ರೈತರ ಸಂಕಷ್ಟಕ್ಕೆ ಮೋಡ ಕರಗಲಿಲ್ಲ, ನೀರಾಗಿ ಮಳೆಯಾಗಲಿಲ್ಲ..!!

ತುಮಕೂರು

     ಮಳೆ ಇವತ್ತು ಬರಬಹುದು, ನಾಳೆ ಬರಬಹುದು ಎಂದು ರೈತರು ಹೊಲ ಉತ್ತು ಬಿತ್ತನೆಗೆ ಹಸನು ಮಾಡಿ ಕಾಯುತ್ತಿದ್ದಾರೆ. ಆಷಾಢದ ಗಾಳಿ ತೀಡುತ್ತಿದೆ ಹೊರತು, ಆಕಾಶದ ಮೋಡ ಹನಿಯಾಗಿ ನೆಲಕ್ಕೆ ಬೀಳುತ್ತಿಲ್ಲ. ಈ ಬಾರಿಯೂ ಮಳೆ ಕೈಕೊಟ್ಟರೆ ಗತಿ ಏನು ಎನ್ನುವ ಆತಂಕ. ತುಮಕೂರು ತಾಲ್ಲೂಕಿನಲ್ಲಿ ಬೀಳಬೇಕಾದ 900 ಮಿಲಿಮೀಟರ್ ವಾಡಿಕೆ ಮಳೆಯಲ್ಲಿ ಈವರೆಗೆ ಆಗಿರುವುದು 262 ಮಿಮಿ ಮಳೆ. ಇದು ಈ ಅವಧಿಯಲ್ಲಿ ಕಳೆದ ವರ್ಷ ಹುಯ್ದ ಮಳೆಗಿಂತಾ ಕಡಿಮೆ.

     ತಾಲ್ಲೂಕಿನಲ್ಲಿ ಸುಮಾರು 38,940 ಹೆಕ್ಟೇರ್ ಭೂಮಿಯಲ್ಲಿ ರಾಗಿ, ತೊಗರಿ, ಶೇಂಗಾ ಹಾಗೂ ದ್ವಿದಳ ಧಾನ್ಯದ ಬೆಳೆ ಬೆಳೆಯಲಾಗುತ್ತದೆ. ಇದರಲ್ಲಿ ಶೇಕಡ 80ರಷ್ಟು ಅಂದರೆ ಸುಮಾರು 27,650 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯೇ ಪ್ರಧಾನ. ಬಿತ್ತನೆಗೆ ರೈತರು ಭೂಮಿ ಸಿದ್ಧ ಮಾಡಿಕೊಂಡು ಮಳೆಯನ್ನು ಎದುರು ನೋಡುತ್ತಿದ್ದಾರೆ. ಒಂದು ದೊಡ್ಡ ಮಳೆ ಸರಿದರೆ ಸಾಕು ಬಿತ್ತನೆ ಮಾಡಿ ನಿಟ್ಟುಸಿರುಬಿಡುತ್ತಾರೆ. ಆದರೆ ಮಳೆ ಬೀಳುವ ಸೂಚನೆ ಇಲ್ಲ. ಈ ವರ್ಷ ಮಳೆ ಪ್ರಮಾಣ ಸಾಧಾರಣ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸ್ಥಿತಿಯಲ್ಲಿ ಇರುವ ಬಿತ್ತನೆ ಬೀಜವನ್ನು ಮಣ್ಣಿಗೆ ಹಾಕಲು ರೈತರು ಹಿಂದೆ ಮುಂದೆ ನೋಡುವಂತಾಗಿದೆ.

      ಕಾಲಕ್ಕೆ ಸರಿಯಾಗಿ ಮಳೆಯಾಗಿದ್ದರೆ ಈ ವೇಳೆಗೆ ರಾಗಿ ಪೈರು ಒಟ್ಟಲು ಬಿಡಬೇಕಾಗಿತ್ತು, ಹೊಲ ಹಸನು ಮಾಡಿ ರಾಗಿ ಚೆಲ್ಲಬೇಕಾಗಿತ್ತು. ಇನ್ನೂ ಯಾವುದೂ ಆಗಿಲ್ಲ. ಇನ್ನೂ ಎರಡು ಮೂರು ವಾರದಲ್ಲಿ ದೊಡ್ಡ ಮಳೆಗಳು ಸುರಿದರೆ ರೈತರು ನಿರಾಳ. ಮಳೆ ಬರದಿದ್ದರೆ, ಹುರುಳಿನೋ, ದನಗಳಿಗೆ ಮೇವನ್ನೋ ಚೆಲ್ಲಿ ಕೈಚೆಲ್ಲಿ ಕೂರಬೇಕಷ್ಟೆ ಎನ್ನುತ್ತಾರೆ ಗೂಳೂರು ಹೋಬಳಿ ಹೊಳಕಲ್ಲು ಗ್ರಾಮದ ನಾರಾಯಣಪ್ಪ.

      ಪ್ರಮುಖ ಬೆಳೆ ರಾಗಿ ಜೊತೆಗೆ ಅಕ್ಕಡಿ ಬೆಳೆ, ಮಿಶ್ರ ಬೆಳೆಯಾಗಿ ಅವರೆ, ಅಲಸಂದೆ, ಉದ್ದು, ಹೆಸರು, ಸಾಸಿವೆ, ಹುಚ್ಚೆಳ್ಳು, ಮೇವಿನ ಜೋಳ. ಈ ಬೆಳೆಗೆ ಮಳೆಯೇ ಆಸರೆ, ಮಳೆ ಹುಯ್ದರಷ್ಟೇ ಬೆಳೆ ಇಲ್ಲವಾದರೆ ತಕ್ಕಲುಬಿಟ್ಟು ಮುಂದಿನ ವರ್ಷದವರೆಗೆ ಕಾಯಬೇಕಷ್ಟೆ.
ರಾಗಿ ಅಲ್ಲದೆ, ಕೋರಾ ಹೋಬಳಿಯ ಕೆಲವೆಡೆ ರೈತರು ತೊಗರಿ, ಮುಸುಕಿನ ಜೋಳ ಬೆಳೆಯುತ್ತಾರೆ, ಊರ್ಡಿಗೆರೆ ಹಾಗೂ ಕೋರಾ ಹೋಬಳಿಯ ಕೊರಟಗೆರೆ ತಾಲ್ಲೂಕಿನ ಗಡಿ ಭಾಗದ ಹಳ್ಳಿಗಳಲ್ಲಿ ಶೇಂಗಾ ಹೆಚ್ಚು ಬೆಳೆಯುತ್ತಾರೆ. ಆದರೆ ಯಾವುದೂ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ.

      ಇದುವರೆಗೆ ಅಷ್ಟು ಇಷ್ಟು ಸುರಿದ ಮಳೆಯಲ್ಲಿ ಕೆಲವು ರೈತರು ರಾಗಿ ಬಿತ್ತನೆ ಮಾಡಿದ್ದರೂ ಮಳೆಯಿಲ್ಲದೆ ಬಾಡುತ್ತಿವೆ. ಈವರೆಗೆ 381 ಹೆಕ್ಟೇರ್‍ನಲ್ಲಿ ಬಿತ್ತನೆಯಾಗಿದೆ. ಇದು ತಾಲ್ಲೂಕಿನಲ್ಲಿ ಶೇಕಡ 1ರಷ್ಟು ಮಾತ್ರ ಬಿತ್ತನೆ, ಇನ್ನೂ 99ರಷ್ಟು ಬಿತ್ತನೆ ಕಾರ್ಯ ಬಾಕಿ ಇದೆ. ಈಗ ಭೂಮಿಯಲ್ಲಿ ತೇವಾಂಶದ ಕೊರತೆ ಇರುವುದರಿಂದ ಮಳೆ ಬರುವವರೆಗೂ ಬಿತ್ತನೆ ಮಾಡಬೇಡಿ ಎಂದು ರೈತರಿಗೆ ಸಲಹೆ ನೀಡುತ್ತಿದ್ದೇವೆ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್ ಕೆಂಗೇಗೌಡ ಹೇಳಿದರು.

      ಆಗಸ್ಟ್ ಎರಡನೇ ವಾರದವರೆಗೂ ರಾಗಿ ಬಿತ್ತನೆಗ ಅವಕಾಶವಿದೆ. ಆ ವೇಳೆಗೆ ಮಳೆಯನ್ನು ನಿರೀಕ್ಷಿಸಲಾಗಿದೆ. ರೈತರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಬೇಡಿಕೆ ಇರುವ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದರು.
ಮಳೆ ಇಲ್ಲದೆ ತೋಟದ ಬೆಳೆಗಳು ಒಣಗುತ್ತಿವೆ, ಅಡಿಕೆ, ತೆಂಗಿನ ಮರಗಳು ಸುಳಿ ಒಣಗುತ್ತಿವೆ, ತೊಟಗಳು ಒಣಗಿ ಬೆತ್ತಲಾಗುತ್ತಿವೆ. ಕುಂಕುಮನಹಳ್ಳಿ ಸುತ್ತಮುತ್ತಲಿನ ಅಡಿಕೆ ಮರಗಳು ಒಣಗಿ ಬರಚಲಾಗಿವೆ. ಬಿತ್ತನೆ ಮಾಡವಷ್ಟೂ ಮಳೆ ಬಿದ್ದಿಲ್ಲವೆಂದ ಮೇಲೆ ಕೆರೆಕುಂಟೆಗಳಿಗೆ ನೀರು ಎಲ್ಲಿಂದ ಬರಲು ಸಾಧ್ಯ, ಕೆರೆಗಳಲ್ಲಿ ತೆಗೆದಿರುವ ಗುಂಡಿಗಳಲ್ಲಿ ಹಕ್ಕಿ ಪಕ್ಷಿ ಕುಡಿಯುವಷ್ಟು ನೀರು ನಿಂತಿದೆ. ಮಳೆ ಹೀಗೇ ಹೋದರೆ ದನಕರುಗಳಿಗೂ ಕುಡಿಯಲು ಕರೆಯಲ್ಲಿ ನೀರು ಸಿಗುವುದಿಲ್ಲ. ಹೀಗೇ ಆದರೆ, ಬರುವ ಬೇಸಿಗೆ ಇನ್ನಷ್ಟು ಭೀಕರವಾಗಬಹದು, ಕುಡಿಯುವ ನೀರಿಗೆ ಮತ್ತಷ್ಟು ಅಭಾವ ಉಂಟಾಗಬಹುದು.

  ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ಚೆಕ್ ಡ್ಯಾಂ, ಕೃಷಿಹೊಂಡ, ಕೆರಗಳ ಹೂಳು ತೆಗೆದು ಸಿದ್ಧ ಮಾಡಲಾಗಿದೆ. ಆದರೆ, ಮಳೆ ಬೀಳದೆ ಇದಾವುದೂ ಪ್ರಯೋಜನಕ್ಕೆ ಬಾರದು ಎನ್ನುವಂತಾಗಿದೆ.ಗೂಳೂರು, ಊರುಕೆರೆ, ಹೆಗ್ಗೆರೆ ಸುತ್ತಮುತ್ತ ಹೆದ್ದಾರಿ ಅಕ್ಕಪಕ್ಕದ ರಾಗಿ ಬೆಳೆಯುವ ಸಾವಿರಾರು ಎಕರೆ ಭೂಮಿ ಬೀಳು ಬಿದ್ದಿದೆ. ಮಳೆ ಬೀಳುತ್ತಿಲ್ಲ, ವ್ಯವಸಾಯಕ್ಕೆ ಮೊದಲಿನಂತೆ ಕೂಲಿ ಆಳುಗಳು ಸಿಗುತ್ತಿಲ್ಲ.

     ಖರ್ಚು ವಿಪರೀತ, ಲಾಭ ಇಲ್ಲವೇ ಇಲ್ಲ ಎಂದು ಅನೇಕ ರೈತರು ಬೇಸಾಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.
ನಾನು ವಯಸ್ಸಿನಲ್ಲಿದ್ದಾಗ ಎಂಟು ಎಕರೆ ಜಮೀನಿನಲ್ಲಿ ಕಣಜ ತುಂಬುವಷ್ಟು ರಾಗಿ ಬೆಳೆಯುತ್ತಿದೆ. ಈಗ ಮನೆಮಟ್ಟಿಗೆ ಆಗುವಷ್ಟು ರಾಗಿ ಬೆಳೆದುಕೊಳ್ಳಲು ಹೆಣಗಾಡುವಂತಾಗಿದೆ. ಇಬ್ಬರೂ ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ನನ್ನೊಬ್ಬನ ಕೈಲಿ ವ್ಯವಸಾಯ ಮಾಡಲಾಗುತ್ತಿಲ್ಲ ಜಮೀನನ್ನು ಬೀಳು ಬಿಟ್ಟಿದ್ದೇನೆ ಎಂದು ಕೈದಾಳದ ರಾಮಾಂಜನಯ್ಯ ಹೇಳುತ್ತಾರೆ.

    ಮಲೆನಾಡು ಭಾಗದ ಮಳೆ ನಿಂತ ಮೇಲೆ ಬಯಲು ಸೀಮೆಯಲ್ಲಿ ಮಳೆಯಾಗಬುದು ಎಂದು ನಿರೀಕ್ಷಿಸಲಾಗಿದೆ. ಒಂದೆರಡು ವಾರದಲ್ಲಿ ಮಳೆ ಬಂದರೆ ರಾಗಿ, ತೊಗರಿ, ಜೋಳ, ಶೇಂಗಾ ಬಿತ್ತನೆ ಮಾಡಬಹುದು. ಮಳೆ ಕೈಕೊಟ್ಟರೆ ಪರ್ಯಾಯ ಬೆಳೆ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ, ಇಲಾಖೆಯ ಸವಲತ್ತುಗಳ ಬಗ್ಗೆ ಕೃಷಿ ಇಲಾಖೆಯು ಕೃಷಿ ಅಭಿಯಾನ ನಡೆಸಿ ಪ್ರಚಾರ ಮಾಡುತ್ತಿದೆ.

     ಆಗಸ್ಟ್ ನಲ್ಲಿ ಮಳೆ ಬೀಳದಿದ್ದರೆ ಪರ್ಯಾಯ ಬೆಳೆಯಾಗಿ ಸಿರಿ ಧಾನ್ಯ ಬೆಳೆ ಬೆಳೆಯಲು ರೈತರಿಗೆ ಸಲಹೆ ಮಾಡುತ್ತೇವೆ. ಸಿರಿ ಧಾನ್ಯ ಬೆಳೆಯುವ ರೈತರಿಗೆ ಸರ್ಕಾರದಿಂದ ಪ್ರತಿ ಎಕರೆಗೆ 4 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಅಂತಹ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡಿ, ಅನುಕೂಲ ಪಡೆಯುವಂತೆ ಕೃಷಿ ಇಲಾಖೆ ಉಪ ನಿರ್ದೇಶಕ ಉಮೇಶ್ ಮನವಿ ಮಾಡಿದ್ದಾರೆ.

      ಫಸಲ್ ಬೀಮಾ ಯೋಜನೆಗೆ ಪ್ರಯೋಜನ ಪಡೆಯಲು ರೈತರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಮಳೆ ಹಿನ್ನಡೆಯಾಗಿ ಬಿತ್ತನೆ ಕುಂಠಿತವಾಗಿದೆ ಅನ್ನುವುದು ಒಂದಾದರೆ, ಕಳೆದ ವರ್ಷದ ಫಸಲ್ ಬೀಮಾ ಯೋಜನೆಯ ಹಣ ಅನೇಕ ರೈತರಿಗೆ ಇನ್ನೂ ಪಾವತಿಯಾಗಿಲ್ಲ. ಹೀಗಾಗಿ ಈ ಯೋಜನೆ ಬಗ್ಗೆ ತುಮಕೂರು ತಾಲ್ಲೂಕು ರೈತರಲ್ಲಿ ಉತ್ಸಾಹ ಕಂಡುಬರುತ್ತಿಲ್ಲ. ಅಧಿಕಾರಿಗಳು ರೈತರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

      ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೆಚ್ಚನ ರೈತರು ರೈತ ಪ್ರಮಾಣ ಪತ್ರ ಸಲ್ಲಿಸಿ ಹೆಸರು ನೊಂದಣಿ ಮಾಡಿಸಿಕೊಂಡಿದ್ದಾರೆ. ಈ ಯೋಜನೆಯಲ್ಲಿ ಪ್ರತಿ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ.ಗಳ ನೆರವು ದೊರೆಯುತ್ತದೆ. ನೊಂದಣೆ ಆಗದವರು ರೈತ ಪ್ರಮಾಣ ಪತ್ರದೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಕೃಷಿ ಅಧಿಕಾರಿಗಳು ಮನವಿ ಮಾಡಿದ್ದಾರೆ.ರೈತರ ಸದ್ಯದ ಎಲ್ಲಾ ಸಮಸ್ಯೆಗಳಿಗೂ ಮಳೆಯೇ ಪರಿಹಾರವಾಗಲಿದ್ದು ಮಳೆ ನಿರೀಕ್ಷೆಯಲ್ಲಿ ಮುಗಿಲು ನೋಡುವಂತಹ ಪರಿಸ್ಥಿತಿ ಎದುರಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap