ತುಮಕೂರು
ಕೊರೊನಾ ಭೀತಿ ಮತ್ತು ನೆರೆಯ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರು ನಗರದಲ್ಲಿ ಮುಚ್ಚಿಸಲಾಗಿದ್ದ ಕೋಳಿ ಅಂಗಡಿಗಳನ್ನು ಮತ್ತೆ ತೆರೆಯಲು ತುಮಕೂರು ಮಹಾನಗರ ಪಾಲಿಕೆಯು ಅನುಮತಿ ನೀಡಿದ್ದು, ಶುಕ್ರವಾರದಿಂದ ಕೋಳಿ ಅಂಗಡಿಗಳು ತೆರೆದವು.
ಕಳೆದ ಸುಮಾರು 15 ದಿನಗಳ ಹಿಂದಿನಿಂದಲೂ ಕೋಳಿ ಅಂಗಡಿಗಳನ್ನು ಪಾಲಿಕೆಯು ಆದೇಶ ಹೊರಡಿಸಿ ಮುಚ್ಚಿಸಿತ್ತು. ಇದೀಗ ಕೋಳಿ ಅಂಗಡಿಗಳನ್ನು ಕೆಲವೊಂದು ಷರತ್ತುಗಳನ್ವಯ ತೆರೆಯಲು ಅನುಮತಿಸಲಾಗಿದೆ. ತುಮಕೂರು ನಗರದಲ್ಲಿ ಒಟ್ಟು 156 ನೋಂದಾಯಿತ ಕೋಳಿ ಅಂಗಡಿಗಳಿವೆ.
ವಿಧಿಸಿದ ಷರತ್ತುಗಳು
ಪ್ರತಿನಿತ್ಯ ಸಂಜೆ 7 ಗಂಟೆಯೊಳಗೆ ಕೋಳಿ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಕೋಳಿ ಅಂಗಡಿಯ ತ್ಯಾಜ್ಯವನ್ನು ನಿಗದಿಪಡಿಸಿರುವ ತ್ಯಾಜ್ಯ ಸಂಗ್ರಹಗಾರರಿಗೆ ನೀಡಬೇಕು ಹಾಗೂ ಅವರು ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಕೋಳಿ ಅಂಗಡಿಗಳಲ್ಲಿ ಕಟ್ಟುನಿಟ್ಟಾಗಿ ಸ್ವಚ್ಛತೆಯನ್ನು ಕಾಪಾಡಬೇಕು. ಅಂಗಡಿಗೆ ಬರುವವರೊಡನೆ ವ್ಯಾಪಾರ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬಿತ್ಯಾದಿ ಷರತ್ತುಗಳನ್ನು ಈ ಸಂದರ್ಭದಲ್ಲಿ ಪಾಲಿಕೆಯು ಕೋಳಿ ಅಂಗಡಿಗಳವರಿಗೆ ವಿಧಿಸಿದೆ.
ಮಾಂಸ-ಮೀನು ಮಾರಾಟಕ್ಕೆ ಅಡ್ಡಿಯಿಲ್ಲ
ನಗರದಲ್ಲಿ ಮೊದಲಿನಿಂದ ಮಾಂಸ ಮತ್ತು ಮೀನಿನ ಮಳಿಗೆಗಳ ವಹಿವಾಟಿಗೆ ಯಾವುದೇ ಅಡಚಣೆ ಆಗಿಲ್ಲ. ಪಾಲಿಕೆಯಲ್ಲಿ ನೋಂದಾಯಿಸಿರುವ 36 ಮಾಂಸದ ಹಾಗೂ 12 ಮೀನಿನ ಮಳಿಗೆಗಳು ಇವೆ. ಕೊರೊನಾ ಹಿನ್ನೆಲೆಯಲ್ಲಿ ಈ ಮಳಿಗೆಗಳಿಗೂ ಸಹ ಸ್ವಚ್ಛತೆ ಬಗ್ಗೆ, ತ್ಯಾಜ್ಯ ವಿಲೇವಾರಿ ಬಗ್ಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ತಿಳಿಸಿದ್ದಾರೆ.
ಇಂದಿನ ದರ ಹೀಗಿತ್ತು
ತುಮಕೂರಿನಲ್ಲಿ ಶುಕ್ರವಾರ ಕೋಳಿ ಮಾಂಸದ ಬೆಲೆ ಕೆ.ಜಿ.ಗೆ 150 ರೂ. ಇತ್ತು. ಕುರಿ ಮತ್ತು ಮೇಕೆ ಮಾಂಸದ ಬೆಲೆಯು ಕೆ.ಜಿ.ಗೆ 550 ರಿಂದ 600 ರೂ. ಆಗಿತ್ತು. ಮೀನಿನ ಬೆಲೆಯು ಕೆ.ಜಿ.ಗೆ ಕನಿಷ್ಟ 150 ರೂ. ಇತ್ತು ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ