ಸಿದ್ದು ಜನಪರ ಯೋಜನೆಗಳನ್ನು ಜನ ನೆನೆಯುತ್ತಿದ್ದಾರೆ : ಅನಿಲ್ ಲಾಡ್.

ಹೊಸಪೇಟೆ :

   ಭಾಗ್ಯಗಳ ಸರದಾರ, ಜನಪರ ಕಾಳಜಿಯುಳ್ಳ ಮಾಜಿ ಸಿಎಂ ಸಿದ್ದರಾಮಯ್ಯನವರು ಜಾರಿಗೆ ತಂದ ಯೋಜನೆಗಳನ್ನು ಜನ ಹೋದಲ್ಲೆಲ್ಲ ನೆನೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಅನಿಲ್‍ಲಾಡ್ ಹೇಳಿದರು.

    ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರವಾಗಿ ಇಲ್ಲಿನ ಸಂಕ್ಲಾಪುರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ 5 ವರ್ಷದ ಅವಧಿಯಲ್ಲಿ ಜಾರಿಗೆ ತಂದ ಅನ್ನಭಾಗ್ಯ, ಕ್ಷೀರಭಾಗ್ಯ, ಪಶುಭಾಗ್ಯ, ಕೃಷಿಭಾಗ್ಯ, ರೈತರಿಗೆ ಬಡ್ಡಿರಹಿತ ಸಾಲ, ಶಾಲಾ ಮಕ್ಕಳಿಗೆ ವಿದ್ಯಾಸಿರಿ ಯೋಜನೆ, ರೈತರಿಗೆ ಸಾಲಮನ್ನಾ, ಹಳ್ಳಿ ಹಳ್ಳಿಗೆ ಶುದ್ದ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಜನ ಕೊಂಡಾಡುತ್ತಿದ್ದಾರೆ. ಆದರೆ ಈಗಿನ ಬಿಜೆಪಿ ಏನು ಕೆಲಸ ಮಾಡುತ್ತಿಲ್ಲ. ಸರ್ಕಾರ ರೈತರಿಗೆ ನೆರವಿಗೆ ಬರುತ್ತಿಲ್ಲ. ನೆರೆ ಸಂತ್ರಸ್ಥರಿಗೆ ಪರಿಹಾರ ನೀಡಲು ಆಗುತ್ತಿಲ್ಲ. ಮನೆ ಮಠ ಕಳೆದುಕೊಂಡವರು ಬೀದಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಬಿಜೆಪಿ ಸರ್ಕಾರ ಬರೀ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಇವರಿಗೆ ಜನರ ಬಗ್ಗೆ ಕಾಳಜಿಯಿಲ್ಲ. ಇವರಿಗೆ ನೆರೆ ಸಂತ್ರಸ್ಥರ ಕಾಳಜಿಗಿಂತ ಸರ್ಕಾರ ಉಳಿಸಿಕೊಳ್ಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ಶತಾಯಗತಾಯ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

   ಹಿಂದಿನ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನೇಕ ಜನಪರ ಕಾರ್ಯಕ್ರಮಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಕಾಂಗ್ರೆಸ್ ಯಾವಾಗಲೂ ಬಡವರ, ಶೋಷಿತರ, ಹಿಂದುಳಿದವರ ಹಾಗು ಎಲ್ಲಾ ವರ್ಗದ ಜನರ ಪರವಾಗಿ ಶ್ರಮಿಸುತ್ತಿದೆ. ಹೀಗಾಗಿ ಸರಳ, ಸಜ್ಜನಿಕೆಯ ವ್ಯಕ್ತಿತ್ವವುಳ್ಳ ವೆಂಕಟರಾವ್ ಘೋರ್ಪಡೆಯನ್ನು ಗೆಲ್ಲಿಸಬೇಕು. ಉಪಚುನಾವಣೆಗೆ ಕಾರಣರಾದ ಆನಂದಸಿಂಗ್‍ರನ್ನು ಸೋಲಿಸಬೇಕು ಎಂದು ಮನವಿ ಮಾಡಿದರು.ಬಳಿಕ ಕಮಲಾಪುರ, ಚಪ್ಪರದಳ್ಳಿ, ಚಿತ್ತವಾಡಿಗಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು.

  ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಇಮಾಮ್ ನಿಯಾಜಿ, ವಿ.ಸೋಮಪ್ಪ, ಮುಖಂಡರಾದ ಬಿ.ಎಂ.ಪಾಟೀಲ್, ನಿಂಬಗಲ್ ರಾಮಕೃಷ್ಣ, ಎಚ್.ಮಹೇಶ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link