕ್ಷಣೆಗೆ ಹಲವಾರು ಕಾನೂನುಗಳಿದ್ದರೂ ಸಹ ಅವುಗಳ ಬಗ್ಗೆ ತಿಳಿಯದ ಮಹಿಳೆ ಇಂದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾಳೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ತನಗೆ ರಕ್ಷಣೆ ನೀಡುವ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕಿದೆ. ಅದ್ದರಿಂದ ಇಂತಹ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಜಾಗೃತಿಗೊಳಿಸುವ ಕಾರ್ಯಕ್ರಮವನ್ನು ನಮ್ಮ ಇಲಾಖೆ ಮಾಡುತ್ತಿದೆ ಎಂದರು.
ಡಿವಿಜಿಯವರ ಮಂಕುತಿಮ್ಮನ ಕಗ್ಗದ ಬಗ್ಗೆ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಜಿ.ವಿ.ಶ್ರೀರಾಮರೆಡ್ಡಿ, ಸಾಹಿತಿಗಳು ಎಂದರೆ ಒಂದು ಅರ್ಥದಲ್ಲಿ ಬಡವರು ಎಂದೇ ಅರ್ಥ. ಕಾರಣ, ಡಿ.ವಿ.ಗುಂಡಪ್ಪನವರು ತಮ್ಮ ಸಂಪೂರ್ಣ ಬದುಕನ್ನು ಕನ್ನಡ ಸಾಹಿತ್ಯದ ಚಟುವಟಿಕೆಗಳಿಗೆ ಮೀಸಲಿಟ್ಟರು. ಶಾಲೆಯ ಉಪಾಧ್ಯಾಯರಾಗಿ ತಮ್ಮ ಬದುಕು ಆರಂಭಿಸಿದ ಅವರು, ಕನ್ನಡ ಸಾಹಿತ್ಯ ಲೋಕ ಎಂದೂ ಮರೆಯದಂತಹ ಅಮೋಘ ಸಾಹಿತ್ಯವನ್ನು ನೀಡಿದರು. ವಿಶೇಷವಾಗಿ ಬದುಕಿನ ಸಂಪೂರ್ಣ ಏರಿಳಿತವನ್ನು ಬಿಂಬಿಸುವ ಮೌಲ್ಯಯುತ ಬದುಕಿಗೆ ಸ್ಪರ್ಶ ನೀಡುವ ಮಂಕುತಿಮ್ಮನ ಕಗ್ಗ ಅವರ ಸಾಹಿತ್ಯದ ಶಕ್ತಿಯ ರೂಪವೆಂದರು. ಇಂದಿಗೂ ಸಹ ನೂರಾರು ವರ್ಷಗಳಿಂದ ಮಂಕು ತಿಮ್ಮನ ಕಗ್ಗ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಗಿರೀಶ್, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಕಾರ್ಯದರ್ಶಿ ಹನುಮಂತಪ್ಪ ಮುಂತಾದವರು ಪಾಲ್ಗೊಂಡಿದ್ದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರ ಎ.ರಾಜಣ್ಣ ಸ್ವಾಗತಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
