ಮತದಾರರ ಪಟ್ಟಿ ಪರಿಷ್ಕರಣೆ ಮಾಹಿತಿ ಪಡೆದ ಕಾರ್ಯದರ್ಶಿ ಮಣಿವಣ್ಣನ್

ತುಮಕೂರು
 
     ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020ರ ಸಂಬಂಧ ತುಮಕೂರು ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಮಣಿವಣ್ಣನ್ ಅವರು ಜಿಲ್ಲೆಯಲ್ಲಿರುವ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‍ಗಳ  ಸಭೆ ನಡೆಸಿದರು.
      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕ್ರಮಬದ್ಧ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು. ಬಿಎಲ್‍ಒಗಳು ಮನೆ ಮನೆಗೆ ಭೇಟಿ ನೀಡಿ ಮರಣ ಹೊಂದಿದವರು, ಸ್ಥಳಾಂತರ, ಹೊಸ ಸೇರ್ಪಡೆಯ ಬಗ್ಗೆ ಮಾಹಿತಿ ಪಡೆದು ನಿಯಮಾನುಸಾರ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದರು.
     ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ರ್ಯಾಡಂ ಆಗಿ ಪರಿಶೀಲಿಸಿ, ಕ್ರಮಬದ್ದ ಮತದಾರರ ಪಟ್ಟಿ ಪರಿಷ್ಕರಣೆ ಆಗಿರುವ ಬಗ್ಗೆ ಖಾತರಿಸಿಪಡಿಸಿಕೊಳ್ಳುವಂತೆ ಅವರು ಸೂಚಿಸಿದರು .ನಮೂನೆ-6 ಹಾಗೂ 1950 ಮತದಾರರ ಸಹಾಯವಾಣಿಗೆ ಬಂದಿರುವ ಕರೆಗಳ ಬಗ್ಗೆ ಮಾಹೆವಾರು ಮಾಹಿತಿಯನ್ನು ನೀಡುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು, 2019ರ ಡಿಸೆಂಬರ್ 16ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ 21,97,545 ಮತದಾರರು ಜಿಲ್ಲೆಯಲ್ಲಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಮುಂದುವರೆದಿದೆ. ಕ್ರಮಬದ್ಧ ಮತದಾರರ ಪಟ್ಟಿ ತಯಾರಿಕೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರಿಂದ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಅರಿವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.
    ಸಭೆಗೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರಕ್ಕೆ ತೆರಳಿ ಸಹಾಯವಾಣಿ ಬರುವ  ದೂರುಗಳು ಬಗ್ಗೆ ಪರಿಶೀಲನೆ ನಡೆಸಿದರಲ್ಲದೇ ದೂರು ದಾಖಲಿಸಿರುವವರಿಗೂ ಕರೆ ಮಾಡಿ ಅವರ ಸಮಸ್ಯೆ ಪರಿಹಾರ ಆಗಿರುವ ಕುರಿತು ಮಾಹಿತಿ ಪಡೆದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‍ಗಳು ಸೇರಿದಂತೆ ಮತ್ತಿತರು ಹಾಜರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ