ಹಾವೇರಿ
ರೈಲು ವಿಳಂಬ ನೀಟ್ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕೆಂದು ಎಸ್ಎಫ್ಐ ಸಂಘಟನೆ ಜಿಲ್ಲಾ ಮುಖಂಡ ಬಸವರಾಜ ಭೋವಿ ಆಗ್ರಹಿಸಿದ್ದಾರೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅಗತ್ಯವಾಗಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಭಾನುವಾರ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆದಿರುತ್ತದೆ. ಬಳ್ಳಾರಿ, ಕೊಪ್ಪಳ, ಗದಗ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೆಂಗಳೂರಿಗೆ ಬರಲು ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿರುತ್ತಾರೆ. ಭಾನುವಾರ ಬೆಳಗ್ಗೆ 6.30 ಕ್ಕೆ ಬೆಂಗಳೂರು ತಲುಪಬೇಕಿದ್ದ ರೈಲು ಮಧ್ಯಾಹ್ನ 2.30ಕ್ಕೆ ಅಂದರೆ ಸುಮಾರು 7 ಗಂಟೆಗಳ ತಡವಾಗಿ ಬಂದು ತಲುಪಿದೆ.
ಹಾಗಾಗಿ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವಂಚಿತರಾಗಿದ್ದಾರೆ. ಇದು ರೈಲ್ವೇ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಸಂಭವಿಸಿದೆ. ರೈಲಿನ ಮಾರ್ಗ ಬದಲಾವಣೆ ಮತ್ತು ವಿಳಂಬದ ಬಗ್ಗೆ ಪ್ರಯಾಣಿಕರಿಗೆ ಮೊದಲೇ ಮಾಹಿತಿ ನೀಡಿದ್ದೇವು ಎಂದು ತಪ್ಪನ್ನು ಸಮರ್ಥಿಸಿಕೊಳ್ಳುತ್ತಿರುವ ರೈಲ್ವೇ ಇಲಾಖೆಯ ಕ್ರಮ ನಾಚಿಕೆಗೇಡಿನ ಸಂಗತಿ.
ಇನ್ನೂ ಕೊನೆಯ ಕ್ಷಣದಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ ಟಿಎ) ಪರೀಕ್ಷಾ ಕೇಂದ್ರಗಳನ್ನು ಬದಲಿಸುವ ಮೂಲಕ ತಪ್ಪು ಮಾಡಿದೆ. ಇದರಿಂದಾಗಿಯೇ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವಂಚಿತರಾಗಿದ್ದಾರೆ. ಇದಕ್ಕೆ ಎನ್ ಟಿಎ ನೇರ ಹೊಣೆಯಾಗಿದೆ. ಸಾಕಷ್ಟು ಪೂರ್ವ ತಯಾರಿಗಳನ್ನು ನಡೆಸಿಕೊಂಡು ಪರೀಕ್ಷೆ ಬರೆಯಲು ಸಿದ್ದರಾಗಿದ್ದ ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದರಿಂದಾಗಿ ಮುಸುಕು ಕವಿದಂತಾಗಿದೆ.
ಈ ನಿಟ್ಟಿನಲ್ಲಿ ರೈಲ್ವೇ ಇಲಾಖೆಯಿಂದಾದ ಮತ್ತು ಎನ್ ಟಿಎ ಸಂಸ್ಥೆಯಿಂದಾದ ಎಡವಟ್ಟಿನಿಂದ ಪರೀಕ್ಷೆ ಬರೆಯಲು ವಂಚಿತರಾದ ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಮರು ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಎಸ್ಎಫ್ಐ ಮುಖಂಡ ಬಸವರಾಜ ಭೋವಿ ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
