ಸ್ಮಾರ್ಟ್‍ಸಿಟಿ ರಸ್ತೆ ಅಗೆತದಿಂದ : ಜಿಲ್ಲಾ ಆಸ್ಪತ್ರೆಯಲ್ಲಿ ಸಮಸ್ಯೆ

ತುಮಕೂರು

   ತುಮಕೂರು ನಗರದಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 11 ದಿನಗಳಿಂದ ಇಂಟರ್‍ನೆಟ್ ಸೇವೆ ಸ್ಥಗಿತಗೊಂಡಿದ್ದು, ಇದರಿಂದ ಇಂಟರ್‍ನೆಟ್ ಆಧಾರಿತ ಸೇವೆಗಳು ಸಿಗದೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.ಸ್ಮಾರ್ಟ್‍ಸಿಟಿ ಯೋಜನೆ ಕಾಮಗಾರಿಗಾಗಿ ನಗರದಲ್ಲಿ ರಸ್ತೆಗಳನ್ನು ಅಗೆಯಲಾಗುತ್ತಿದ್ದು, ಇದರಿಂದ ಬಿ.ಎಸ್.ಎನ್.ಎಲ್.ಗೆ ಸೇರಿದ ಕೇಬಲ್‍ಗಳಿಗೆ ಧಕ್ಕೆ ಆಗಿರುವುದೇ ಈ ಸಮಸ್ಯೆಗೆ ಕಾರಣವೆಂದು ಹೇಳಲಾಗಿದೆ.

    ಜನವರಿ 3 ರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಬಿ.ಎಸ್.ಎನ್.ಎಲ್. ಗೆ ಸೇರಿದ ಇಂಟರ್‍ನೆಟ್ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ. ಇಡೀ ಆಸ್ಪತ್ರೆಯ ಆನ್‍ಲೇನ್ ಸೇವೆಯೆಲ್ಲವೂ ಈ ಇಂಟರ್‍ನೆಟ್ ಸಂಪರ್ಕವನ್ನೇ ಅವಲಂಬಿಸಿದೆ. ಆದರೆ ಇಂಟರ್‍ನೆಟ್ ಇಲ್ಲದಿರುವುದರಿಂದ ಅವೆಲ್ಲ ಆನ್‍ಲೇನ್ ಸೇವೆಗಳೂ ಸ್ಥಗಿತವಾಗಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

   ವಿಶೇಷವಾಗಿ ಆನ್‍ಲೈನ್ ಸೇವೆಯಾದ ಜನನ ಮತ್ತು ಮರಣ ಪ್ರಮಾಣ ಪತ್ರ ತುರ್ತಾಗಿ ದೊರಕುತ್ತಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಸಕಾಲ ಯೋಜನೆಯ ಸೇವೆಗಳಿಗೂ ಇದೇ ಸಮಸ್ಯೆ ಎದುರಾಗಿದೆ. ಇನ್ನು ಆಸ್ಪತ್ರೆಯ ಒಳರೋಗಿಗಳು ಮತ್ತು ಹೊರರೋಗಿಗಳ ನೋಂದಣಿಯೂ ಆನ್‍ಲೈನ್‍ನಲ್ಲಿ ಆಗುವುದಕ್ಕೆ ತೊಡಕಾಗಿದ್ದು, ಇದೊಂದನ್ನು ಮಾತ್ರ ಈಗ ರಿಜಿಸ್ಟರ್‍ನಲ್ಲಿ ನೋಂದಾಯಿಸುವ ಮೂಲಕ ಮಾಡಲಾಗುತ್ತಿದೆ. ಹೆರಿಗೆ ಭತ್ಯೆಗೆ ಸಂಬಂಧಿಸಿದ ದಾಖಲೆಗಳ ಅಪ್‍ಲೋಡ್‍ಗೂ ತೊಡಕಾಗಿದೆ. ಇಂಟರ್‍ನೆಟ್ ಇಲ್ಲದೆ ಹೀಗೆ ಅನೇಕ ಸಮಸ್ಯೆಗಳು ಜಿಲ್ಲಾ ಆಸ್ಪತ್ರೆಯಲ್ಲಿ ಉದ್ಭವಿಸಿವೆ.

    ಇಂಟರ್‍ನೆಟ್ ಸಂಪರ್ಕ ಸ್ಥಗಿತವಾಗಿರುವ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಬಿ.ಎಸ್.ಎನ್.ಎಲ್. ಗಮನ ಸೆಳೆದಾಗ ಬಿ.ಎಸ್.ಎನ್.ಎಲ್. ತನ್ನ ಅಸಹಾಯಕತೆ ವ್ಯಕ್ತಪಡಿಸಿದೆಯೆಂದು ಹೇಳಲಾಗಿದೆ. ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಾಗಿ ರಸ್ತೆಗಳನ್ನು ಅಗೆಯುವಾಗ, ಬಿ.ಎಸ್.ಎನ್.ಎಲ್. ಕೇಬಲ್‍ಗಳಿಗೂ ಧಕ್ಕೆ ಆಗುತ್ತಿರುವುದೇ ಇಂತಹ ಸಮಸ್ಯೆಗೆ ಕಾರಣವೆಂದು ಬಿ.ಎಸ್.ಎನ್.ಎಲ್. ಉತ್ತರಿಸಿದೆಯೆನ್ನಲಾಗಿದೆ.

    ನಗರದ 30 ನೇ ವಾರ್ಡ್‍ನ ಕಾರ್ಪೊರೇಟರ್ ವಿಷ್ಣುವರ್ಧನ್, ತಮ್ಮ ವಾರ್ಡ್‍ನ ನಿವಾಸಿಯೊಬ್ಬರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಜನನ ಪ್ರಮಾಣ ಪತ್ರ ಲಭಿಸದೆ ಆಗಿರುವ ತೊಂದರೆಯನ್ನು ನಿವಾರಿಸುವ ಸಲುವಾಗಿ ಪ್ರಯತ್ನಶೀಲರಾದಾಗ, ಜಿಲ್ಲಾ ಆಸ್ಪತ್ರೆ ಇಂತಹುದೊಂದು ಜ್ವಲಂತ ಸಮಸ್ಯೆ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap