ಬಳ್ಳಾರಿ
ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ಈ ಹಿಂದೆ ಆಗಿರುವ ನಿರ್ಣಯದಂತೆ ಕರ್ನಾಟಕ ಆಂಧ್ರಪ್ರದೇಶದ ರೈತರಿಗೆ ನೀರು ಪೂರೈಕೆ ಮಾಡಬೇಕಾಗಿರುವುದರಿಂದ ಎರಡೂ ರಾಜ್ಯಗಳ ರೈತರಿಗೆ ಅನ್ಯಾಯವಾಗದಂತೆ ಜಿಲ್ಲಾಧಿಕಾರಿಗಳು ಮತ್ತು ತುಂಗಭದ್ರಾ ಜಲಮಂಡಳಿ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ತುಂಗಭದ್ರಾ ರೈತ ಸಂಘ ಮನವಿ ಮಾಡಿದೆ.
ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಅವರು, ತುಂಗಭದ್ರಾ ಜಲಾಶಯದ ಬಲದಂಡೆಯ ಕೆಳಮಟ್ಟದ ಕಾಲುವೆ ನಿರ್ಮಾಣವಾದಾಗ ಕರ್ನಾಟಕಾಂಧ್ರಕ್ಕೆ ಪ್ರತಿ ದಿನ 1800 ಕ್ಯೂಸೆಕ್ ನೀರು ಬಿಡಲು ನಿರ್ಧರಿಸಲಾಗಿತ್ತು. ಮಳೆಗಾಲದ ಅವಧಿಯಲ್ಲಿ ಕರ್ನಾಟಕಕ್ಕೆ 17000 ಸಾವಿರ ಎಕರೆ, ಆಂಧ್ರಕ್ಕೆ 36000 ಎಕರೆ ಮತ್ತು ಬೇಸಿಗೆ ಕಾಲದಲ್ಲಿ ಕರ್ನಾಟಕಕ್ಕೆ 59000 ಸಾವಿರ ಎಕರೆ ಆಂಧ್ರಕ್ಕೆ 1,12000 ಎಕರೆಗೆ ನೀರು ಬಿಡಲು ನಿರ್ಣಯಿಸಲಾಗಿತ್ತು.
ಕರ್ನಾಟಕದಲ್ಲಿ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ 2 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡುತ್ತಿದ್ದೇವೆ. ಈಗ ಇರುವ ಕಾಲುವೆಯಲ್ಲಿ 2300 ಕ್ಯೂಸೆಕ್ ನೀರು ಪಡೆಯುತ್ತಿದ್ದೇವೆ. ಆಂಧ್ರಕ್ಕೆ ನಿತ್ಯವೂ 650 ಕ್ಯೂಸೆಕ್ ನೀರು ಬಿಡುವುದರಲ್ಲಿ ಕೇವಲ 250 ಕ್ಯೂಸೆಕ್ ನೀರು ಬಿಡುತ್ತಿದ್ದೇವೆ. ಈಗಿರುವ ಕಾಲುವೆಯ ವಿನ್ಯಾಸ ಅಳತೆ ಕಡಿಮೆಗೊಳಿಸಿ 1953ರ ರಂತೆ ಕೇವಲ 1800 ಕ್ಯೂಸೆಕ್ ನೀರಿನ ಪ್ರಮಾಣದಂತೆ ಕಾಲುವೆ ನಿರ್ಮಿಸಲಾಗಿದೆ.
70ನೇ ಕಿ.ಮೀ. ವ್ಯಾಪ್ತಿಯಲ್ಲಿಯೇ ಹೀಗಾದರೆ ಕರ್ನಾಟಕದ ಗಡಿ ಭಾಗದ 230 ಕಿ.ಮೀ.ನಿಂದ 250 ಕಿ.ಮೀ ವರೆಗೆ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಮತ್ತು ರಾರಾವಿ ಹೋಬಳಿಗಳ ಅನೇಕ ಗ್ರಾಮಗಳಿಗೆ ನೀರು ಪಡೆಯುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಇದೇ ನೆಪದಲ್ಲಿ ಆಂಧ್ರಕ್ಕೆ ನೀರು ಹೋಗದೇ ಇದ್ದಾಗ ಸಿಆರ್‍ಪಿ ಪೊಲೀಸರನ್ನು ನಿಯುಕ್ತಿಗೊಳಿಸಿದರೆ ನಮ್ಮ ರೈತರ ಪರಿಸ್ಥಿತಿ ಹೇಗೆ? ಎಂದಿರುವ ಅವರು, ರಾಯಚೂರು ಕೊಪ್ಪಳ ಕಾಲುವೆ ನಿರ್ಮಾಣವಾದಾಗ 4100 ಕ್ಯೂಸೆಕ್‍ನಂತೆ ನೀರು ಬಿಡಲು ನಿರ್ಣಯಿಸಲಾಗಿತ್ತು.
ಇತ್ತೀಚೆಗೆ ಎಲ್‍ಬಿಎಂಸಿ ಕಾಲುವೆ ನಿರ್ಮಾಣವಾದಾಗ 4100 ಕ್ಯೂಸೆಕ್ ನಂತೆ ನೀರು ಪಡೆಯುತ್ತಿದ್ದಾರೆ. ಒಂದೇ ಜಲಾಶಯದಲ್ಲಿ ಅವರ ಕಾಲುವೆಗೆ 1000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದು ನ್ಯಾಯವೇ? ಎಂದು ಪ್ರಶ್ನಿಸಿರುವ ಅವರು ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಕರ್ನಾಟಕಾಂಧ್ರ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
