ಲಂಚಮುಕ್ತ ಕರ್ನಾಟಕ ವೇದಿಕೆಯಿಂದ ಜಿ.ಪಂ ಎದಿರು ಪ್ರತಿಭಟನೆ..!!

ತುಮಕೂರು

           ಕುಣಿಗಲ್ ತಾಲ್ಲೂಕಿನ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ಉಪವಿಭಾಗದಿಂದ ನಡೆದಿರುವ ಎಲ್ಲಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಭ್ರಷ್ಟಾಚಾರಗಳ ತನಿಖೆ ಮಾಡಲು ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ಲಂಚಮುಕ್ತ ಕರ್ನಾಟಕ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.

          ಸೋಮವಾರ ತುಮಕೂರು ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ, ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ 2012-13 ರಿಂದ 2015-16ನೇ ಸಾಲಿನವರೆಗೆ ನಡೆದ ವಿವಿಧ ಯೋಜನೆಯ ಕಾಮಗಾರಿಗಳನ್ನು ಮಾಡದೆ ಬಿಲ್ ಮಾಡಿಕೊಂಡು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಕೋಟ್ಯಂತರ ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ. ಸಾರ್ವಜನಿಕರು ಕಟ್ಟುವ ತೆರಿಗೆ ಹಣ ಭ್ರಷ್ಟರ ಪಾಲಾಗಿದ್ದು, ಈ ಬಗ್ಗೆ ತನಿಖಾ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

         ಈ ಸಂಬಂಧಪಟ್ಟಂತೆ 2017 ರಿಂದಲೂ ವಿವಿಧ ರೀತಿಯ ಪ್ರತಿಭಟನೆಗಳನ್ನು ಮಾಡಲಾಗಿದೆ. ಹಲವು ಬಾರಿ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆಯಾಗಲಿ ದೊರಕಿಲ್ಲ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತಮಟೆ ಚಳವಳಿ ನಡೆಸಿ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಕ್ರಮ ಜರುಗಿಸಿಲ್ಲ.

          ಅಲ್ಲದೆ ಕಾರ್ಯಪಾಲಕ ಅಭಿಯಂತರರು ಕೆಲವು ಕಾಮಗಾರಿಗಳನ್ನು ತನಿಖೆ ಮಾಡಿ ಮಧ್ಯಂತರ ವರದಿ ನೀಡಿ ಕೆಲವೊಂದು ಕಾಮಗಾರಿಗಳಿಗೆ ಬಿಲ್ ನೀಡಿದ 2 ವರ್ಷಗಳ ನಂತರವೂ ಕಾಮಗಾರಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಕಾನೂನು ಬಾಹಿರವಾಗಿದೆ. ಆದಾಗ್ಯೂ ಅವಕಾಶ ನೀಡಿದ್ದರೂ ಸಹ ಈವರೆಗೆ ಕಾಮಗಾರಿಯನ್ನು ನಿರ್ವಹಿಸದೇ ಗುತ್ತಿಗೆದಾರರು ಮತ್ತು ಎಂಜಿನಿಯರ್ ಕರ್ತವ್ಯಚ್ಯುತಿ ಮಾಡಿ ಲಕ್ಷಾಂತರ ರೂ.ಗಳನ್ನು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

        ಇಷ್ಟೇ ಅಲ್ಲದೆ ಹಲವಾರು ಕಾಮಗಾರಿಗಳನ್ನು ಮಾಡದೆ ಹಾಗೂ ಒಂದೆ ಕಾಮಗಾರಿಗೆ ಎರಡೆರಡು ಬಿಲ್‍ಗಳನ್ನು ಮಾಡುವ ಮೂಲಕ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ. ಈ ಸಂಬಂಧಪಟ್ಟ ಹಲವು ದಾಖಲೆಗಳನ್ನು ಜಿಲ್ಲಾ ಪಂಚಾಯತ್‍ಗೆ ನೀಡಿದರೂ ದಾಖಲೆಗಳನ್ನು ಪರಿಶೀಲಿಸದೆ, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಚ್ಯುತಿ ಮಾಡಿದ್ದಾರೆ. ಅಲ್ಲದೆ ವರ್ಷಾನುಗಟ್ಟಲೆ ಅರ್ಜಿಗಳನ್ನು ವಿಲೇವಾರಿ ಮಾಡದೆ ಸಾರ್ವಜನಿಕರ ಕೆಲಸವನ್ನು ಅಸಡ್ಡೆ ಮಾಡಿದ್ದಾರೆ.

         ಮುಂದಿನ ದಿನಗಳಲ್ಲಿ ರಾಜ್ಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಕೇಸು ದಾಖಲಿಸುವ ಮೂಲಕ ಕಾನೂನು ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಹನುಮಂತರಾಯಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಆರ್.ನಾಗಭೂಷಣ್, ಕುಣಿಗಲ್ ತಾಲ್ಲೂಕು ಅಧ್ಯಕ್ಷ ಎಂ.ಡಿ.ಮೋಹನ್, ಪ್ರವೀಣ್ ಕುಮಾರ್, ರಾಮಕೃಷ್ಣ, ಎಚ್.ಎಸ್.ಹೇಮಂತ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link