ಪುಸ್ತಕದ ಜಾಗ ಆಕ್ರಮಿಸುತ್ತಿರುವ ಆಧುನಿಕ ಸಾಧನ

ದಾವಣಗೆರೆ:

     ಪ್ರಸ್ತುತ ಪುಸ್ತಕದ ಜಾಗವನ್ನು ಆಧುನಿಕ ಸಾಧನಗಳಾದ ಕಂಪ್ಯೂಟರ್, ಮೊಬೈಲ್, ಲ್ಯಾಪ್‍ಟಾಪ್, ಟ್ಯಾಬ್ ಆಕ್ರಮಿಸಿಕೊಳ್ಳುತ್ತಿವೆ ಎಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಡಾ.ಎಚ್.ಎಫ್.ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದ ದಾವಣಗೆರೆ ಘಟಕ ಹಾಗೂ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಪುಸ್ತಕ ಪಂಚಮಿ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಬೆಳೆಯುತ್ತಿದ್ದಂತೆ, ಪುಸ್ತಕದ ಸ್ಥಾನವನ್ನು ಆಧುನಿಕ ಸಾಧನಗಳಾದ ಲ್ಯಾಪ್‍ಟಾಪ್, ಮೊಬೈಲ್, ಕಂಪ್ಯೂಟರ್ ಹಾಗೂ ಟ್ಯಾಬ್ ಆಕ್ರಮಿಸಿಕೊಂಡಿವೆ. ಹೀಗಾಗಿ ಪುಸ್ತಕಗಳು ಸಹ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ ಎಂದರು.
ರಕ್ತ ಜೀವ ಉಳಿಸಿದರೆ, ಪುಸ್ತಕ ಜೀವ ಬೆಳೆಸಲಿದೆ. ಆದರೆ, ಪ್ರಸ್ತುತ ಪುಸ್ತಕಗಳು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಟ್ಟೀಮನಿ ಪ್ರತಿಷ್ಠಾನದಿಂದ ಡಾ.ಬಾಣಾಪುರಮಠ್ ಮತ್ತು ಮಿತ್ರರರು ಕಳೇದ 10 ವರ್ಷಗಳಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವ ಮೂಲಕ ಪುಸ್ತಕ ಪರಂಪರೆಯನ್ನು ಉಳಿಸಿ, ಬೆಳೆಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

       ಪುಸ್ತಕಗಳು ನಮಗೆ ಅಮೂಲ್ಯ ನಿಧಿ ಹಾಗೂ ಜ್ಞಾನ ವಿತರಣೆಯ ಪ್ರಮುಖ ಸಾಧನವಾಗಿದೆ. ಅಲ್ಲದೇ, ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ ಎಂದ ಅವರು, ಯುವಕರು ದಾರಿ ತಪ್ಪಲು ದೊಡ್ಡವರೇ ತಪ್ಪು ದಾರಿ ಸಿದ್ಧ ಮಾಡಿಕೊಡುವಂತಹ ಪರಿಸ್ಥಿತಿ ಸಧ್ಯ ನಿರ್ಮಾಣವಾಗಿದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಮೊಬೈಲ್, ಟ್ಯಾಬ್, ಲ್ಯಾಪ್‍ಟಾಪ್ ಕೊಡಿಸಿ ಕೆಟ್ಟ ದಾರಿಯಲ್ಲಿ ನಡೆಯಲು ವೇದಿಕೆ ಕಲ್ಪಿಸುವ ಬದಲು, ಒಳ್ಳೆಯ ಪುಸ್ತಕಗಳನ್ನು ಕೊಡಿಸಿ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಪ್ರೌಢ ಶಿಕ್ಷಣದಲ್ಲಿ ಗುಣಮಟ್ಟದ ಸುಧಾರಣೆಯ ಅವಶ್ಯಕತೆ ಇದೆ. ಈಗಿನ ಜಾಗತೀಕರಣ, ಉದಾರೀಕರಣಕ್ಕೆ ತಕ್ಕಂತೆ ಮಕ್ಕಳನ್ನು ಅಣಿಗೊಳಿಸಬೇಕಾದರೆ, ಶಿಕ್ಷಕರು ಮೊದಲು ಸಿದ್ಧರಾಗಬೇಕಾಗದ ಅವಶ್ಯಕತೆ ಇದೆ. ಆದ್ದರಿಂದ ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕೆಂದು ಕಿವಿಮಾತು ಹೇಳಿದರು.

         ಶಿಕ್ಷಕರು ಓದಿ ಸಂಪಾದಿಸಿದ ಜ್ಞಾನವನ್ನು ಮಕ್ಕಳಿಗೆ ಮುಕ್ತ ಮನಸ್ಸಿನಿಂದ ಧಾರೆ ಎರೆಯಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಹಿಮಾಲಯ, ಗೌರಿ ಶಂಕರದಂತಹ ಎತ್ತರದ ಪರ್ವತಗಳಂತೆ ಮಾಡಬೇಕು. ಅದುವೇ ಶಿಕ್ಷಕರ ಮೂಲ ಕರ್ತವ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಮಾತನಾಡಿ, ಪ್ರಸ್ತುತ ಶಿಕ್ಷಣವು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಗಾಳಿ, ನೀರು, ಆಹಾರ, ವಸತಿ ಎಷ್ಟು ಅಗತ್ಯವೋ ಹಾಗೆಯೇ ಶಿಕ್ಷಣವೂ ಸಹ ಅತ್ಯವಶ್ಯವಾಗಿದೆ. ಮೊದಲೆಲ್ಲಾ ಮಕ್ಕಳಿಗಾಗಿ ಆಸ್ತಿ ಮಾಡಬೇಕು ಎನ್ನುತ್ತಿದ್ದರು. ಆದರೆ, ಈಗ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರು, ಪೋಷಕರ ಮೇಲಿದೆ ಎಂದು ಹೇಳಿದರು.

         ಇದೇ ವೇಳೆ ಪುಸ್ತಕ ವಾಚನ ಸಹಾಯ ಯೋಜನೆಯ ಅಡಿಯಲ್ಲಿ 21 ದಾನಿಗಳ ದೇಣಿಗೆಯ ಸಹಕಾರದೊಂದಿಗೆ ಸುಮಾರು 42 ಪ್ರತಿಭಾವಂತ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು

          ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಕಿರುವಾಡಿ ಗಿರಿಜಮ್ಮ, ಸರ್ಕಾರಿ ಪ್ರೌಢಶಾಲೆ ಉಪ ಪ್ರಾಂಶುಪಾಲ ಜೆ.ಎಸ್. ಪರಮೇಶ್ವರಪ್ಪ, ಪ್ರತಿಷ್ಠಾನದ ಸಂಚಾಲಕ ಸಿ.ಎಸ್. ಹಿರೇಮಠ, ಸಹ ಸಂಚಾಲಕರಾದ ಸೋಮಶೇಖರ್ ಎಂ. ಹಿರೇಮಠ, ವಿ.ಸಿ. ಪುರಾಣಿಕ ಮಠ ಸೇರಿದಂತೆ ಇತರರು ಇದ್ದರು. ಸಹ ಸಂಚಾಲಕ ಡಾ. ಸಿ.ಆರ್. ಬಾಣಾಪುರ ಮಠ ಸ್ವಾಗತಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ