ಬೆಂಗಳೂರು
ಪೊಲೀಸ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ನೌಕರ ಗೋವಿಂದರಾಜನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಜಯನಗರದ ಪಟ್ಟೆಗಾರಪಾಳ್ಯದ ಗೋವಿಂದರಾಜನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.ಆರು ತಿಂಗಳ ಹಿಂದೆ ಗೋವಿಂದರಾಜು ಎರವಲು ಸೇವೆ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗೃಹ ಕಚೇರಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿ ಮತ್ತೆ ಮಾತೃ ಇಲಾಖೆಗೆ ವಾಪಸ್ ಹೋಗಿದ್ದ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಗೋವಿಂದರಾಜು ಭಾಗಿಯಾಗಿಲ್ಲ ಎನ್ನಲಾಗಿತ್ತು ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದಲ್ಲಿ ಚೈತನ್ಯ ಎಂಬಾತನನ್ನು ಪೊಲೀಸರು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಹಿಂದೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಕೆಲಸ ಮಾಡುವ ಗೋವಿಂದರಾಜು ಬಗ್ಗೆ ಹೇಳಿದ್ದಾನೆ.
ಗೋವಿಂದರಾಜು ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಒಂದು ತಿಂಗಳು ಹಿಂದೆ ಬಂದು ಕೆಲಸಕ್ಕೆ ಸೇರಿದ್ದನು.ಈತನಿಗೆ ಸುಮಾರು 3 ಲಕ್ಷ ಹಣವನ್ನು ಕೊಟ್ಟರೆ ಕಿಂಗ್ಪಿನ್ ಶಿವಕುಮಾರ್ ನನ್ನು ಭೇಟಿ ಮಾಡಿಸಿ ಪ್ರಶ್ನೆ ಪತ್ರಿಕೆ ಕೊಟ್ಟು ಪರೀಕ್ಷೆ ಬರೆಸುತ್ತಿದ್ದನು. ಇದೇ ರೀತಿ ಸುಮಾರು 20ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಳುಹಿಸಿಕೊಟ್ಟಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಗೋವಿಂದರಾಜುಗೂ ಆರೋಪಿ ಚೈತನ್ಯ ಮತ್ತು ಶಿವಕುಮಾರ್ ಜೊತೆ ಯಾವ ರೀತಿ ಸಂಪರ್ಕ ಇದೆ.ಬೇರೆ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ವಿಚಾರಣೆ ಮಾಡಲು ಪೊಲೀಸರು ಏಳು ದಿನ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ವಿವರ
ನವೆಂಬರ್ 25ರಂದು ನಡೆಯಬೇಕಿದ್ದ ಪೊಲೀಸ್ ಪೇದೆ ಹುದ್ದೆಯ ಲಿಖಿತ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಹೀಗಾಗಿ ಪರೀಕ್ಷೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭಾರೀ ಜಾಲವನ್ನು ಪತ್ತೆ ಹಚ್ಚಿ ಕಿಂಗ್ ಪಿನ್ ಸೇರಿದಂತೆ 115 ಮಂದಿಯನ್ನು ಬಂಧಿಸಿದ್ದರು.
ಕೊಡಗು ಜಿಲ್ಲೆಯ ಸೋಮವಾರಪೇಟೆಯ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ರಾಜ್ಯದ ವಿವಿಧೆಡೆಯಿಂದ ಪರೀಕ್ಷಾರ್ಥಿಗಳನ್ನು ಕರೆಸಿಕೊಂಡು ಪ್ರಶ್ನೆ ಪತ್ರಿಕೆ ವಿತರಿಸಲು ಸಿದ್ಧತೆ ನಡೆಸಲಾಗಿತ್ತು. ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಈ ಮೊದಲೇ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳಾದ ಬಿ.ಆರ್.ವೇಣುಗೋಪಾಲ್, ಬಿ.ಬಾಲರಾಜು ನೇತೃತ್ವದ ಎರಡು ತಂಡಗಳು ದಾಳಿ ನಡೆಸಿದ್ದವು. ದಾಳಿ ವೇಳೆ ಕಿಂಗ್ಪಿನ್ ಶಿವಕುಮಾರ್ ನನ್ನು ಪ್ರಶ್ನೆ ಪತ್ರಿಕೆಗಳ ಸಹಿತ ಬಂಧಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








