ಟಿ.ವಿ. ಭರಾಟೆಯ ನಡುವೆಯೂ ನಾಟಕ ಕಲೆ ಜೀವಂತ

0
20

ತುಮಕೂರು:

      ಟಿ.ವಿ. ಛಾನಲ್‍ಗಳ ಧಾರಾವಾಹಿಗಳು, ಸಿನಿಮಾಗಳ ನಡುವೆಯೂ ನಾಟಕ ಕಲೆ ಜೀವಂತವಾಗಿರುವುದು ಹೆಮ್ಮೆಯ ವಿಷಯ ಎಂದು ಇಲ್ಲಿನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ತಿಳಿಸಿದರು.

          ಶ್ರೀಸಂಕಷ್ಠಹರ ಗಣಪತಿ ವಕೀಲರ ಕಲಾ ಬಳಗ, ಜಿಲ್ಲಾ ವಕೀಲರ ಸಂಘ, ನ್ಯಾಯಾಂಗ ಇಲಾಖೆ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಹಿಂದೆ ಈಗಿನ ರೀತಿಯಲ್ಲಿ ಟಿ.ವಿ.ಗಳ ಹಾವಳಿ ಇರಲಿಲ್ಲ. ಚಲನಚಿತ್ರಗಳನ್ನು ದೂರದ ಪಟ್ಟಣಗಳಿಗೆ ಹೋಗಿ ಟೆಂಟ್‍ಗಳಲ್ಲಿ ವೀಕ್ಷಿಸುತ್ತಿದ್ದರು. ಅಂತಹ ಕಾಲಘಟ್ಟದಲ್ಲಿ ಗ್ರಾಮೀಣ ಜನತೆಗೆ ನಾಟಕಗಳೇ ಜೀವನಾಡಿಯಾಗಿದ್ದವು. ವರ್ಷಪೂರ್ತಿ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದ ಗ್ರಾಮೀಣ ಜನರು ಬಿಡುವಿನ ವೇಳೆಯಲ್ಲಿ ಅಂದರೆ, ಬೇಸಿಗೆ ದಿನಗಳಲ್ಲಿ ಪೌರಾಣಿಕ ನಾಟಕಗಳನ್ನು ಅಭಿನಯಿಸುವ ಮೂಲಕ ಅದರಲ್ಲಿಯೇ ಮನರಂಜನೆ ಕಾಣುತ್ತಿದ್ದರು.

        ಕಾಲ ಬದಲಾದಂತೆ ಎಲ್ಲ ಕಡೆ ಟಿ.ವಿ., ಸಿನಿಮಾಗಳು ಆಕ್ರಮಿಸಿಕೊಂಡಿವೆ. ಇದರ ನಡುವೆಯೂ ನಾಟಕಗಳನ್ನು ಅಭಿನಯಿಸುತ್ತಾ ಬಂದಿರುವುದು ಶ್ಲಾಘನೀಯ. ಇಂತಹ ನಾಟಕಗಳಲ್ಲಿ ಬರುವ ಮೌಲ್ಯಗಳನ್ನು ಜನತೆ ಅಳವಡಿಸಿಕೊಳ್ಳಲು ಮುಂದಾಗಬೇಕು. ಎಷ್ಟೋ ನಾಟಕಗಳಲ್ಲಿ ಉತ್ತಮವಾದ ಮೌಲ್ಯಗಳಿವೆ. ಅವುಗಳು ಬದುಕಿಗೆ ದಾರಿದೀಪವಾಗಬೇಕು ಎಂದರು.

     ಕಾರ್ಯಕ್ರಮ ಉದ್ಘಾಟಿಸಿದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ತಾರಕೇಶ್ವರ ಗೌಡ ಪಾಟೀಲ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಾಟಕದ ಕಂಪನಿಗಳು, ಟೆಂಟ್‍ಗಳು ಕಡಿಮೆಯಾಗುತ್ತಿವೆ. ಹಿಂದಿನ ದಿನಗಳಲ್ಲಿ ನಾಟಕಗಳನ್ನು ನೋಡಲು ಕಂಪನಿಗಳ ಟೆಂಟ್‍ಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. ಈಗ ಮನೆ ಮನೆಗಳಲ್ಲೂ ಟಿ.ವಿ.ಗಳು ಬಂದಿರುವುದರಿಂದ ಜನ ಅದಕ್ಕೆ ಹೊಂದಿಕೊಂಡುಬಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಹಿಂದಿನ ಸಂಸ್ಕತಿ-ಗತವೈಭವವನ್ನು ಮರೆಯಬಾರದು. ಅದನ್ನು ಸ್ಮರಿಸಿಕೊಳ್ಳುತ್ತಲೇ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

      ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಲಾ ಬಳಗದ ಅಧ್ಯಕ್ಷ ಎಂ.ಸಿ.ಚಂದ್ರಯ್ಯ ಮಾತನಾಡಿ ರಾಮಾಯಣ ಮತ್ತು ಮಹಾಭಾರತ ನಮ್ಮ ಹಿಂದೂ ಸಂಸ್ಕತಿಯ ಎರಡು ಪ್ರಮುಖ ಗ್ರಂಥಗಳು. ಇದರಲ್ಲಿ ಬರುವ ಸನ್ನಿವೇಶಗಳು ನಮ್ಮ ಬದುಕಿಗೆ ದಾರಿದೀಪವಾಗಬೇಕು. ಅಂತಹ ಅನೇಕ ಮಹತ್ವದ ಗುಣಲಕ್ಷಣಗಳು ರಾಮಾಯಣ ಮತ್ತು ಮಹಾಭಾರತದಲ್ಲಿವೆ. ಅದರಲ್ಲಿರುವ ಉತ್ತಮ ಅಂಶಗಳನ್ನು ಪಡೆದುಕೊಂಡು ಬದುಕಿನ ಮೌಲ್ಯ ರೂಪಿಸಿಕೊಳ್ಳಬೇಕು ಎಂದರು.

       ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಕೆ.ಅನಿಲ್ ಮಾತನಾಡಿ ವಕೀಲರು ಮತ್ತು ನ್ಯಾಯಾಂಗ ಇಲಾಖೆ ನೌಕರರು ಒಡಗೂಡಿ ಕಲಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮಗಳು ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.

       ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಬಿ.ಎಲ್.ಜಿನರಾಳ್ಕರ್, ವಕೀಲರಾದ ರಂಗರಾಜು, ಎಚ್.ಎಸ್.ರಾಜು, ಕೆ.ಎನ್.ಬಸವರಾಜು, ಸೀತಕಲ್ಲು ಮಂಜುನಾಥ್, ಎಂಎಲ್‍ಎ ಶಿವರಾಮ್, ಕವಿತಾ, ಸಹಾಯಕ ಸರ್ಕಾರಿ ಅಭಿಯೋಜಕ ಜಕ್ಕೇನಹಳ್ಳಿ ರಾಜಣ್ಣ ಸೇರಿದಂತೆ ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಾವಿದರು ಹಾಗೂ ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಚಾಂದ್‍ಪಾಷ ದಂಪತಿಗಳನ್ನು ಸನ್ಮಾನಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here