ಬಾಕಿ ಸಮೇತ ಕನಿಷ್ಠ ಕೂಲಿಗೆ ಸಿಐಟಿಯು ಆಗ್ರಹ

ದಾವಣಗೆರೆ:

   ಹೈಕೋರ್ಟ್ ಆದೇಶದಂತೆ 37 ವಿಧದ ಕೈಗಾರಿಕೆಗಳ ಕಾರ್ಮಿಕರಿಗೆ ಬಾಕಿ ಸಮೇತ ಕನಿಷ್ಠ ಕೂಲಿ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮಂಗಳವಾರ ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

    ನಗರದ ಪಿಬಿ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಮಿಕರು, ದೇವರಾಜ ಅರಸು ಬಡಾವಣೆಯ ಎ ಬ್ಲಾಕ್‍ನಲ್ಲಿರುವ ಜಿಲ್ಲಾ ಕಾರ್ಮಿಕ ಇಲಾಖೆಯ ಕಚೇರಿಗೆ ತೆರಳಿ, ಕನಿಷ್ಠ ಕೂಲಿ ಜಾರಿ ಮಾಡುವಂತೆ ಕೈಗಾರಿಕೆಗಳ ಮಾಲೀಕರಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಮುಖಂಡ ಕೆ.ಎಲ್.ಭಟ್, 2016-17ನೇ ಸಾಲಿನಲ್ಲಿ ಕನಿಷ್ಠ ವೆತನವನ್ನು ಪರಿಷ್ಕರಿಸಲು ಮಾಲೀಕರು, ಕಾರ್ಮಿಕರು ಹಾಗೂ ಸರ್ಕಾರದ ಸಮ ಸಂಖ್ಯೆಯ ಪ್ರತಿನಿಧಿಗಳನ್ನು ಒಳಗೊಂಡ ಕನಿಷ್ಠ ಸಲಹ ಮಂಡಳಿಯಲ್ಲಿ ಚರ್ಚಿಸಿದ ಬಳಿಕ ಸರ್ಕಾರಕ್ಕೆ ಕನಿಷ್ಠ ಕೂಲಿಯ ಬಗ್ಗೆ ಶಿಫಾರಸು ಮಾಡಲಾಗಿತ್ತು.

    ಈ ಶಿಫಾರಸ್ಸಿನ ಆಧಾರದಲ್ಲಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಗಳನ್ನು ಸ್ವೀಕರಿಸಿದ ನಂತರದಲ್ಲಿ ಅಚಿತಿಮ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ಮಾಲೀಕರ ಸಂಘಗಳು ಪ್ರಶ್ನಿಸಿ, ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್‍ನಲ್ಲಿ ವಾದ-ವಿವಾದಗಳನ್ನು ಆಲಿಸಿದ ನಂತರದಲ್ಲಿ ನ್ಯಾಯಮೂರ್ತಿ ಕೃಷ್ಣ ದಿಕ್ಷಿತ್ ಅವರ ಪೀಠವು ಕನಿಷ್ಠ ವೇತನ ಪರಿಷ್ಕರಣೆಯನ್ನು ಎತ್ತಿ ಹಿಡಿದಿದೆ. ಆದರೆ, ಕೈಗಾರಿಕೆಗಳ ಮಾಲೀಕರು ಮಾತ್ರ ಈ ಕನಿಷ್ಠ ಕೂಲಿ ಕೊಡಲು ಮುಂದಾಗದೇ, ಸತಾಯಿಸುತ್ತಿದ್ದಾರೆಂದು ಆರೋಪಿಸಿದರು.

      ಕರ್ನಾಟಕ ರಾಜ್ಯದ ಉಚ್ಛನ್ಯಾಯಾಲಯವು 37 ವಿವಿಧ ಶೇಡ್ಯೂಲ್ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಎತ್ತಿ ಹಿಡಿದಿದ್ದು, ಕಾರ್ಮಿಕರಿಗೆ ಅಧಿಸೂಚನೆಯ ದಿನಾಂಕ ದಿಂದಲೇ ಶೇ.6ರಷ್ಟು ಬಟ್ಟಿಯೊಂದಿಗೆ ಬಾಕಿಯನ್ನು ಎಂಟು ವಾರಗಳಲ್ಲಿಯೇ ಸಂದಾಯ ಮಾಡುವಂತೆ ಆದೇಶಿಸಿದೆ. ಆದ್ದರಿಂದ ಈ 37 ವಿವಿಧ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಕೈಗಾರಿಕೆಗಳ ಆಡಳಿತ ಮಂಡಳಿಯ ಮಾಲೀಕರು ತಕ್ಷಣವೇ ಬಾಕಿ ಸಮೇತ ಕನಿಷ್ಠ ಕೂಲಿ ನೀಡಬೇಕೆಂದು ಆಗ್ರಹಿಸಿದರು.

     ಸ್ಕೀಮ್ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು. ಹಾಸ್ಟೆಲ್ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂ ಗೊಳಿಸಬೇಕು.

     ಗ್ರಾ.ಪಂ. ನೌಕರರಿಗೆ ಸರ್ಕಾರ ನಿಗಧಿಗೊಳಿಸಿರುವ ವೇತನವನ್ನು ಬಾಕಿ ಸಮೇತ ನೀಡಬೇಕು. ಕಟ್ಟಡ ಕಾರ್ಮಿಕರ ನೋಂದಣಿ ತೀವ್ರಗೊಳಿಸುವುದರ ಜೊತೆಗೆ, ಬಾಕಿ ಇರುವ ಸಹಾಯ ಧನ ಮತ್ತು ವಿದ್ಯಾರ್ಥಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಔಷಧ ಮಾರಾಟ ಪ್ರತಿನಿಧಿಗಳಿಗೆ ಎಸ್‍ಪಿಇ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಆಟೋ ಚಾಲಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವುದರ ಜೊತೆಗೆ ಅವರ ಕಲ್ಯಾಣಕ್ಕಾಗಿ ಆಟೋ ಚಾಲಕರ ಕಲ್ಯಾಣ ಮಂಡಳಿ ಆರಂಭಿಸಬೇಕೆಂದು ಆಗ್ರಹಿಸಿದರು.
ವಿಮಾ ಪ್ರತಿನಿಧಿಗಳನ್ನು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸೇರ್ಪಡೆ ಮಾಡಬೇಕು. ಬಿಎಸ್‍ಎನ್‍ಎಲ್ ಗುತ್ತಿಗೆ ನೌಕರರನ್ನು ಖಾಯಂ ಗೊಳಿಸಬೇಕು.

     ಕೃಷಿ ಕೂಲಿ ಕಾರ್ಮಿಕರಿಗೆ ವರ್ಷಕ್ಕೆ 200 ದಿನ ಕೆಲಸ ಸಿಗುವ ವಾತಾವರಣ ನಿರ್ಮಾಣ ಮಾಡಬೇಕು. ಹರಿಹರ ಪಾಲಿಫೈಬರ್ಸ್ ಹಾಗೂ ಗ್ರಾಸಿಂನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ನಿವೃತ್ತಿ ವಯಸನ್ನು 60 ವರ್ಷಕ್ಕೆ ನಿಗದಿ ಮಾಡಬೇಕು. 10 ರೂ. ಇದ್ದ ಕಾರ್ಮಿಕ ಸಂಘದ ನೋಂದಣಿ ಶುಲ್ಕವನ್ನು ಒಂದು ಸಾವಿರ ರೂ.ಗೆ ಹೆಚ್ಚಿಸಿರುವ ಆದೇಶವನ್ನು ತಕ್ಷಣವೇ ವಾಪಾಸ್ ಪಡೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾನಿರತ ಕಾರ್ಮಿಕರು ಒತ್ತಾಯಿಸಿದರು.ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯುನ ಆನಂದರಾಜ್, ಶ್ರೀನಿವಾಸಮೂರ್ತಿ, ಬಾಡಾಕ್ರಾಸ್ ಶ್ರೀನಿವಾಸ್.ಇ, ಉಮೇಶ್ ಕೈದಾಳೆ, ಈರಣ್ಣ ಸೇರಿದಂತೆ ಹಲವರು ವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap