ತುಮಕೂರು

ತುಮಕೂರು ಮಹಾನಗರದಲ್ಲಿ ದಿನವೂ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪ್ರತಿನಿತ್ಯ ಬೆಳಗಿನ ಉಪಹಾರ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆ ಸಜ್ಜಾಗಿದ್ದು, ಅತಿ ಶೀಘ್ರವೇ ಇದು ಜಾರಿಗೆ ಬರಲಿದೆ. ಪ್ರಾರಂಭದ ದಿನಾಂಕ ಪ್ರಕಟಿಸುವುದೊಂದು ಮಾತ್ರ ಈಗ ಬಾಕಿ ಉಳಿದಿದೆ.
ಪಾಲಿಕೆಯಲ್ಲಿ ಇದೀಗ ಖಾಯಂ ಹಾಗೂ ನೇರನೇಮಕದ ಒಟ್ಟು 507 ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ನಿರ್ದೇಶನದ ಪ್ರಕಾರ ಇವರೆಲ್ಲರಿಗೆ ಅವರು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲೇ ಪ್ರತಿನಿತ್ಯ ಬೆಳಗ್ಗೆ 9 ಗಂಟೆ ಹೊತ್ತಿಗೆ ಉಪಹಾರವನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಆದೇಶದ ಪ್ರಕಾರ ಪ್ರತಿನಿತ್ಯ ಒಬ್ಬ ವ್ಯಕ್ತಿಯ ಉಪಹಾರಕ್ಕೆ ಗರಿಷ್ಠ 20 ರೂ. ಬಳಸಬಹುದಾಗಿದೆ.
ಪ್ರಸ್ತುತ ಈ ಉಪಹಾರ ವಿತರಣೆಯ ಗುತ್ತಿಗೆಯನ್ನು ದೆಹಲಿ ಮೂಲದ “ರಿವಾಡ್ರ್ಸ್” (ರೂರಲ್ ಎನ್ವಿರಾನ್‍ಮೆಂಟ್ ಅಂಡ್ ವಾಟರ್ ಅಸೆಟ್ಸ್ ರೀಪ್ರೊಡಕ್ಟೀವ್ ಅಂಡ್ ಡೆವೆಲಪ್‍ಮೆಂಟ್ ಸೊಸೈಟಿ) ಎಂಬ ಸರ್ಕಾರೇತರ ಸಂಸ್ಥೆಯು ಪಡೆದುಕೊಂಡಿದೆ. ಈ ಸಂಸ್ಥೆಯು 18 ರೂ. 80 ಪೈಸೆಗೆ ಒಂದು ಉಪಹಾರವನ್ನು ನೀಡಲಿದೆ. ಉಪಹಾರಕ್ಕಾಗಿ ವಾರ್ಷಿಕ ಸುಮಾರು 34 ಲಕ್ಷ ರೂ.ಗಳನ್ನು ಪಾಲಿಕೆಯು ವಿನಿಯೋಗಿಸಲಿದೆ.
ಉಪಹಾರದ ಟೆಂಡರ್‍ನಲ್ಲಿ ಭಾಗವಹಿಸಿದ್ದ ಇತರೆ ಟೆಂಡರುದಾರರು ಒಂದು ಉಪಹಾರಕ್ಕೆ 18 ರೂ. 95 ಪೈಸೆ ಹಾಗೂ 18 ರೂ. 90 ಪೈಸೆ ಎಂದು ನಮೂದಿಸಿದ್ದರು. ಆದರೆ ರಿವಾಡ್ರ್ಸ್ ಸಂಸ್ಥೆಯ ದರವು ಇವೆರಡಕ್ಕಿಂತಲೂ ಕಡಿಮೆ ಇದ್ದುದರಿಂದ ಆ ಸಂಸ್ಥೆಗೇ ಗುತ್ತಿಗೆ ದೊರೆತಿದೆ. ಪ್ರಸ್ತುತ ರಿವಾಡ್ರ್ಸ್ ಸಂಸ್ಥೆಯು ಕರ್ನಾಟಕದ ಚಿತ್ರದುರ್ಗ, ಕೋಲಾರ, ರಾಮನಗರ ಮೊದಲಾದೆಡೆ ಪೌರಕಾರ್ಮಿಕರಿಗೆ ಉಪಹಾರ ವಿತರಿಸುವ ಗುತ್ತಿಗೆ ಹೊಂದಿದೆ. ಇದೇ ರೀತಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲೂ ಉಪಹಾರದ ಗುತ್ತಿಗೆ ಪಡೆದಿದೆ. ಈಗ ತುಮಕೂರು ನಗರದಲ್ಲಿ ಗುತ್ತಿಗೆ ಪಡೆದುಕೊಂಡಿದೆ.
ಸ್ಟೀಲ್ ಡಬ್ಬಿಗೆ ಚಿಂತನೆ
ಈ ಉಪಹಾರವನ್ನು ಪೌರಕಾರ್ಮಿಕರ ಹಾಜರಾತಿ ಕೇಂದ್ರ (ಅಟೆಂಡೆನ್ಸ್ ಪಾಯಿಂಟ್)ದಲ್ಲಿ ಆಯಾ ವಿಭಾಗದ ಹೆಲ್ತ್‍ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ ವಿತರಿಸಲು ಉದ್ದೇಶಿಸಲಾಗಿದೆ. ಪೊಟ್ಟಣ ಕಟ್ಟಿ ಅದನ್ನು ಸರಬರಾಜು ಮಾಡುವ ಬದಲು, ಎಲ್ಲ 507 ಪೌರಕಾರ್ಮಿಕರಿಗೂ ಸ್ಟೀಲ್ ಡಬ್ಬಿಯಲ್ಲಿ ಉಪಹಾರ ವಿತರಿಸುವ ಬಗ್ಗೆ ಪಾಲಿಕೆ ಅಧಿಕಾರಿಗಳು ಸದರಿ ಸಂಸ್ಥೆಯೊಂದಿಗೆ ಚರ್ಚೆ ನಡೆಸಿದ್ದಾರೆ.
ಇದರಿಂದ ಉಪಹಾರದ ತಾಜಾತನ ಉಳಿಯುತ್ತದೆ ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆಂಬುದು ಅಧಿಕಾರಿಗಳ ಅಭಿಪ್ರಾಯ. ಕುಡಿಯುವ ನೀರಿನ ಸೌಲಭ್ಯ ಇರುವ ಕಡೆಯೇ ಉಪಹಾರದ ವ್ಯವಸ್ಥೆ ಇರುತ್ತದೆ. ಹೀಗಾಗಿ ಉಪಹಾರ ಸ್ವೀಕರಿಸಿದ ಬಳಿಕ ತಕ್ಷಣವೇ ಎಲ್ಲರೂ ಸ್ಟೀಲ್ ಡಬ್ಬಿಯನ್ನು ತೊಳೆದು ಹಿಂತಿರುಗಿಸಬೇಕು. ಬಳಿಕ ಗುತ್ತಿಗೆದಾ ರರು ಇದನ್ನು ಮರುದಿನ ಬಳಸುವಾಗ ಮತ್ತೊಮ್ಮೆ ಸ್ವಚ್ಛಗೊಳಿಸಿ ಉಪಹಾರ ತುಂಬಿಸಲು ಅನುಕೂಲವಾಗಲಿದೆ ಯೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸ್ಟೀಲ್ ಡಬ್ಬಿ ಮೂಲಕ ಉಪಹಾರ ವಿತರಣೆ ಬಹುತೇಕ ಜಾರಿಗೆ ಬರಲಿದೆಯೆಂದು ನಿರೀಕ್ಷಿಸಲಾಗಿದೆ.
ರಿವಾಡ್ರ್ಸ್ ಸಂಸ್ಥೆಯು ತುಮಕೂರಿನಲ್ಲಿ ಗುತ್ತಿಗೆ ಪಡೆದಿರುವುದರಿಂದ ನಗರದ ಒಂದು ಸ್ಥಳದಲ್ಲಿ ಉಪಹಾರ ತಯಾರಿಕಾ ಕೇಂದ್ರ ತೆರೆಯಲಿದೆ. ಪ್ರತಿನಿತ್ಯ ಪೌರಕಾರ್ಮಿಕರಿಗೆ ಅಲ್ಲಿ ರೈಸ್ ಐಟಂ ತಯಾರಾಗಲಿದೆ. ನಿಗದಿತ ಪ್ರಮಾಣದ ಉಪಹಾರವನ್ನು ಸ್ಟೀಲ್ ಡಬ್ಬಿಯಲ್ಲಿ ತುಂಬಿ ನಿಗದಿತ ಸ್ಥಳಗಳಿಗೆ ಸರಬರಾಜು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
