ದಾವಣಗೆರೆ
ಕನಕದಾಸರ ವೃತ್ತಕ್ಕೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಸಿ, ಹಾಲುಮತ ಸಮಾಜದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರೊಂದಿಗೆ ಉದ್ಧಟತನದಿಂದ ವರ್ತಿಸಿರುವ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಹಾಲುಮತ ಮಹಾಸಭಾದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿ ಎಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಚಿವ ಮಾಧುಸ್ವಾಮಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಉಪ ವಿಭಾಗಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಎಸ್.ವೆಂಕಟೇಶ್, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್‍ನ ಶ್ರೀಕನಕ ದಾಸರ ವೃತ್ತದ ಅಳವಡಿಸಿದ್ದ ನಾಮಫಲಕವನ್ನು ಸಚಿವ ಮಾಧುಸ್ವಾಮಿ ತೆರವುಗೊಳಿಸುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಿರುವುದಲ್ಲದೇ, ಸಮಾಜದಲ್ಲಿ ಶಾಂತಿಕದಡಲು ಸಹ ಕಾರಣೀಭೂತರಾಗಿದ್ದಾರೆ. ಅಲ್ಲದೇ, ಹಾಲುಮತ ಸಮಾಜದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಅತ್ಯಂತ ಖಂಡನೀಯ ಎಂದು ಅಸಾಮಾಧಾನ ವ್ಯಕ್ತಪಡಿಸಿದರು.
ಕನಕದಾಸರ ವೃತ್ತಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಲು ಶ್ರೀಈಶ್ವರಾನಂದಪುರಿ ಸ್ವಾಮೀಜಿಯವರು ಸಮಾಜದ ಮುಖಂಡರ ಸಭೆಯನ್ನು ಸಚಿವ ಮಾಧುಸ್ವಾಮಿ, ಸಿಪಿಐ, ತಹಸೀಲ್ದಾರ್ ಸಮ್ಮುಖದಲ್ಲಿ ಕರೆಯಲಾಗಿತ್ತು. ಆದರೆ, ಅಂದಿನ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಹಾಲುಮತದ ಗುರುಗಳನ್ನು ಏಕ ವಚನದಲ್ಲಿ ಸಂಭೋದಿಸಿ ಉದ್ಧಟನತ ಮೆರೆದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಘಟನೆಯ ಹಿನ್ನೆಲೆಯಲ್ಲಿ ನಮ್ಮ ಸಮಾಜದ ಕೆಲವರು ಸಚಿವ ಮಾಧುಸ್ವಾಮಿಗೆ ದೂರವಾಣಿ ಕರೆ ಮಾಡಿ, ಸ್ಪಷ್ಟೀಕರಣ ಕೇಳಿದರೆ, ನಾನು ಒಂದು ಸಮುದಾಯದ ನಾಯಕ. ಹೀಗಾಗಿ ಆ ಸಮುದಾಯದ ಹಿತಕಾಯುವುದು ನನ್ನ ಕಾಯಕ. ಬೇರೆ ಸಮಾಜದವರ ಬಗ್ಗೆ ತನಗೆ ಆಸಕ್ತಿ ಇಲ್ಲವೆಂಬಂತೆ ಉಡಾಫೆಯ ಮಾತುಗಳನ್ನಾಡಿದ್ದಾರೆ. ಎಲ್ಲಾ ಸಮಾಜದವರ ಸಹಕಾರದಿಂದ ಶಾಸಕರಾಗಿ ಆಯ್ಕೆಯಾಗಿರುವ ಮಾಧುಸ್ವಾಮಿ, ರಾಜ್ಯಪಾಲಕರು ಬೋಧಿಸಿದ ಪ್ರತಿಜ್ಞೆ ವಿಧಿಯಲ್ಲಿ ನಾಡಿನ ಎಲ್ಲಾ ಸಮಾಜದವರನ್ನೂ ಸಮಾನ ಗೌರವದಿಂದ ಕಾಣುತ್ತೇನೆಂಬ ವಚನ ಏನಾಯಿತು? ಎಂದು ಪ್ರಶ್ನಿಸಿದರು.
ಜಾತಿ ಜಾತಿಗಳ ಮಧ್ಯೆ ದ್ವೇಷ ಸಾರುವ, ಸಾಮರಸ್ಯ ಕದಡುವ ಮಾತುಗಳನ್ನು ಮಾಧುಸ್ವಾಮಿ ಆಡುತ್ತಿದ್ದಾರೆ. ದೇಶದ ಸಂವಿಧಾನಕ್ಕೆ ಚ್ಯುತಿ ಬಾರದಂತೆ ತಾನು ಕರ್ತವ್ಯ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಮಾಧುಸ್ವಾಮಿ ಈಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸಿದ್ದು, ಇಂತಹವರು ಸಚಿವರಾಗಿದ್ದರೆ, ಅನ್ಯ ಸಮುದಾಯಗಳ ಅಭಿವೃದ್ಧಿಗೆ ಗರ ಬಡಿಯಲಿದೆ. ಆದ್ದರಿಂದ ರಾಜ್ಯಪಾಲರು ತಕ್ಷಣವೇ ಮಾಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಾಲುಮತ ಸಮಾಜದ ಮುಖಂಡರುಗಳಾದ ಎಚ್.ಜಿ.ಸಂಗಪ್ಪ, ಗೌಡರ ಚನ್ನಬಸಪ್ಪ, ಎನ್.ಜೆ.ನಿಂಗಪ್ಪ, ಸಿ.ವೀರಣ್ಣ, ದೀಟೂರು ಚಂದ್ರು, ಅಶೋಕಕುಮಾರ, ಜಿ.ಟಿ.ಪರಮೇಶ, ವೀರಭದ್ರಪ್ಪ, ಆರ್.ಹನುಮಂತಪ್ಪ, ಸಲ್ಲಳ್ಳಿ ಹನುಮಂತಪ್ಪ, ಘನರಾಜ್, ಎಸ್.ಎಂ.ಸಿದ್ದಲಿಂಗಪ್ಪ, ಪ್ರಸನ್ನ ಬೆಳಕೇರಿ, ಶಿವರುದ್ರಪ್ಪ ಚನ್ನಗಿರಿ, ವೀರೇಶ್ ಬಣಕಾರಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
