ತುಮಕೂರು
ತುಮಕೂರು ನಗರದ ವಿವಿಧ ಪ್ರದೇಶಗಳಲ್ಲಿ ಬೀಡಾಡಿ ಹಂದಿಹಿಡಿಯುವ ಕಾರ್ಯಾಚರಣೆಯನ್ನು ತುಮಕೂರು ಮಹಾನಗರ ಪಾಲಿಕೆಯು ಕೈಗೊಂಡಿದ್ದು, ಇದರ ವಿರುದ್ಧ ಹಂದಿ ಸಾಕುವ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಹಂದಿ ಹಿಡಿಯಲು ಬಂದಿದ್ದ ವಾಹನಕ್ಕೆ ಮುತ್ತಿಗೆ ಹಾಕಿದ್ದಲ್ಲದೆ, ಇತ್ತ ತುಮಕೂರು ಮಹಾನಗರ ಪಾಲಿಕೆಯ ಕಚೇರಿಗೂ ಆಗಮಿಸಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ಘಟನೆ ಗುರುವಾರ ನಡೆದಿದೆ.ನಗರದ ಬಡ್ಡಿಹಳ್ಳಿಯ ಓರ್ವ ಶಾಲಾ ಬಾಲಕನಲ್ಲಿ ಮೆದುಳುಜ್ವರ ಇರುವುದು ಇತ್ತೀಚೆಗೆ ದೃಢಪಟ್ಟ ಹಿನ್ನೆಲೆಯಲ್ಲಿ ಇದಕ್ಕೆ ಕಾರಣವಾದ ಹಂದಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಆರೋಗ್ಯ ಇಲಾಖೆಯು ತುಮಕೂರು ಮಹಾನಗರ ಪಾಲಿಕೆಗೆ ತಾಕೀತು ಮಾಡಿದೆ.
ಈ ಕಾರಣದಿಂದ ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆಯು ಬೀಡಾಡಿ ಹಂದಿಗಳನ್ನು ಹಿಡಿದೊಯ್ಯಲು ಕ್ರಮ ಕೈಗೊಂಡಿದೆ. ಗುರುವಾರ ಬೆಳಗ್ಗೆ ದಿಬ್ಬೂರು, ಮೆಳೆಕೋಟೆ, ರಾಜೀವ್ ಗಾಂಧಿ ನಗರ ಮೊದಲಾದೆಡೆ ಹಂದಿ ಹಿಡಯುವ ಕಾರ್ಯಾಚರಣೆಯನ್ನು ಪೊಲೀಸ್ ಬೆಂಗಾವಲಿನಲ್ಲಿ ಕೈಗೊಳ್ಳಲಾಗಿತ್ತು. ಆಗ ಹಂದಿಸಾಕುವ ಕುಟುಂಬದ ನೂರಾರು ಮಹಿಳೆಯರು ಆಗಮಿಸಿ, ಕಾರ್ಯಾಚರಣೆಯ ವಾಹನಗಳಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.
ಇದಲ್ಲದೆ ಮಹಾನಗರ ಪಾಲಿಕೆಯ ಕಚೇರಿಗೂ ಆಗಮಿಸಿದರು. ಆಯುಕ್ತರು ಕಚೇರಿಯಲ್ಲಿ ಇಲ್ಲದಿದ್ದುದರಿಂದ ನೇರವಾಗಿ ಪಾಲಿಕೆಯ ಆರೋಗ್ಯಶಾಖೆಗೆ ತೆರಳಿ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಮತ್ತು ಸಿಬ್ಬಂದಿಗೆ ಮುತ್ತಿಗೆ ಹಾಕಿದರು. ಈಗ ಹಿಡಿದಿರುವ ಹಂದಿಗಳನ್ನು ಬಿಟ್ಟುಬಿಡಬೇಕೆಂದೂ, ಇನ್ನುಮುಂದೆ ಹಂದಿಗಳನ್ನು ಬೀದಿಗೆ ಬಿಡುವುದಿಲ್ಲವೆಂದೂ ಆ ಮಹಿಳೆಯರು ಅಲವತ್ತುಕೊಂಡರು. ಆದರೆ ಪಾಲಿಕೆ ಅಧಿಕಾರಿಗಳು ಈ ಮನವಿಯನ್ನು ತಿರಸ್ಕರಿಸಿದರು.
ಮೆದುಳು ಜ್ವರ ಪ್ರಕರಣ ಕಂಡುಬಂದಿರುವುದು ಗಂಭೀರ ಸಮಸ್ಯೆ ಆಗಿರುವುದರಿಂದ ಆರೋಗ್ಯ ಇಲಾಖೆಯ ಸೂಚನೆಯಂತೆ ಬೀಡಾಡಿ ಹಂದಿಗಳ ಹಾವಳಿಯನ್ನು ನಿಯಂತ್ರಿಸಲೇಬೇಕಾಗಿದೆ. ಸಾಕುವವರು ತಮ್ಮ ಹಂದಿಗಳನ್ನು ಬೀದಿಗೆ ಬಿಡಬಾರದಷ್ಟೇ ಎಂದು ಅಧಿಕಾರಿಗಳು ಖಡಕ್ ಆಗಿ ಹೇಳಿ, ಆ ಮಹಿಳೆಯರನ್ನು ಅಲ್ಲಿಂದ ಕಳಿಸಿದರು.
80 ಹಂದಿಗಳು ವಶಕ್ಕೆ
ಇತ್ತ ಕಾರ್ಯಾಚರಣೆಗೆ ತಮಿಳುನಾಡಿನಿಂದ ವಾಹನಗಳಲ್ಲಿ ಬಂದಿದ್ದ ತಂಡವು ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿತು. ಪಾಲಿಕೆ ಅಧಿಕಾರಿಗಳು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಿಸಿದ್ದರಿಂದ, ನಗರದ ದಿಬ್ಬೂರು, ಶಿರಾಗೇಟ್,ಮೆಳೆಕೋಟೆ, ಮರಳೂರು, ಉಪ್ಪಾರಹಳ್ಳಿ ಮೊದಲಾದೆಡೆ ಬೀದಿಗಳಲ್ಲಿ ಕಂಡುಬಂದ ಸುಮಾರು 80 ಹಂದಿಗಳನ್ನು ಹಿಡಿದು ಸಾಗಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ