ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಒತ್ತಾಯ.

ಹೊಸಪೇಟೆ :

     ಸ್ಥಳೀಯ ಆಡಳಿತ, ಹಾಗು ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಯಾವತ್ತೋ ನಿರ್ಮಾಣವಾಗಬೇಕಿದ್ದ ಕನ್ನಡ ಭವನ ಇಂದಿಗೂ ಕಟ್ಟಡ ನಿರ್ಮಾಣ ಹೋಗಲಿ, ಅದಕ್ಕೆ ನಿವೇಶನ ಕೂಡ ಒದಗಿಸಲು ಸಾಧ್ಯವಾಗಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕು ಘಟಕದ ಅಧ್ಯಕ್ಷ ಡಾ.ಯತ್ನಳ್ಳಿ ಮಲ್ಲಯ್ಯ ಬೇಸರ ವ್ಯಕ್ತಪಡಿಸಿದರು.

     ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ 20ಲಕ್ಷ ಅನುದಾನ ನೀಡುವುದಾಗಿ ಕಸಾಪ ರಾಜ್ಯಾಧ್ಯಕ್ಷರು ಈಗಾಗಲೇ ಘೋಷಿಸಿದ್ದಾರೆ. ಆದರೆ ಕಟ್ಟಡ ನಿರ್ಮಾಣಕ್ಕೆ ನಿವೇಶನವೇ ಇಲ್ಲದಂತಾಗಿದೆ. ಸುಮಾರು 15 ವರ್ಷಗಳ ಹಿಂದೆಯೇ ನಗರಾಭಿವೃದ್ದಿ ಪ್ರಾಧಿಕಾರದವರು ನಿವೇಶನಕ್ಕಾಗಿ 2004ರಲ್ಲೇ ರೂ.34,740/ ಗಳನ್ನು ಕಟ್ಟಿಸಿಕೊಂಡಿದ್ದರು. ಆದರೆ ಇಲ್ಲಿಯವರೆಗೂ ನಿವೇಶನ ನೀಡಿಲ್ಲ. ಈ ಕುರಿತು ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ಏನೋ ಒಂದು ಸಬೂಬು ಹೇಳಿ ಕಾಲ ದೂಡುತ್ತಾ ಇದ್ದಾರೆ ಎಂದು ಆರೋಪಿಸಿದರು.

    2004ರಲ್ಲಿ 12300 ಚ.ಅಡಿ.ಗೆ ಹಣವನ್ನು ಕಟ್ಟಿಸಿಕೊಂಡಿದ್ದ ನಗರಾಭಿವೃದ್ದಿ ಪ್ರಾಧಿಕಾರದವರು ನಗರದ ಅಮರಾವತಿ ಪ್ರವಾಸಿ ಮಂದಿರದ ಹಿಂದುಗಡೆ ಜಾಗ ನೀಡುವುದಾಗಿ ತಿಳಿಸಿದ್ದರು. ಈಗ ಆ ಜಾಗದಲ್ಲಿ ರಸ್ತೆ, ಮತ್ತು ಉದ್ಯಾನವನ ನಿರ್ಮಾಣ ಮಾಡಲಾಗಿದೆ. ನಾವು ಈ ಕುರಿತು ಕೇಳಿದರೆ ಬೇರೆ ಕಡೆ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ನಗರದ ನಾಗಪ್ಪನ ಕಟ್ಟೆ ಏರಿಯಾದಲ್ಲಿ 12741 ಚ.ಅಡಿ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

     ಬರುವ ಜೂನ್ ತಿಂಗಳಲ್ಲಿ ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಹಾಗೆ ಜೂನ್ 2ನೇ ತಾರೀಖಿನಂದು ನಗರದ ತಾಲೂಕು ಕಚೇರಿ ಬಳಿ ಕನ್ನಡ ಸಾಹಿತ್ಯ ಪರಿಷತ್‍ಗೆ ಅಜೀವ ಸದಸ್ಯತ್ವ ಅಭಿಯಾನ ನಡೆಸಿ ಎಲ್ಲಾ ವರ್ಗದವರಿಗೂ ಸದಸ್ಯತ್ವ ನೀಡಲಾಗುವುದು ಎಂದರು.

     ಪತ್ರಿಕಾಗೋಷ್ಠಿಯಲ್ಲಿ ಕಮಲಾಪುರ ಘಟಕದ ಅಧ್ಯಕ್ಷ ದಯಾನಂದ ಕಿನ್ನಾಳ, ಮರಿಯಮ್ಮನಹಳ್ಳಿ ಘಟಕದ ಅಧ್ಯಕ್ಷ ಕೆ.ನಾಗರಾಜ, ಕಂಪ್ಲಿ ಘಟಕದ ಅಧ್ಯಕ್ಷ ಚಂದ್ರಶೇಖರ, ಪದಾಧಿಕಾರಿಗಳಾದ ಎಚ್.ಎಂ.ಜಂಬುನಾಥ, ನಾಗರಾಜ ಎನ್, ಎರ್ರಿಸ್ವಾಮಿ, ಉಮಾ ಮಹೇಶ್ವರ, ಸೋಧಾ ವಿರುಪಾಕ್ಷಗೌಡ, ನಿಂಬಗಲ್ ರಾಮಕೃಷ್ಣ, ಮಧುರ ಚೆನ್ನಶಾಸ್ತ್ರಿ, ಲಿಂಗಾರೆಡ್ಡಿ, ಗಿರೀಶ್ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap