ತುಮಕೂರು ಮಹಾನಗರ ಪಾಲಿಕೆ: ಬದಲಾದ ಮೀಸಲಾತಿ, ಹೊಸ ಲೆಕ್ಕಾಚಾರ

ತುಮಕೂರು
ವಿಶೇಷ ವರದಿ :ಆರ್.ಎಸ್.ಅಯ್ಯರ್
     ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಯಾರೊಬ್ಬರೂ ನಿರೀಕ್ಷಿಸದ ರೀತಿ ಮೀಸಲಾತಿ ನಿಗದಿಯಾಗಿದ್ದು, ಮತ್ತೊಮ್ಮೆ ಪಾಲಿಕೆಯ ಆಡಳಿತವು ಮಹಿಳಾ ಪ್ರತಿನಿಧಿಗಳ ಪಾಲಾಗಲಿದೆ. ಇದು ಪ್ರಸ್ತುತ ಪಾಲಿಕೆಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಕ್ಕೆ ಎಡೆಮಾಡಿದೆ.
    ಮೇಯರ್ ಸ್ಥಾನಕ್ಕೆ ಸಾಮಾನ್ಯವರ್ಗ (ಮಹಿಳೆ) ಎಂದು ಹಾಗೂ ಉಪಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ-ಎ (ಮಹಿಳೆ) ಎಂದು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಇದು ಡಿಸೆಂಬರ್ 26ರ ಕರ್ನಾಟಕ ರಾಜ್ಯಪತ್ರ (ಗೆಜೆಟ್)ದಲ್ಲಿ ಪ್ರಕಟವಾಗಿದೆ. ಇದರೊಂದಿಗೆ ಈಗಿನ ಚುನಾಯಿತ ಮಂಡಲಿ ಅಸ್ತಿತ್ವಕ್ಕೆ ಬಂದ ನಂತರದ ಎರಡನೇ ಅವಧಿಯೂ ಮಹಿಳೆಯರಿಗೆ ದೊರೆಯಲಿದೆ. ಇದು ಮಹಿಳಾ ಸದಸ್ಯರ ವಲಯದಲ್ಲಿ ಹುರುಪು ಮೂಡಿಸಿದ್ದರೆ, ಪುರುಷ ಸದಸ್ಯರ ವಲಯದಲ್ಲಿ ನಿರಾಶೆ ಉಂಟುಮಾಡಿದೆ.
   ಪಾಲಿಕೆಯ ಮೊದಲ ಅವಧಿಯಲ್ಲೂ ಮೇಯರ್ ಸ್ಥಾನ ಹಿಂದುಳಿದ ವರ್ಗ-ಎ ಮಹಿಳೆಗೆ ಮೀಸಲಾದ ಕಾರಣ ಜೆಡಿಎಸ್‍ನ ಲಲಿತಾ ರವೀಶ್ ಮೇಯರ್ ಆದರು. ಉಪಮೇಯರ್ ಸ್ಥಾನವು ಪರಿಶಿಷ್ಟ ಜಾತಿ(ಮಹಿಳೆ)ಗೆ ಮೀಸಲಾದ ಪರಿಣಾಮ ಕಾಂಗ್ರೆಸ್‍ನ ಬಿ.ಎಸ್.ರೂಪಶ್ರೀ ಉಪಮೇಯರ್ ಆದರು. ಅವರ ಒಂದು ವರ್ಷದ ಅಧಿಕಾರಾವಧಿ 2020ರ ಜನವರಿ ಮಾಸಾಂತ್ಯದಲ್ಲಿ ಕೊನೆಗೊಳ್ಳಲಿದೆ. ಹೊಸ ಮೇಯರ್ ಮತ್ತು ಉಪಮೇಯರ್ ಚುನಾವಣೆ ಪ್ರಕ್ರಿಯೆಯ ಭಾಗವಾಗಿ ಇದೀಗ ಮೀಸಲಾತಿ ಪ್ರಕಟವಾಗಿದ್ದು, ಈ ಬಾರಿ ಸಹಾ ಎರಡೂ ಸ್ಥಾನಗಳು ಮಹಿಳೆಯರ ಪಾಲಾಗುತ್ತಿರುವುದು ರಾಜಕೀಯವಾಗಿ ಅಚ್ಚರಿಯ ಬೆಳವಣಿಗೆಯಾಗಿದೆ.
ಒಟ್ಟು 17 ಮಹಿಳಾ ಸದಸ್ಯರು
     ಒಟ್ಟು 35 ಚುನಾಯಿತ ಸದಸ್ಯರ ಬಲವನ್ನು ಹೊಂದಿರುವ ತುಮಕೂರು ಪಾಲಿಕೆಯಲ್ಲಿ ಈಗ ಬಿಜೆಪಿ-12, ಕಾಂಗ್ರೆಸ್-10, ಜೆಡಿಎಸ್-10 ಸದಸ್ಯ ಬಲವನ್ನು ಹೊಂದಿದ್ದು, ಮೂವರು ಪಕ್ಷೇತರರು ಇದ್ದಾರೆ. ಮಹಿಳಾ ಮೀಸಲಾತಿ ಆಧರಿಸಿ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ ಒಟ್ಟು 17 ಮಹಿಳೆಯರು ಚುನಾಯಿತರಾಗಿ ಬಂದಿದ್ದಾರೆ.
       ಸದರಿ ಮಹಿಳಾ ಸದಸ್ಯರುಗಳ ಹೆಸರು, ವಾರ್ಡ್ ಸಂಖ್ಯೆ ಮತ್ತು ಅವರ ಪಕ್ಷದ ವಿವರ ಈ ರೀತಿ ಇದೆ:- 1)ನಳಿನ ಇಂದ್ರಕುಮಾರ್ -1 ನೇ ವಾರ್ಡ್ -ಮರಳೇನಹಳ್ಳಿ-ಬಿಜೆಪಿ, 2)ದೀಪಶ್ರೀ ಮಹೇಶ್‍ಬಾಬು- 4 ನೇ ವಾರ್ಡ್- ಚಿಕ್ಕಪೇಟೆ- ಬಿಜೆಪಿ, 3)ವೀಣಾ ಮನೋಹರಗೌಡ-6 ನೇ ವಾರ್ಡ್-ಭೀಮಸಂದ್ರ- ಬಿಜೆಪಿ, 4)ಪ್ರಭಾವತಿ ಸುಧೀಶ್ವರ್ -9 ನೇ ವಾರ್ಡ್-ವೀರಸಾಗರ- ಕಾಂಗ್ರೆಸ್, 5)ನೂರುನ್ನೀಸಾ- 10 ನೇ ವಾರ್ಡ್-ಲೇಬರ್ ಕಾಲೋನಿ- ಪಕ್ಷೇತರ, 6)ಫರೀದಾ ಬೇಗಂ-13 ನೇ ವಾರ್ಡ್-ಕುರಿಪಾಳ್ಯ- ಕಾಂಗ್ರೆಸ್, 7)ನಾಸಿರಾ ಬಾನು- 14 ನೇ ವಾರ್ಡ್- ವಿನಾಯಕ ನಗರ, ಕಾಂಗ್ರೆಸ್, 8)ವಿ.ಎಸ್.ಗಿರಿಜಾ- 15 ನೇ ವಾರ್ಡ್-ಗಾಂಧಿನಗರ, ಬಿಜೆಪಿ, 9)ಮುಜೀದಾ ಖಾನಂ- 18 ನೇ ವಾರ್ಡ್-ಬನಶಂಕರಿ- ಕಾಂಗ್ರೆಸ್, 10)ಬಿ.ಎಸ್.ರೂಪಶ್ರೀ- 19 ನೇ ವಾರ್ಡ್-ಕೋತಿತೋಪು- ಕಾಂಗ್ರೆಸ್, 11)ಲಲಿತಾ ರವೀಶ್-21 ನೇ ವಾರ್ಡ್-ಕುವೆಂಪು ನಗರ, ಜೆಡಿಎಸ್, 12)ಮಂಜುಳಾ ಆದರ್ಶ್-25 ನೇ ವಾರ್ಡ್-ಸಿದ್ಧಗಂಗಾ ಬಡಾವಣೆ-ಬಿಜೆಪಿ, 13)ಚಂದ್ರಕಲಾ-27 ನೇ ವಾರ್ಡ್-ಎಸ್.ಐ.ಟಿ. ಬಡಾವಣೆ-ಬಿಜೆಪಿ, 14)ನಾಜಿಮಾಬಿ- 29 ನೇ ವಾರ್ಡ್-ಮರಳೂರುದಿಣ್ಣೆ- ಜೆಡಿಎಸ್, 15)ಶಶಿಕಲಾ ಗಂಗಹನುಮಯ್ಯ-33 ನೇ ವಾರ್ಡ್- ಕ್ಯಾತಸಂದ್ರ- ಜೆಡಿಎಸ್, 16)ನವೀನಾ ಅರುಣ್-34 ನೇ ವಾರ್ಡ್- ಕ್ಯಾತಸಂದ್ರ ಜನತಾಕಾಲೋನಿ-ಬಿಜೆಪಿ, 17)ಎಚ್.ಎಸ್.ನಿರ್ಮಲ -35 ನೇ ವಾರ್ಡ್-ದೇವರಾಯಪಟ್ಟಣ-ಬಿಜೆಪಿ.
     ಮೇಯರ್ ಹುದ್ದೆಯು ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿರುವುದರಿಂದ ಈ ಎಲ್ಲ 17 ಮಹಿಳೆಯರೂ ಈ ಸ್ಥಾನಕ್ಕೆ ಸ್ಪರ್ಧಿಸಬಹುದಾಗಿದೆ. ಆದರೆ ಉಪಮೇಯರ್ ಸ್ಥಾನಕ್ಕೆ ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದವರು ಮಾತ್ರ ಸ್ಪರ್ಧಿಸಲು ಅರ್ಹರಿರುತ್ತಾರೆ. ಆದರೂ ಸಹ ಇವರೆಲ್ಲರೂ ರಾಜಕೀಯ ಪಕ್ಷದಿಂದ ಆಯ್ಕೆಯಾಗಿರುವುದರಿಂದ ರಾಜಕೀಯ ಪಕ್ಷಗಳ ಹೊಂದಾಣಿಕೆಯನ್ನು ಅವಲಂಬಿಸಿ, ಆಯಾ ಪಕ್ಷದ ಧುರೀಣರ ನಿಲುವಿನ ಪ್ರಕಾರ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಹೆಸರಿಸಲ್ಪಟ್ಟವರು ಮಾತ್ರ ಸ್ಪರ್ಧಿಸಬೇಕಾಗುತ್ತದೆ.
    ಅಂತಹ ಅದೃಷ್ಟ ಯಾರಿಗೆಂಬುದನ್ನು ಮುಂದಿನ ಬೆಳವಣಿಗೆಗಳು ನಿರ್ಧರಿಸುತ್ತವೆ. ಈಗಿನ ಮೀಸಲಾತಿಯು ಪುರುಷ ಸದಸ್ಯರ ವಲಯದಲ್ಲಿ ಸಣ್ಣದೊಂದು ನಿರಾಶೆ ಮೂಡಿಸಿದೆಯಾದರೂ, ಮೀಸಲಾತಿ ವಿವರ ಬಹಿರಂಗಗೊಂಡ ಗುರುವಾರ ರಾತ್ರಿಯಿಂದಲೇ ರಾಜಕೀಯ  ಚಟುವಟಿಕೆಗಳು ಆರಂಭವಾಗಿವೆ. ಪರಸ್ಪರ ಚರ್ಚೆ, ಮುಖಂಡರುಗಳ ಭೇಟಿ, ಒತ್ತಡ ತಂತ್ರಗಳು, ಬೇರೆ ಬೇರೆ ಲೆಕ್ಕಾಚಾರಗಳು ಚಾಲನೆಗೊಳ್ಳುತ್ತಿವೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ?
     ಈಗಿನ ಮೀಸಲಾತಿ ಪ್ರಕಾರ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ರಾಜಕೀಯ ಮೈತ್ರಿ ಮಾಡಿಕೊಳ್ಳಬಹುದೆಂಬ ಒಂದು ಲೆಕ್ಕಾಚಾರವೂ ಕೇಳಿಬರುತ್ತಿದೆ. ಮಾತುಕತೆ ಪ್ರಕಾರ ಮೇಯರ್ ಹುದ್ದೆಯನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟರೆ, ಉಪಮೇಯರ್ ಹುದ್ದೆ ಜೆಡಿಎಸ್‍ಗೆ ಲಭಿಸುತ್ತದೆ. ಜೊತೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನೂ ಪಡೆದುಕೊಳ್ಳಬಹುದು. ಇದರಿಂದ ಜೆಡಿಎಸ್‍ಗೆ ನಷ್ಟವೇನೂ ಆಗದು. ಒಂದುವೇಳೆ ಜೆಡಿಎಸ್ ಹೋಳಾಗಿ ಬಿಜೆಪಿ ಜೊತೆ ಹೋದರೂ, ಜೆಡಿಎಸ್‍ಗೆ ಮೇಯರ್ ಸ್ಥಾನವೇನೂ ದೊರೆಯದು, ಆಗ ಸಹಾ ಜೆಡಿಎಸ್‍ಗೆ ದೊರಕುವುದು ಕೇವಲ ಉಪಮೇಯರ್ ಹುದ್ದೆಯಷ್ಟೇ ಎಂದು ಹೇಳಲಾಗುತ್ತಿದೆ. ಪಾಲಿಕೆಯ ಜೆಡಿಎಸ್ ಸದಸ್ಯ ಬಿ.ಎಸ್.ಮಂಜುನಾಥ್ (17ನೇ ವಾರ್ಡ್- ಶಾಂತಿನಗರ), ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮುಂದುವರೆಯಬೇಕು ಎಂದು ಅಭಿಪ್ರಾಯಪಡುತ್ತಿದ್ದಾರೆ. 
     ಜೆಡಿಎಸ್ ಮುಖಂಡ ಹಾಗೂ ಮಾಜಿ ನಗರಸಭಾ ಸದಸ್ಯ ಟಿ.ಜಿ.ನರಸಿಂಹರಾಜು ಸಹಾ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯೇ ಸೂಕ್ತವಾದುದು ಎನ್ನುತ್ತಾರೆ. ಕಳೆದ ಆರು ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ತುಮಕೂರು ಪಾಲಿಕೆಯಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಹಿಂದಿನ ಮಹಾನಗರ ಪಾಲಿಕೆಯ ಐದು ವರ್ಷಗಳ ಅವಧಿಯಲ್ಲಿ ಎರಡೂ ಪಕ್ಷಗಳು ಸಮಾನವಾಗಿ ಅಧಿಕಾರ ಹಂಚಿಕೊಂಡಿದ್ದವು.
    ಈಗಿನ ಪಾಲಿಕೆಯಲ್ಲೂ ಮೊದಲ ವರ್ಷದ ಮೈತ್ರಿ ಯಶಸ್ವಿಯಾಗಿದೆ. ಕೊಟ್ಟ ಮಾತಿನ ಪ್ರಕಾರ ಅದನ್ನೇ ಮುಂದಿನ ಅವಧಿಗಳಲ್ಲೂ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಜೆಡಿಎಸ್ ವಚನಭ್ರಷ್ಟವೆಂಬ ಆರೋಪಕ್ಕೆ ಗುರಿಯಾಗಬಾರದು ಎಂದು ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
    ಮೇಯರ್ ಹುದ್ದೆಯು ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿರುವುದರಿಂದ ಎಲ್ಲ 17 ಮಹಿಳೆಯರೂ ಈ ಸ್ಥಾನಕ್ಕೆ ಸ್ಪರ್ಧಿಸಬಹುದಾಗಿದೆ. ಆದರೆ ಉಪಮೇಯರ್ ಸ್ಥಾನಕ್ಕೆ ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದವರು ಮಾತ್ರ ಸ್ಪರ್ಧಿಸಲು ಅರ್ಹರಿರುತ್ತಾರೆ.
   
    ಆದರೂ ಸಹ ಇವರೆಲ್ಲರೂ ರಾಜಕೀಯ ಪಕ್ಷದಿಂದ ಆಯ್ಕೆಯಾಗಿರುವುದರಿಂದ ರಾಜಕೀಯ ಪಕ್ಷಗಳ ಹೊಂದಾಣಿಕೆಯನ್ನು ಅವಲಂಬಿಸಿ, ಆಯಾ ಪಕ್ಷದ ಧುರೀಣರ ನಿಲುವಿನ ಪ್ರಕಾರ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಹೆಸರಿಸಲ್ಪಟ್ಟವರು ಮಾತ್ರ ಸ್ಪರ್ಧಿಸಬೇಕಾಗುತ್ತದೆ. ಅಂತಹ ಅದೃಷ್ಟ ಯಾರಿಗೆಂಬುದನ್ನು ಮುಂದಿನ ಬೆಳವಣಿಗೆಗಳು ನಿರ್ಧರಿಸುತ್ತವೆ.
    ಈಗಿನ ಮೀಸಲಾತಿಯು ಪುರುಷ ಸದಸ್ಯರ ವಲಯದಲ್ಲಿ ಸಣ್ಣದೊಂದು ನಿರಾಶೆ ಮೂಡಿಸಿದೆಯಾದರೂ, ಮೀಸಲಾತಿ ವಿವರ ಬಹಿರಂಗಗೊಂಡ ಗುರುವಾರ ರಾತ್ರಿಯಿಂದಲೇ ರಾಜಕೀಯ  ಚಟುವಟಿಕೆಗಳು ಆರಂಭವಾಗಿವೆ. ಪರಸ್ಪರ ಚರ್ಚೆ, ಮುಖಂಡರುಗಳ ಭೇಟಿ, ಒತ್ತಡ ತಂತ್ರಗಳು, ಬೇರೆ ಬೇರೆ ಲೆಕ್ಕಾಚಾರಗಳು ಚಾಲನೆಗೊಳ್ಳುತ್ತಿವೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link