ಉದ್ಯೋಗ ಭದ್ರತೆ, ಆರೋಗ್ಯ ಕ್ಷೇತ್ರಕ್ಕೆ ನೀಡಲು ಆಗ್ರಹ

ಬೆಂಗಳೂರು

       ಉದ್ಯೋಗ ಭದ್ರತೆ, ಆರೋಗ್ಯ ಕ್ಷೇತ್ರಕ್ಕೆ ನಿಗದಿಪಡಿಸಿರುವ ಬಜೆಟ್ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮೌರ್ಯ ವೃತ್ತದಲ್ಲಿ ಸಮಾವೇಶಗೊಂಡ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರರು ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೌಕರರ ಬೇಡಿಕೆ ಈಡೇರಿಸಲು ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

        ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ ಮಾದರಿಯಲ್ಲಿ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆಯನ್ನು ಜಾರಿಗೆ ತಂದು ಸೇವಾ ಭದ್ರತೆ ಒದಗಿಸಬೇಕು.ಈ ನಿಟ್ಟಿನಲ್ಲಿರುವ ಎಲ್ಲ ಕಾನೂನು ತೊಡಕುಗಳನ್ನು ಸಂಸತ್‍ನಲ್ಲಿ ನಿರ್ಣಯ ಕೈಗೊಂಡು ನಿವಾರಿಸಬೇಕು. ಹಾಲಿ ಗುತ್ತಿಗೆ ವ್ಯವಸ್ಥೆಯಲ್ಲಿರುವ ಎಲ್ಲ ಹುದ್ದೆಗಳನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

       ಸರ್ಕಾರಿ ನೌಕರರಿಗೆ ನೀಡುವ ಜ್ಯೋತಿ ಸಂಜೀವಿನಿ, ವೈದ್ಯಕೀಯ ಯೋಜನೆಯನ್ನು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೂ ಜಾರಿ ಮಾಡಬೇಕು.ಸರ್ಕಾರಿ ನೇಮಕಾತಿಗಳಲ್ಲಿ ವಯೋಮಿತಿ ವಿಸ್ತರಿಸಬೇಕು ಸೇರಿದಂತೆ ಸೇವಾ ಅನುಭವಕ್ಕೆ ತಕ್ಕಂತೆ ಸೇವಾಂಕವನ್ನು ನೀಡಬೇಕು.ಖಾಯಂ ನೇಮಕಾತಿ ನೆಪ ಹೇಳಿ ಸ್ಥಳ ಬದಲಾವಣೆ ಮಾಡಬಾರದೆಂದು ಒತ್ತಾಯಿಸಿದರು.

       ಸಣ್ಣಪುಟ್ಟ ಕಾರಣಗಳನ್ನು ಹೇಳಿ ಕೆಲಸದಿಂದ ತೆಗೆದು ಹಾಕಿರುವ ಗುತ್ತಿಗೆ ನೌಕರರನ್ನು ಅದೇ ಹುದ್ದೆಗೆ ಮತ್ತು ಅದೇ ಸ್ಥಳದಲ್ಲಿ ಮರು ನೇಮಕಾತಿ ಮಾಡಿಕೊಳ್ಳಬೇಕು. ಗುತ್ತಿಗೆ ನೌಕರರ ಮೇಲಾಗುತ್ತಿರುವ ಶೋಷಣೆ ತಡೆಗೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸುವುದರೊಂದಿಗೆ ನೌಕರರ ಪ್ರತಿನಿಧಿಗಳಿಗೆ ಸಮಿತಿಯಲ್ಲಿ ಸದಸ್ಯ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

       ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಟಿಬಿ, ಹೆಚ್‍ಐವಿ ಇತ್ಯಾದಿ ಮಾರಕ ರೋಗ ನಿಯುಂತ್ರಣ ಸೇವೆ ಸಲ್ಲಿಸುತ್ತಿರುವವರಿಗೆ, ಆಂಬುಲೆನ್ಸ್ ಚಾಲಕರಿಗೆ ಎಲ್ಲ ವೈದ್ಯಕೀಯ ಸೇವೆ ಮತ್ತು ಭತ್ಯೆಯನ್ನು ನೀಡಬೇಕು. ಜನಸಂಖ್ಯೆಗನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೆಚ್ಚು ಆಸ್ಪತ್ರೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಾ. ವಾಸು ಹೆಚ್.ವಿ, ಸಂಚಾಲಕ ವಿಶ್ವಾರಾಧ್ಯ ಸೇರಿದಂತೆ ನೂರಾರು ಕಾರ್ಯಕರ್ತರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ