ದಾವಣಗೆರೆ :
ಮುಸ್ಲಿಂ ವಿರೋಧಿ ಹೇಳಿಕೆ ನೀಡಿರುವ ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಕ್ಷಣವೇ ಮುಸ್ಲಿಂ ಸಮುದಾಯದ ಕ್ಷಮೆ ಯಾಚಿಸಬೇಕು ಹಾಗೂ ಮುಖ್ಯಮಂತ್ರಿಗಳು ಇವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಎಸಿ ಕಚೇರಿ ಎದುರು ಜಮಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ಮುಸ್ಲಿಮರ ವಿರುದ್ಧ ವಿವಾದಾತ್ಮ ಹೇಳಿಕೆ ನೀಡಿರುವ ಎಂ.ಪಿ.ರೇಣುಕಾಚಾರ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ರೇಣುಕಾಚಾರ್ಯರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂವಿಧಾನ ಉಳಿವಿಗಾಗಿ ವೇದಿಕೆಯ ಟಿ.ಅಸ್ಗರ್, ಒಬ್ಬ ಜನಪ್ರತಿನಿಧಿಯಾಗಿರುವ ರೇಣುಕಾಚಾರ್ಯ ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿ, ಇನ್ನೊಂದು ಸಮುದಾಯವನ್ನು ಎತ್ತಿ ಕಟ್ಟುವ ಮೂಲಕ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಸರ್ವ ಜನರು ಇಲ್ಲಿ ಜೀವನ ನಡೆಸುವ ಹಕ್ಕು ಹೊಂದಿದ್ದಾರೆ. ಆದರೆ, ಇದನ್ನು ಅರಿಯದ ರೇಣುಕಾಚಾರ್ಯ ಅವರು ಅವಿವೇಕಿ ತರಹ ಮಾತನಾಡಿದ್ದಾರೆ. ಮುಸ್ಲಿಮರು ಬಿಜೆಪಿಗೆ ಮತ ನೀಡಿಲ್ಲ ಎಂಬ ಕಾರಣಕ್ಕೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಇಂತಹ ನಾಲಾಯಕ್ ರೇಣುಕಾಚಾರ್ಯನಿಗೆ ಜನಪ್ರತಿನಿಧಿಯಾಗುವ ಯಾವುದೇ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಮಸೀದಿಗಳಲ್ಲಿ ಪ್ರಾರ್ಥನೆ ಹೆಸರಿನಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಫತ್ವಾ ಹೊರಡಿಸುತ್ತೀರಿ. ನಿಮ್ಮನ್ನು ಎಲ್ಲಿ ಇಡಬೇಕು ಅಲ್ಲಿಡುತ್ತೀನಿ. ಇನ್ನೂ ಮುಂದೆ ರಾಜಕಾರಣ ಮಾಡಿ ತೋರಿಸುತ್ತೇನೆ ಎಂದು ಹೇಳಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಅವರು ಹೇಳಿದಂತೆ ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವುದನ್ನು ಸಾಬೀತುಪಡಿಸಬೇಕು ಎಂದು ಆಗ್ರಹಿಸಿದರು.
ನೆರಳು ಬೀಡಿ ಕಾರ್ಮಿಕರ ಯೂನಿಯನ್‍ನಿನ ಎಂ.ಕರಿಬಸಪ್ಪ ಮಾತನಾಡಿ, ಶಾಸಕರು ಯಾರಿಗೇ ಅನುದಾನ ನೀಡಿದರೂ ಅವರ ಮನೆಯಿಂದ ತಂದು ನೀಡುವುದಿಲ್ಲ. ಅವರ ಮನೆಯ ಅನುದಾನವು ನಮಗೆ ಬೇಕಿಲ್ಲ. ಜನರ ತೆರಿಗೆ ಹಣ ಎಲ್ಲರಿಗೂ ಸೇರಬೇಕಿದೆ. ಅದರಂತೆ ಸಂವಿಧಾನದತ್ತವಾಗಿ ಪ್ರತಿಯೊಬ್ಬರಿಗೂ ಸಿಗಲಿದೆ. ಆದರೆ, ತಮ್ಮ ಮನೆಯಿಂದ ಹಣ ನೀಡುವ ರೀತಿಯಲ್ಲಿ ಒಂದು ಸಮುದಾಯದ ವಿರುದ್ದ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿಗೆ ಮತ ನೀಡದ ಮುಸ್ಲಿಂ ಕೇರಿಗಳ ಅಭಿವೃದ್ಧಿಗೆ ಅನುದಾನ ಕೊಡುವುದಿಲ್ಲ ಎಂದು ಹೇಳಿಕೆ ನೀಡಿರುವ ರೇಣುಕಚಾರ್ಯರ ಸ್ಥಾನಕ್ಕೆ ಶೊಭೆತರುವಂತದಲ್ಲ. ಈ ಕೂಡಲೇ ಹೇಳಿಕೆ ವಾಪಾಸ್ ಪಡೆದು ಕ್ಷಮೆಯಾಚಿಸಬೇಕು. ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಜಮೀರ್ ಅಹಮದ್ ಮಾತನಾಡಿ, ಶಾಸಕರು ಮಂತ್ರಿ ಪಟ್ಟ ಗಿಟ್ಟಿಸಿಕೊಳ್ಳುವ ಸಲುವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಅಸಂವಿಧಾನಕ ಹೇಳಿಕೆ ನೀಡಿದ್ದಾರೆ. ಇದು ಪ್ರಜಾತಂತ್ರದ ಆಶಯಕ್ಕೆ ವಿರುದ್ಧವಾಗಿದೆ. ಬಿಜೆಪಿಗಲು ಸ್ಪರ್ಧೆಗೆ ಬಿದ್ದವರಂತೆ ಒಂದು ಸಮುದಾಯದ ವಿರುದ್ಧ ಹೇಳಿಕೆ ನೀಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಸೋಮಶೇಖರ ರೆಡ್ಡಿ, ಯತ್ನಾಳ ಸೇರಿದಂತೆ ಇತರರು ಮುಸ್ಲಿಂ ಸಮುದಾಯದ ವಿರುದ್ಧ ಹೇಳಿಕೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಕೆ.ಜಿ.ಶಿವಕುಮಾರ್, ನೆರಳು ಬೀಡಿ ಕಾರ್ಮಿಕರ ಯೂನಿಯನ್‍ನ ಜಬೀನಾ ಖಾನಂ, ಜನಶಕ್ತಿಯ ಸತೀಶ್ ಅರವಿಂದ್, ಭೀಮಾ ಆರ್ಮಿಯ ಅಬ್ದುಲ್ ಘನಿ, ಮಹಬೂಬ್ ಬಾಷಾ, ಆದಿಲ್ ಖಾನ್, ಫರ್ವಿನ್, ಅನ್ವರ್, ಗುರುಮೂರ್ತಿ, ಅಹ್ಮದ್ ಬಾಷಾ, ಎನ್‍ಎಸ್‍ಯುಐ ಮುಖಂಡ ಮುಜಾಹಿದ್ ಪಾಷ್, ಎಲ್.ಎಂ.ಎಚ್.ಸಾಗರ್, ಕೊಯೆಬ್, ಎಂ.ಕೆ.ಲಿಯಾಖತ್ ಅಲಿ, ಜಾವಿದ್, ಸಾಧಿಕ್, ಸೈಯದ್ ಆರಿಫ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ