ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿಯಿಂದ ಜಾಥಾ

0
15

ಬಳ್ಳಾರಿ:

      ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿಯಿಂದ ಜಿಲ್ಲಾ ಸಮಾವೇಶದ ಪೂರ್ವಭಾವಿಯಾಗಿ ಗಣಿಬಾಧಿತ ಸಂಡೂರು ಹಾಗೂ ಬಳ್ಳಾರಿ ತಾಲ್ಲೂಕುಗಳ ಅನೇಕ ಗ್ರಾಮ ಹಾಗೂ ಪಟ್ಟಣಗಳಲ್ಲಿ ಇಂದು ಮತ್ತು ನಿನ್ನೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಕುಡುತಿನಿ, ತೋರಣಗಲ್ಲು, ದರೋಜಿ, ತಿಮ್ಲಾಪುರ, ಏಳುಬಿಂಚಿ, ವೇಣಿವೀರಾಪುರ, ಅಂತಾಪುರ, ಚಿಕ್ಕಂತಾಪುರ ಜೊತೆಗೆ ಯಶವಂತನಗರ, ತುಂಬರಗುದ್ದಿ, ಕಮತೂರು, ನರಸಾಪುರ, ಸ್ವಾಮಿಹಳ್ಳಿ, ಭುಜಂಗನಗರ, ಲಕ್ಷ್ಮಿಪುರ ಮುಂತಾದ ಗ್ರಾಮಗಳಲ್ಲಿ ಜಾಥಾವನ್ನು ನಡೆಸಲಾಯಿತು. ಪ್ರತಿ ಗ್ರಾಮದಲ್ಲಿ ಕಾರ್ಯಕರ್ತರು ಕ್ರಾಂತಿ ಗೀತೆಗಳನ್ನು ಹಾಡಿ ಜನರನ್ನು ಸೇರಿಸುತ್ತಿದ್ದರು. ಜನ ಸಂಗ್ರಾಮ ಪರಿಷತ್ ಹಾಗೂ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಮುಖಂಡರು ಈ ಜಾಥಾದಲ್ಲಿ ಪಾಲ್ಗೊಂಡು, ಅಕ್ಟೋಬರ್ 15 ರಂದು ಬಳ್ಳಾರಿಯಲ್ಲಿ ನಡೆಯುವ ಗಣಿಬಾಧಿತ ಜನರ ಜಿಲ್ಲಾ ಸಮಾವೇಶದ ಮಹತ್ವದ ಕುರಿತು ತಿಳಿಸುತ್ತಿದ್ದರು.

       ಜಾಥಾಗೆ ಚಾಲನೆ ನೀಡಿದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಕಾ.ರಾಮಾಂಜನಪ್ಪ ಅವರು ಮಾತನಾಡುತ್ತಾ “ಪುನರ್ನಿಮಾಣ ಮತ್ತು ಪುನಶ್ಛೇತನ ಕಾರ್ಯಕ್ರಮಗಳೆಂದರೆ ಅಕ್ರಮಗಣಿಗಾರಿಕೆಯಿಂದ ನಾಶವಾದ ಅರಣ್ಯ, ಕೃಷಿ, ಪರಿಸರ, ನೀರಾವರಿ, ಆರೋಗ್ಯ ಮುಂತಾದವುಗಳ ಜೊತೆಗೆ ಅಕ್ರಮ ಗಣಿಗಾರಿಕೆಯಿಂದ ನಾಶವಾದ ಜನರ ಅದರಲ್ಲೂ ಕಾರ್ಮಿಕರ, ಮಹಿಳೆಯರ, ರೈತರ ಕುಟುಂಬಗಳ ಬದುಕು ಕಟ್ಟಿಕೊಡುವ ಪುನರ್ನಿಮಾಣ ಮತ್ತು ಪುನಶ್ಚೇತನ. ಆದರೆ ಇದರ ಬದಲು ಜಿಲ್ಲಾಡಳಿತವು ಕೆ.ಎಂ.ಇ.ಆರ್.ಸಿ.ಯ ಮೂಲಕ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಸ್ತಾವನೆಗಳಲ್ಲಿ ಸರ್ಕಾರ ತನ್ನ ನಿಗಧಿತ ಬಡ್ಜೆಟ್‍ನಲ್ಲಿ ಮಾಡಬೇಕಾದ ರಸ್ತೆ, ಚರಂಡಿ, ಶೌಚಾಲಯ, ಸಮುದಾಯ ಭವನ, ರಂಗಮಂದಿರ, ಸರ್ಕಾರಿ ನೌಕರರಿಗೆ ವಸತಿ ಗೃಹಗಳ ನಿರ್ಮಾಣವನ್ನು ಮಾಡುವಂತಹ ಯೋಜನೆಗಳನ್ನು ಸೇರಿಸಿತು.

        ಈ ಮೂಲಕ ಗಣಿಭಾದಿತ ಜನರಿಗೆ ಮೀಸಲಿಟ್ಟ ಹಣವನ್ನು ರಾಜಕಾರಣಿಗಳ, ಹಾಗೂ ಅವರ ಹಿಂಬಾಲಕರ ಗುತ್ತಿಗೆದಾರರಿಗೆ ಲಾಭಮಾಡಿಕೊಡುವಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೊರಟಿರುವುದು ಸ್ಪಷ್ಟ. ಇನ್ನೊಂದೆಡೆ ಸಂಗ್ರಹವಾಗಿ ಖರ್ಚುಮಾಡಲು ಸಿದ್ಧವಿರುವ ಸಾವಿರಾರು ಕೋಟಿಯ ಹಣವನ್ನು ವಿನಿಯೋಗಿಸಿ ಕ್ರಿಯಾಶೀಲ ಯೋಜನೆಗಳ ಮೂಲಕ ಜನಹಿತ ಕಾಪಾಡುವ ಬದಲು ಆ ಹಣವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ರಾಜಕಾರಣಿಗಳ ನಡುವೆ ತೀವ್ರ ಪೈಪೊಟಿ ನಡೆಯುತ್ತಿದೆ. ಇವರಿಗೆ ಸಾವಿರಾರು ಕೋಟಿಯ ಹಣದ ಮೇಲೆ ಪ್ರೀತಿಯೇ ವಿನಃ ಗಣಿಬಾಧಿತ ಗಣಿಬಾಧಿತ ಪ್ರದೇಶದ ಜನರ ಮೇಲಿನ ಕಾಳಜಿಯಲ್ಲ. ಹಾಗೆ ಕೆ.ಎಂ.ಇ.ಆರ್.ಸಿ. ಸಂಸ್ಥೆಗೂ ಸಹ ದೂರದೃಷ್ಟಿ ಮತ್ತು ಇಚ್ಚಾಶಕ್ತಿಯ ಕೊರತೆಯಿದೆ” ಎಂದು ಆರೋಪಿಸಿದರು. ಆರ್.ಆರ್ ಫಂಡ್‍ನ ಹಣ ಜನರಿಗೆ ಸೇರಬೇಕಾದುದು. ಜನರು ತಮ್ಮ ಹಕ್ಕುಗಳನ್ನು ಪಡೆಯಲು ಪ್ರಜ್ಞಾವಂತ ಪಾತ್ರ ವಹಿಸಬೇಕು. ಗಣಿ ಬಾಧಿತ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸಬೇಕು. ಆಗ ಮಾತ್ರ ಗಣಿಬಾಧಿತ ಪ್ರದೇಶಗಳಲ್ಲಿ ಜನರ ನಿಜವಾದ ಅಭಿವೃದ್ಧಿಯಾಗಲು ಸಾಧ್ಯ” ಎಂದರು.

         ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿ ಹಾಗೂ ಜನಸಂಗ್ರಾಮ ಪರಿಷತ್‍ನ ಮುಖಂಡರಾದ ಶ್ರೀಶೈಲ ಆಲ್ದಳ್ಳಿ ಅವರು ಮಾತನಾಡುತ್ತಾ “ ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿಯು ಆಗಸ್ಟ್ 30 ಮತ್ತು 31ರಂದು ಸಂಡೂರಿನಲ್ಲಿ 2 ದಿನಗಳ ಕಾರ್ಯಾಗಾರವನ್ನು ರಚಿಸಿ, ಅದಕ್ಕೆ ತಜ್ಞರನ್ನೂ ಆಹ್ವಾನಿಸಿ ಅವರೊಡನೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು.

         ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವಂತಹ ಹೈನುಗಾರಿಕೆ, ಕುರಿ ಸಾಕಾಣಿಕೆ, ಮಹಿಳೆಯರಿಗೆ ಗುಡಿಕೈಗಾರಿಕೆಯಂತಹ ಸ್ವಾವಲಂಬಿ ಉದ್ದಿಮೆಗಳನ್ನು ಸ್ಥಾಪಿಸಲು ಶಾಶ್ವತವಾದ ಯೋಜನೆಗಳನ್ನು ರೂಪಿಸುವುದು, ರೈತರಿಗೆ ಅನುಕೂಲವಾಗುವಂತಹ ಕೆರೆಗಳ ಹೂಳೆತ್ತುವಿಕೆ ಹಾಗೂ ತುಂಗಭದ್ರಾ ಡ್ಯಾಂನಿಂದ ಕೆರೆಗಳಿಗೆ ನೀರು ತುಂಬಿಸುವುದು, ಆ ಮೂಲಕ ಅಂತರ್ಜಲವನ್ನು ಹೆಚ್ಚು ಮಾಡುವ ಯೋಜನೆ ರೂಪಿಸುವುದು, ಗಣಿಭಾದಿತ ಪ್ರದೇಶದ ರೈತರಿಗೆ ಉಚಿತ ಸೋಲಾರ್ ಪಂಪ್ ಸೆಟ್ಗಳನ್ನು ನೀಡುವುದು, ಸಹಕಾರಿ ಸಂಘಗಳ ಮೂಲಕ ಹೈನುಗಾರಿಕೆ, ಪಶುಸಂಗೋಪನೆ, ಮೊಲ ಸಾಕಾಣಿಕೆ, ಮೀನು ಸಾಕಾಣಿಕೆ, ವಾಣಿಜ್ಯ ಬೆಳೆಗಳನ್ನು ಬೆಳೆಯಲು ಉಚಿತವಾದ ಸಲಕರಣೆಗಳು ನೀಡಿ ಕೃಷಿ ಹಾಗೂ ಕೃಷಿಗೆ ಪೂರಕವಾದ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು.

         ಗಣಿ ಕಾರ್ಮಿಕರಿಗೆಂದೇ ವಿಶೇಷವಾದ ಕಲ್ಯಾಣ ಮಂಡಳಿಯನ್ನು ರಚಿಸಿ ಗಣಿ ಕಾರ್ಮಿಕ ವರ್ಗಗಳ ಕುಟುಂಬದ ಮಕ್ಕಳಿಗೆ ಉಚಿತವಾದ ಉನ್ನತ ಶಿಕ್ಷಣವನ್ನು ನೀಡುವುದು ಹಾಗು 60 ವರ್ಷ ಮೇಲ್ವಟ್ಟಂತಹ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯವನ್ನು ಕಲ್ವಿಸುವಂತಹ ಯೋಜನೆಗಳನ್ನು ರೂಪಿಸುವುದು, ವನ್ಯ ಜೀವಿ ಪ್ರದೇಶದ ಅಭಿವೃದ್ದಿಪಡಿಸುವಿಕೆ, ಅರಣ್ಯ ಪ್ರದೇಶದಲ್ಲಿನ ಸಾಗುವಳಿ ಮಾಡುವ ರೈತರಿಗೆ ತಮ್ಮ ಹೊಲದ ಸುತ್ತಲು ಗಿಡನೆಟ್ಟುಕೊಳ್ಳಲು ಪ್ರೋತ್ಸಾಹ ಧನವನ್ನು ನೀಡುವುದು, ಅರಣ್ಯದಂಚಿನಲ್ಲಿರುವ ಗ್ರಾಮಗಳಲ್ಲಿ ಅರಣ್ಯ ಸಮಿತಿಗಳನ್ನು ಸಹಕಾರಿ ಸಂಘಗಳನ್ನು ರಚಿಸಿ ಅವುಗಳ ಮೂಲಕ ಅರಣ್ಯವನ್ನು ಪುನಶ್ಚೇತನಗೊಳಿಸಿ ಹಳ್ಳಿಗಳ ಮಟ್ಟದಲ್ಲಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದು, ಸಮುದಾಯದ ಅಭಿವೃದ್ದಿಗೆ ಸಂಭಂದಿತ ಯೋಜನೆಗಳನ್ನು ಜಾರಿಗೊಳಿಸಲು ಪ್ರತಿಯೊಂದು ಉದ್ದಿಮೆಗಳಿಗೆ ಪ್ರತ್ಯೇಕ ಸಹಕಾರಿ ಸಂಘಗಳನ್ನು ರಚಿಸುವುದರ ಮೂಲಕ ಗಣಿಭಾದಿತ ಪ್ರದೇಶದಲ್ಲಿನ ಜನರ ಜೀವನ ಮತ್ತು ಅರಣ್ಯ ಪುನಶ್ಚೇತನಗೊಳಿಸಲು ವೈಜ್ಞಾನಿಕವಾದ ತಳಮಟ್ಟದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಖಚಿತ ಸಲಹೆಗಳು ಈ ಸಂದರ್ಭದಲ್ಲಿ ಬಂದವು.

       ಹಾಗೂ ಇವುಗಳನ್ನು ಜಿಲ್ಲಾಡಳಿತ ಮತ್ತು ಕೆ.ಎಂ.ಆರ್.ಸಿ.ಯ ಗಮನಕ್ಕೂ ತರಲಾಗಿದೆ. ಮುಂದುವರಿಕೆಯಾಗಿ ಈ ಕಾರ್ಯಗಾರದ ಕ್ರೋಢೀಕೃತವಾದ ಅಂತಿಮ ವರದಿಯನ್ನು ಚರ್ಚಿಸಲು 15 ಅಕ್ಟೋಬರ್ 2018 ರಂದು ಬಳ್ಳಾರಿಯ ಬಿ.ಡಿ.ಎ.ಎ. ಸಭಾಂಗಣದಲ್ಲಿ “ಗಣಿ ಬಾದಿತ ಪ್ರದೇಶದಲ್ಲಿ ಸುಸ್ಥಿರ ಅಭಿವೃದ್ದಿಯ ಬಗ್ಗೆ” ಕುರಿತು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶವನ್ನು ಯಶಸ್ವಿಗೊಳಿಸಲು” ಕರೆ ನೀಡಿದರು.ಮುಖಂಡರುಗಳಾದ ಟಿ.ಎಂ.ಶಿವಕುಮಾರ್, ರಾಧಾಕೃಷ್ಣ ಉಪಾಧ್ಯ, ಮಂಜುಳಾ, ದೇವದಾಸ್, ಚಂದ್ರಶೇಖರ್ ಮೇಟಿ, ಹನುಮಪ್ಪ, ಡಾ.ಪ್ರಮೋದ್, ಶಾಂತಾ, ಗೋವಿಂದ್, ಸುರೇಶ್, ಪಂಪಾಪತಿ, ಮೂಲಿಮನಿ ಈರಣ್ಣ ಮುಂತಾದವರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here