ದಾವಣಗೆರೆ:
ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗದಿದ್ದರೇ, ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಸಚಿವ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಘೋಷಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗಲಿದೆ ಎಂಬುದಾಗಿ, ನಾನು ಬೇಕಾದರೆ, ರಕ್ತದಲ್ಲಿ ಬರೆದುಕೊಡುತ್ತೇನೆ. ಒಂದು ವೇಳೆ ಮೈತ್ರಿ ಸರ್ಕಾರ ಬೀಳದಿದ್ದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ಈ ಮೈತ್ರಿ ಸರ್ಕಾರವನ್ನು ನಾವಾಗಿಯೇ ಅಸ್ಥಿರ ಮಾಡಲ್ಲ. ಆಪರೇಷನ್ ಕಮಲ ಸಹ ನಡೆಸಲ್ಲ. ತನ್ನಿಂದ ತಾನೇ ಮೈತ್ರಿ ಸರ್ಕಾರ ಪತನವಾಗುವುದು ಸೂರ್ಯ, ಚಂದ್ರರಿರುವಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.ಕಾಂಗ್ರೆಸ್‍ನ ಅತೃಪ್ತ ಶಾಸಕರಿಂದಲೇ ಸಮ್ಮಿಶ್ರ ಸರ್ಕಾರ ಬೀಳುವುದೂ ಶತಃಸಿದ್ಧ ಎಂದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾದರೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರ ಸ್ಥಾನದಲ್ಲಿ ಕೂಡಲಿದ್ದಾರೆ ಎಂದರು.
ರಾಜ್ಯದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ಎಚ್.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್ ಅವರುಗಳ ಸರ್ಕಾರ ಮಾತ್ರವಿದ್ದು, ಹೇಗಾದರೂ ಮಾಡಿ ಅತೃಪ್ತ ಶಾಸಕರನ್ನು ಸಮಾಧಾನಪಡಿಸಿ, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳು ಕುತಂತ್ರ ನಡೆಸಿವೆ.
ಆದರೆ, ಮೈತ್ರಿ ನಾಯಕರು ಏನೇ ಮಾಡಿದರೂ ಸರ್ಕಾರ ಪತನವಾಗೋದಂತೂ ಖಚಿತ ಎಂದರು.ಕುಮಾರಸ್ವಾಮಿಗೆ ಸಿಎಂ ಸ್ಥಾನದಿಂದ ಇಳಿಸಲು ಕಾಂಗ್ರೆಸ್ಸಿನ ಪ್ರಬಲ ಗುಂಪಿನ ಶಾಸಕರು, ಜೆಡಿಎಸ್‍ನ ಕೆಲ ಅತೃಪ್ತ ಶಾಸಕರು ಸ್ಕೆಚ್ ಹಾಕಿದ್ದಾರೆ. ಕಾಂಗ್ರೆಸ್, ಜೆಡಿಎಸ್‍ನವರು ಬಿಜೆಪಿ ಚುನಾವಣೆಗೆ ಹೋಗುತ್ತದೆಂಬುದಾಗಿ, ಮೈತ್ರಿ ಪಕ್ಷಗಳ ಅತೃಪ್ತ ಶಾಸಕರಿಗೆ ಚುನಾವಣಾ ಗುಮ್ಮ ತೋರಿಸುತ್ತಿವೆ. ರಾಣೆಬೆನ್ನೂರಿನ ಶಾಸಕರ ಆರ್.ಶಂಕರ್‍ಗೆ ಕುಮಾರಸ್ವಾಮಿ, ಡಾ.ಪರಮೇಶ್ವರ, ಸಿದ್ದರಾಮಯ್ಯ ಇತರರು ಓಲೈಸುತ್ತಿದ್ದು ಇದೊಂದು ದೊಡ್ಡ ನಾಟಕವಷ್ಟೇ. ಅತೃಪ್ತರ್ಯಾರೂ ಮೈತ್ರಿ ಸರ್ಕಾರದಲ್ಲಿ ಉಳಿಯುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.
ಮೈತ್ರಿ ಸರ್ಕಾರ ಇರಬಾರದೆಂದು ನಮ್ಮ ಬಳಿಯೇ ಕಾಂಗ್ರೆಸ್-ಜೆಡಿಎಸ್ ಶಾಸಕರು ಮಾತನಾಡುತ್ತಿದ್ದಾರೆ. ಇನ್ನು ಜೆಡಿಎಸ್ ಪಕ್ಷವೂ ರಾಜ್ಯದಲ್ಲಿ ಇಬ್ಭಾಗವಾಗಿದ್ದು, ಕುಮಾರಸ್ವಾಮಿ ಗ್ರಾಮ ವಾಸ್ತವ್ಯವೆಂದು ಗಿಮಿಕ್ ಮಾಡುತ್ತಿದ್ದಾರಷ್ಟೇ. ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆಂದು ಹೇಳಿದ್ದೆ. ಈಗಲೂ ಇದಕ್ಕೆ ಬದ್ಧನಿದ್ದೇನೆ. ಯಾರು ಬೇಕಾದರೆ ಬರಲಿ, ನಾನು ಈ ಬಗ್ಗೆ ಬೆಟ್ಟಿಂಗ್ ಕಟ್ಟಲು ರೆಡಿ ಇದ್ದೇನೆ. ತಾಕತ್ತಿದ್ದರೆ, ನನ್ನ ಬಳಿ ಬರಲಿ ಎಂದು ಸವಾಲು ಹಾಕಿದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ ವಿಧಾನಸೌಧದ ಕುರ್ಚಿಗಳು ಯಾವಾಗ ನೋಡಿದರೂ ಖಾಲಿಯಾಗಿಯೇ ಇರುತ್ತವೆ. ಮುಖ್ಯಮಂತ್ರಿ ಕುಮಾರಸ್ವಾಮಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ತಕ್ಷಣವೇ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
