ಎಚ್ಚರಿಕೆ ಘಂಟೆ ಬಾರಿಸಲು ನೋಟಾ ಅಭಿಯಾನ

ದಾವಣಗೆರೆ:

        ಏಷ್ಯಾ ಖಂಡದಲ್ಲಿಯೇ 2ನೇ ಅತೀ ದೊಡ್ಡ ಕೆರೆಯಾಗಿರುವ ಸೂಳೆಕೆರೆಯು ತಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ ಎಂಬುದಾಗಿ ಹೇಳುತ್ತಿರುವ, ರಾಜಕಾರಣಿಗಳನ್ನು ಎಚ್ಚರಿಸುವ ಉದ್ದೇಶದಿಂದ ಖಡ್ಗ ಸ್ವಯಂ ಸೇವಕರ ಸಂಘ ಲೋಕಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನ ನಡೆಸಲು ಮುಂದಾಗಿದೆ.

       ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಸಿ.ಬಸವರಾಜ್ ಬೆಳ್ಳೂಡಿ, ಸೂಳೆಕೆರೆಯ ಒತ್ತುವರಿಯನ್ನು ತೆರವುಗೊಳಿಸಬೇಕು, ಹೂಳು ಎತ್ತಿಸುವ ಮೂಲಕ ಕಾಯಕಲ್ಪ ನೀಡಬೇಕೆಂಬ ಬೇಡಿಕೆಗಳನ್ನು ಇಟ್ಟುಕೊಂಡು ಸಂಘದಿಂದ ಹಾಲಿ ಹಾಗೂ ಮಾಜಿ ಸಂಸದರು, ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆದರೆ, ಇವರೆಲ್ಲರೂ ಸೂಳೆಕೆರೆಯು ತಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ ಎಂಬುದಾಗಿ ಉಡಾಫೆಯ ಉತ್ತರ ನೀಡುತ್ತಾರೆ. ಆದ್ದರಿಂದ ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ ನೋಟಾ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.

        64 ಚದರ ಕಿ.ಮೀ. ಸುತ್ತಳತೆ ಹೊಂದಿರುವ ಸೂಳೆಕೆರೆಯು ಒಟ್ಟು 4 ಟಿಎಂಸಿ ನೀರು ಸಂಗ್ರಹಣ ಸಾಮಥ್ರ್ಯವನ್ನು ಹೊಂದಿದೆ. ಆದರೆ, ಈಗ ಕೆರೆಯಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಕೇವಲ 0.6 ಟಿಎಂಸಿ ಮಾತ್ರ ನೀರು ಸಂಗ್ರಹವಾಗುತ್ತಿದೆ. ಅಲ್ಲದೆ, 5,747 ಎಕರೆ ವಿಸ್ತೀರ್ಣ ಇದೆ. ಕೆರೆ ಪೂರ್ಣವಾಗಿ ತುಂಬಿಕೊಂಡಿದ್ದಾಗ ಮುಳುಗಡೆಯಾಗಿದ್ದ ಒಂದೂವರೆ ಸಾವಿರ ಎಕರೆ ಭೂಮಿಯನ್ನು ನೀರಾವರಿ ಇಲಾಖೆಯು ಸ್ವಾಧೀನ ಪಡೆಸಿಕೊಂಡಿತ್ತು. ಆದರೆ, ಈ ಜಮೀನುಗಳಲ್ಲಿ ಉಳುಮೆ ಮಾಡದಂತೆ ರೈತರಿಗೆ ನಿರ್ದೇಶನ ನೀಡಿಲ್ಲ. ಹೀಗಾಗಿ ಈ ಒಂದೂವರೆ ಸಾವಿರ ಎಕರೆ ಕೆರೆಯ ಜಮೀನು ಒತ್ತುವರಿಯಾಗಿದೆ ಎಂದು ಆರೋಪಿಸಿದರು.

         ಕಳೆದ ನಾಲ್ಕೈದು ದಶಕಗಳಿಂದ ಸೂಳೆಕೆರೆಯು ರಾಜಕಾರಣಿಗಳಿಗೆ ಚುನಾವಣೆ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡು ರಾಜಕಾರಣಿಗಳು ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಸಂಸದರುಗಳಾಗಿ ಅಧಿಕಾರ ಅನುಭವಿಸಿದ್ದಾರೆ.

        ಆದರೆ, ಈ ಕೆರೆಗೆ ಕಾಯಕಲ್ಪ ನೀಡಲು ಯಾರೂ ಸಹ ಮುಂದಾಗಿಲ್ಲ. ಆದ್ದರಿಂದ ಸೂಳೆಕೆರೆಯ ಉಳಿವಿಗಾಗಿ ಹಾಗೂ ರಾಜಕಾರಣಿಗಳಿಗೆ ಎಚ್ಚರಿಕೆ ನೀಡಬೇಕೆಂಬ ಉದ್ದೇಶದಿಂದ ನೋಟಾ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸೂಳೆಕರೆಯ ನೀರು ಬಳಸುತ್ತಿರುವ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲೂ ನೋಟಾ ಅಭಿಯಾನ ನಡೆಸುವ ಮೂಲಕ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾ ಚಲಾಯಿಸುವ ಮೂಲಕ ಸೂಳೆಕೆರೆಯ ಅಭಿವೃದ್ಧಿ ಕಡೆಗಣಿಸಿರುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಷಣ್ಮುಖ ದೊಡ್ಡಘಟ್ಟ, ಚಂದ್ರಹಾಸ, ಕುಬೇಂದ್ರಸ್ವಾಮಿ, ಅಭಿಷೇಕ್ ನೀತಿಗೆರೆ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link