ಬೆಂಗಳೂರು
ಡ್ಯಾನ್ಸ್ ಹುಡುಗಿಯರ ಜೊತೆ ಕುಣಿದು ಕುಪ್ಪಳಿಸುತ್ತಾ ಹುಟ್ಟುಹಬ್ಬದ ಅದ್ದೂರಿ ಪಾರ್ಟಿ ನಡೆಸುತ್ತಿದ್ದ ನಟೋರಿಯಸ್ ರೌಡಿ ಕುಣಿಗಲ್ ಗಿರಿ ಸಿಸಿಬಿ ಪೊಲೀಸರು ದಾಳಿ ನಡೆಸಲು ಬಂದ ಕೂಡಲೇ ನಗರದ ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಿಲ್ಡಿಂಗ್ ನಲ್ಲಿರುವ ಪಬ್‍ನಿಂದ ಪರಾರಿಯಾಗಿದ್ದಾನೆ.
ರೆಸಿಡೆನ್ಸಿ ರಸ್ತೆಯ ಕ್ಲಬ್‍ವೊಂದರಲ್ಲಿ ಡ್ಯಾನ್ಸ್ ಗಲ್ರ್ಸ್‍ಗಳ ಜೊತೆ ಅದ್ದೂರಿಯಾಗಿ ಹುಟ್ಟುಹಬ್ಬದ ಪಾರ್ಟಿ ನಡೆಸುತ್ತಿದ್ದ ನಟೋರಿಯಸ್ ರೌಡಿ ಕುಣಿಗಲ್ ಗಿರಿ, ಸಿಸಿಬಿ ಪೊಲೀಸರ ದಾಳಿ ಅರಿತು 5ನೇ ಮಹಡಿಯಿಂದ ಪರಾರಿಯಾಗಿದ್ದು ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಿಲ್ಡಿಂಗ್‍ನ ಐದನೇ ಮಹಡಿಯ ಬಟರ್ ಫ್ಲೈ ಪಬ್‍ನಲ್ಲಿದ್ದ ಕುಣಿಗಲ್ ಗಿರಿ, ಪೊಲೀಸರು ಮೊದಲನೇ ಮಹಡಿಗೆ ಬಂದಿರುವುದನ್ನು ತಿಳಿದ ಕೂಡಲೇ 5ನೇ ಮಹಡಿಯಿಂದ 3ನೇ ಮಹಡಿಗೆ ಪ್ಯಾಸೇಜ್‍ನಿಂದ ಬಂದು ಅಲ್ಲಿಂದ ಪಕ್ಕದ ಕಟ್ಟಡಕ್ಕೆ ಜಿಗಿದು ಪರಾರಿಯಾಗಿದ್ದಾನೆ.
ಟೈಮ್ಸ್ ಬಿಲ್ಡಿಂಗ್‍ನ ರಾಸ್ ಬಿಗ್ ಬಾಸ್, ಟೈಮ್ಸ್ ಪ್ಯಾರಿಸ್, ಟೈಮ್ಸ್ ಬಾಲಿವುಡ್ ಹಾಗೂ ಬಟರ್ ಫ್ಲೈ ಸೇರಿ 5 ಪಬ್‍ಗಳಲ್ಲಿ ಡ್ಯಾನ್ಸ್ ಗಲ್ರ್ಸ್‍ಗಳನ್ನು ಇಟ್ಟುಕೊಂಡು ಪಾರ್ಟಿ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ಶುಕ್ರವಾರ ಮಧ್ಯರಾತ್ರಿ 12ರ ವೇಳೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ರಾಸ್ ಪಬ್‍ನಲ್ಲಿ ಕುಣಿಗಲ್ ಗಿರಿಗೆ ಹುಟ್ಟುಹಬ್ಬದ ಶುಭಾಶಯಗಳು ಎನ್ನುವ ಬೋರ್ಡ್ ನೋಡಿದ್ದೇ ತಡ, ಸಿಸಿಬಿಯ ಡಿಸಿಪಿಯ ಗಿರೀಶ್ ಅವರು ಎಲ್ಲಾ ಪಬ್‍ಗಳ ಮೇಲೂ ದಾಳಿ ನಡೆಸುವಂತೆ, ಸೂಚನೆ ನೀಡಿದ್ದಾರೆ. ಆ ವೇಳೆಗಾಗಲೇ 5ನೇ ಮಹಡಿಯಲ್ಲಿದ್ದ ಗಿರಿ ಪರಾರಿಯಾಗಿದ್ದ.
ಪಬ್‍ಗಳಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿದ್ದ 250 ಮಂದಿ ಡ್ಯಾನ್ಸ್ ಗಲ್ರ್ಸ್‍ಗಳನ್ನು ರಕ್ಷಿಸಿ, 230ಕ್ಕೂ ಹೆಚ್ಚು ಮಂದಿ ಗಿರಾಕಿಗಳು, ಪಬ್‍ಗಳ ಸಿಬ್ಬಂದಿಯನ್ನು ಬಂಧಿಸಲಾಗಿದೆ. ನಗರದಲ್ಲಿ ಕೆಲವರ್ಷಗಳ ನಂತರ ನಡೆದ ಅತಿದೊಡ್ಡ ದಾಳಿ ಇದಾಗಿದೆ. ಪಬ್‍ಗೆ ಗಿರಿ ಬಂದಿದ್ದ ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.ದಾಳಿಯಲ್ಲಿ 5 ಲಕ್ಷಕ್ಕೂ ಹೆಚ್ಚಿನ ಹಣವನ್ನು ವಶಪಡಿಸಿಕೊಂಡು ಬಂಧಿಸಿರುವ ಗಿರಾಕಿಗಳು, ಸಿಬ್ಬಂದಿಗಳ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
