ಅಗತ್ಯ ವಸ್ತುಗಳ ಕಾರ್ಖಾನೆಗಳ ಷರತ್ತುಬದ್ಧ ಆರಂಭಕ್ಕೆ ಸೂಚನೆ

ಹಾವೇರಿ
 
     ನೊವೆಲ್ ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಸ್ಥಗಿತಗೊಳಿಸಲಾದ ಅಗತ್ಯ ವಸ್ತುಗಳ ಕಾರ್ಖಾನೆಗಳನ್ನು ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸುವ ಷರತ್ತಿನೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪರವಾನಿಗೆ ನೀಡಲಿದ್ದು, ಕಾರ್ಖಾನೆಗಳನ್ನು ಆರಂಭಿಸುವಂತೆ ಜಿಲ್ಲೆಯ ಕೈಗಾರಿಕೋದ್ಯಮಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಅವರು ಹೇಳಿದರು.
      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಭೆ ನಡೆಸಿದ ಅವರು ರೈತರ ಸಾಮಗ್ರಿಗಳು ಮಾರುಕಟ್ಟೆಗೆ ಹೋಗಬೇಕು. ಗ್ರಾಹಕರಿಗೆ ಅಗತ್ಯ ವಸ್ತುಗಳ ಕೊರತೆಯಾಗಬಾರದು. ಈ ಹಿನ್ನಲೆಯಲ್ಲಿ ಕೃಷಿಗೆ ಪೂರಕವಾದ ಕೈಗಾರಿಕೆಗಳು, ದಿನಸಿ ಪೂರಕ ಆಹಾರ ಸಂಸ್ಕರಣ ಘಟಕಗಳು, ಬೇಕರಿ ಸೇರಿದಂತೆ ನಿತ್ಯ ಬಳಕೆಯ ಉತ್ಪಾದನಾ ಘಟಕಗಳನ್ನು ಸುರಕ್ಷತಾ ಮಾನದಂಡವನ್ನು ಅನುಸರಿಸಿ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದರು.
     ಕೃಷಿ ಚಟುವಟಿಕೆಗೆ ಅನುಕೂಲಕರವಾಗುವ ಟ್ರ್ಯಾಕ್ಟರ್ ರಿಪೇರಿ, ಕೃಷಿ ಉಪಕರಣಗಳ ರಿಪೇರಿಗೆ ಯಾವುದೇ ನಿರ್ಭಂಧವಿಲ್ಲ. ಸರಕು ಸಾಗಾಣಿಕೆ ವಾಹನಗಳ ಗ್ಯಾರೇಜ್‍ಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗುವುದು. ಕಾರ್ಖಾನೆ ಮಾಲಿಕರು ತಮ್ಮ ಕಾರ್ಮಿಕರಿಗೆ ಬೇಕಾದ ಪಾಸ್‍ಗಳನ್ನು ಪಡೆಯಬೇಕು ಎಂದು ಸೂಚಿಸಿದರು.
     ಕೃಷಿ ಸೇವಾ ವಲಯ, ಕೃಷಿ ಬೀಜ ಉತ್ಪಾದನೆ, ರೇಷ್ಮೆ ಮಾರಾಟ, ಹೈನುಗಾರಿಕೆ, ಜಿನ್ನಿಂಗ್, ರಸಗೊಬ್ಬರ , ಆಹಾರ ಸಾಮಗ್ರಿಗಳ ಸಂಸ್ಕರಣೆ, ಗಿರಣಿ, ಎಣ್ಣೆ ಮತ್ತು ಪ್ಯಾಕಿಂಗ್ ಇಂಡಸ್ಟ್ರೀಸ್, ಬೇಕರಿ, ಫೀಶ್, ಪೌಟ್ರಿ, ಕ್ಯಾಟಲ್ ಫೀಡ್, ವೈದ್ಯಕೀಯ ಸುರಕ್ಷಾ ಸಾಮಗ್ರಿಗಳಾದ ಮಾಸ್ಕ್, ಸ್ಯಾನಿಟೈಸರ್ ತಯಾರಿಕೆ ಸೇರಿದಂತೆ ಅಗತ್ಯ ವಸ್ತುಗಳ ಉತ್ಪಾದನೆಯನ್ನು ಆರಂಭಿಸಲು ಯಾವುದೇ ಅಭ್ಯಂತರ  ಇರುವುದಿಲ್ಲ ಎಂದು ತಿಳಿಸಿದರು.
     ಅಪರ ಜಿಲ್ಲಾಧಿಕಾರಿ ಯೊಗೇಶ್ವರ ಅವರು ಮಾತನಾಡಿ, ಕಾರ್ಖಾನೆಗಳ ಆರಂಭಕ್ಕೆ ಸರ್ಕಾರದ ಅಧಿಸೂಚನೆಯಂತೆ ವಿನಾಯಿತಿ ಪಡೆದಿರಬೇಕು. ಕಾರ್ಖಾನೆಯ ಪ್ರವೇಶದಿಂದ ಹಿಡಿದು ಹೊರಗೆ ಬರುವವರೆಗೂ ಅವರಿಗೆ ಕರೋನಾ ವೈರಸ್ ಹರಡದಂತೆ ಮುಂಜಾಗ್ರತೆ ಹಾಗೂ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಬೇಕು. ಪ್ರತಿ ಕಾರ್ಮಿಕರಿಗೂ ಉತ್ತಮ ಗುಣಮಟ್ಟ ಮಾಸ್ಕ್, ಸ್ಯಾನಿಟೈಸರ್, ಕೈಗವಸ್ ಒದಗಿಸಬೇಕು.
 
      ಪ್ರತಿ ಕಾರ್ಖಾನೆಯ ಒಳಗೆ ಹಾಗೂ ಕೆಲಸಮಾಡುವ ಜಾಗದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಪ್ರತಿನಿತ್ಯ ಕಾರ್ಮಿಕರಿಗೆ ಕರೋನಾ ಜಾಗೃತಿ ಮುನ್ನೆಚ್ಚರಿಕೆ ಕುರಿತಂತೆ ಜಾಗೃತಿ ಮೂಡಿಸಬೇಕು. ಕಾರ್ಮಿಕರಿಗೆ ಕೆಲಸಮಾಡುವ ಸ್ಥಳಕ್ಕೆ ಮನೆಯಿಂದ ಹೋಗಲು ಪಾಸ್ ನೀಡಲಾಗುವುದು. ಪಾಸ್ ವ್ಯವಸ್ಥೆಗಾಗಿ ಜಿಲ್ಲಾಡಳಿತ ಭವನದಲ್ಲಿ ಸ್ಪಂದನ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ,  ಕೈಗಾರಿಕಾ ಇಲಾಖೆ  ಸಹಾಯಕ ನಿರ್ದೇಶಕ ವಿನಾಯಕ ಜೋಶಿ, ವಿವಿಧ ಇಲಾಖೆ ಅಧಿಕಾರಿಗಳು  ಹಾಗೂ ವಿವಿಧ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link