ತುಮಕೂರು 

ಉದ್ಯಾನಕ್ಕಾಗಿ ದಾನ ನೀಡಲಾಗಿರುವ ಜಾಗವನ್ನು ಪಾಲಿಕೆಯ ವಶಕ್ಕೆ ಸ್ವಾಧೀನಪಡಿಸಿಕೊಂಡು ಆ ಜಾಗದಲ್ಲಿ ಉದ್ಯಾನವನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗರು ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಫರೀದಾಬೇಗಂ ಅವರಿಗೆ ಮನವಿ ಪತ್ರ ನೀಡಿದ್ದಾರೆ.
ತುಮಕೂರು ನಗರದ ಶಿರಾಗೇಟ್‍ನ 2 ನೇ ವಾರ್ಡ್ ವ್ಯಾಪ್ತಿಯ ಲಕ್ಷ್ಮೀನರಸಿಂಹ ಬಡಾವಣೆಯಲ್ಲಿ ವಾರ್ಡ್ ಸದಸ್ಯ ಎಸ್.ಮಂಜುನಾಥ್ (ಬಿಜೆಪಿ) ನೇತೃತ್ವದಲ್ಲಿ ಸಾರ್ವಜನಿಕರು ಮನವಿ ಪತ್ರ ಸಲ್ಲಿಸಿದ್ದಾರೆ.ವಾರ್ಡ್ ಸದಸ್ಯರ ಕೋರಿಕೆ ಮೇರೆಗೆ ಮೇಯರ್ ಅವರು ಸ್ಥಳಪರಿಶೀಲನೆ ಗೆ ತೆರಳಿದ್ದಾಗ ಈ ಪ್ರಸಂಗ ಜರುಗಿತು.
ನಗರದ ಅಂತರಸನಹಳ್ಳಿಯ ಸರ್ವೆ ನಂಬರ್ 38/3 ರ ವ್ಯಾಪ್ತಿಯ 1 ಎಕರೆ 36 ಗುಂಟೆ ಪ್ರದೇಶವು ಇತ್ತೀಚೆಗೆ ಭೂಪರಿವರ್ತನೆ ಗೊಂಡಿದೆ. 1 ರಿಂದ 43 ನಿವೇಶನಗಳು ಆಗಿನ ಸತ್ಯಮಂಗಲ ಮಂಡಲ ಪಂಚಾಯಿತಿಯಿಂದ ಅನುಮೋದನೆ ಗೊಂಡಿದೆ. ಉದ್ಯಾನಕ್ಕಾಗಿ ಜಾಗವನ್ನು ಮೀಸಲಿರಿಸಿ, ಅದನ್ನು ಮಂಡಲ ಪಂಚಾಯಿತಿಗೆ ನೋಂದಣಿ ಮಾಡಿಸಿ ದಾನಪತ್ರ ನೀಡಲಾಗಿದೆ. ಆದ್ದರಿಂದ ಉದ್ಯಾನಕ್ಕೆ ಮೀಸಲಾಗಿರುವ 7668 ಚದರ ಅಡಿ ಜಾಗವನ್ನು ಪಾಲಿಕೆಯ ಸ್ವಾಧೀನಕ್ಕೆ ತೆಗೆದುಕೊಂಡು, ಅಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಿ ಕೊಡಬೇಕೆಂಬ ಮನವಿ ಪತ್ರವನ್ನು ಸಾರ್ವಜನಿಕರ ಪರವಾಗಿ ವಾರ್ಡ್ ಸದಸ್ಯ ಮಂಜುನಾಥ್ ಸಲ್ಲಿಸಿದರು.
ಸ್ಥಳಪರಿಶೀಲನೆ ನಡೆಸಿದ ಮೇಯರ್ ಫರೀದಾಬೇಗಂ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮೇಯರ್ ಅವರು ಸದಸ್ಯ ಮಂಜುನಾಥ್ ಮತ್ತು ನಾಗರಿಕರ ಜೊತೆಯಲ್ಲಿ ನಗರದ ಶಿರಾಗೇಟ್‍ನ ಸರ್ಕಾರಿ ಪ್ರಾಥಮಿಕ ಪಾಠಶಾಲೆಗೆ ಭೇಟಿ ನೀಡಿ, ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಪರಿಶೀಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
