ಚಳ್ಳಕೆರೆ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಾಡದೇವಿಯ ಗೌರವವನ್ನು ಹಾಗೂ ಕೀರ್ತಿಯನ್ನು ಸಾರುವ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅಡ್ಡಿಆತಂಕಗಳು ಎದುರಾಗದಂತೆ ಜಾಗೃತೆ ವಹಿಸಬೇಕಾಗಿದೆ. ಕಾರ್ಯಕ್ರಮದ ಆಯೋಜಕರ ಮನವಿಯಂತೆ ಬೃಹತ್ ಮೆರವಣಿಗೆ ಸಾವಿರಾರು ಯುವಕರು ಪಾಲ್ಗೊಳ್ಳಲಿದ್ದು, ಎಲ್ಲರೂ ಸಹ ಮೆರವಣಿಗೆ ಯಶಸ್ಸಿಯತ್ತ ಸಾಗಲಿ ಎಂಬ ದೃಷ್ಠಿಯಿಂದ ಡಿಜೆ ಬಳಕೆಗೆ ಅನುಮತಿ ಕೋರಿದ್ದು ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿ ಒಪ್ಪಿಗೆ ಪಡೆದಿದ್ದರೂ ಸಹ ಮೆರವಣಿಗೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಡಿಜೆ ಬಳಕೆಗೆ ಅವಕಾಶ ನೀಡದೇ ಇದ್ಧಾಗ ಇಲ್ಲಿನ ಪೊಲೀಸ್‍ರಿಗೆ ಶಾಸಕ ಟಿ.ರಘುಮೂರ್ತಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಮೆರವಣಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಉಪಯೋಗಿಸಲು ತಂದಿದ್ದ ಡಿಜೆ ಶಾಲೆಯ ಕಾಂಪೌಂಡದಲ್ಲಿದ್ದು ರಕ್ಷಣಾ ವೇದಿಕೆ ಯುವಕರು ಪೊಲೀಸರು ಡಿಜೆ ವಾಹನವನ್ನು ರಸ್ತೆಗೆ ತರದಂತೆ ಎಚ್ಚರಿಕೆ ನೀಡಿದ್ದರಲ್ಲದೆ ಪ್ರಕರಣ ದಾಖಲಿಸುವುದಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದ್ಧಾರೆಂದರು.
ಕೂಡಲೇ ಶಾಸಕ ಟಿ.ರಘುಮೂರ್ತಿ ಸಂಸದರಾದ ಬಿ.ಎನ್.ಚಂದ್ರಪ್ಪ ಹಾಗೂ ನಾನು ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಮಾತನಾಡಿ ಅವರೇ ಉಪಯೋಗಿಸಲು ಅನುಮತಿ ನೀಡಿದ್ದು, ಇಲ್ಲಿನ ಪೊಲೀಸರು ಏಕೆ ತಡೆಯುತ್ತಾರೆಂದು ಪ್ರಶ್ನಿಸಿ ಸ್ಥಳದಲ್ಲಿದ್ದ ಪೊಲೀಸ್ ಮತ್ತು ಅಧಿಕಾರಿಗಳ ಮೇಲೆ ಕೆಂಡಮಂಡಲವಾದರು. ಆದರೆ, ಅಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳು ಡಿಜೆ ಬಳಕೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅವರು ಅನುಮತಿ ನೀಡಿದ ನಂತರವೇ ಡಿಜೆಯನ್ನು ರಸ್ತೆಗೆ ಬಿಡುವುದಾಗಿ ಪೊಲೀಸರು ತಿಳಿಸಿದರು.
ಕೂಡಲೇ ಶಾಸಕರು ತಮ್ಮ ದೂರವಾಣಿ ಮೂಲಕ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ. ಇದರಿಂದ ಅಸಮದಾನಗೊಂಡ ಶಾಸಕ ಟಿ.ರಘುಮೂರ್ತಿ ಲೋಕಸಭಾ ಸದಸ್ಯರಿಗೆ ದೂರವಾಣಿ ಮೂಲಕ ತಿಳಿಸಿ ಕನ್ನಡ ನಾಡ ದೇವಿ ಉತ್ಸವಕ್ಕೆ ಡಿಜೆ ಉಪಯೋಗದ ಬಗ್ಗೆ ಮೊದಲೇ ಮಾಹಿತಿ ನೀಡಿದರೂ ಸಹ ಅದಕ್ಕೆ ಒಪ್ಪಿಗೆ ನೀಡಿ ಈಗ ನಿರಾಕರಿಸುವುದು ಯಾವ ನ್ಯಾಯ ಎಂದು ಖಾರವಾಗಿ ಪ್ರಶ್ನಿಸಿದರಲ್ಲದೆ ಮೆರವಣಿಗೆ ಡಿಜೆಯನ್ನು ಉಪಯೋಗಿಸಲಾಗುವುದು ಇಲ್ಲಿರುವ ಎಲ್ಲರೂ ಕಾನೂನಿಗೆ ಗೌರವ ಕೊಡುವವರಾಗಿದ್ಧಾರೆ.
ಪೊಲೀಸರು ಬೇಕಾದರೆ ನನ್ನ ಮೇಲೆ ಪ್ರಕರಣ ದಾಖಲಿಸಲಿ, ನಾನು ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುತ್ತೇನೆ. ಜಿಲ್ಲಾ ರಕ್ಷಣಾಧಿಕಾರಿಗಳ ಈ ಕ್ರಮ ಬೇಸರತಂದಿದೆ. ಸ್ವಾಭಿಮಾನಿ ಕನ್ನಡಿಗರ ಹಬ್ಬವಾದ ಈ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು. ಜಿಲ್ಲಾ ರಕ್ಷಣಾಧಿಕಾರಿಗಳು ನನ್ನ ಮೇಲೆ ಕಾನೂನು ಕ್ರಮ ಕೈಗೊಳ್ಳಲಿ ಇಲ್ಲಿನ ನೂರಾರು ಕನ್ನಡಾಭಿಮಾನಿಗಳ ಹಿತದೃಷ್ಠಿಯಿಂದ ಡಿಜೆಯನ್ನು ಉಪಯೋಗಿಸುವುದಾಗಿ ತಿಳಿಸಿದರು.
ನಂತರ ಶಾಸಕ ಟಿ.ರಘುಮೂರ್ತಿ ತಾವೇ ಡಿಜೆ ವಾಹನವನ್ನು ರಸ್ತೆಗೆ ತರಿಸಿಕೊಂಡು ಅವರ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಡಿಜೆ ಬಂದ ಸಂತಸಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರಲ್ಲದೆ ಶಾಸಕರಿಗೆ ಹೂವಿನ ಹಾರ ಹಾಕಿ ಮೇಲೆತ್ತಿ ಸಂಭ್ರಮಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
