ರಾಣಿಬೆನ್ನೂರು
ಬಡವರ ಬಾಳಿಗೆ ಬೆಳಕಾಗಲು ಅಭಿರುಚಿ ಹೊಂದಿದವರು ಕಣ್ಣು ದಾನ ನೀಡುವುದರ ಮೂಲಕ ನಿಜವಾದ ಮಾನವೀಯತೆಯನ್ನು ಮೆರೆಯಬೇಕು ಎಂದು ಸಮಾಜ ಸೇವಕಿ ಭಾರತಿ ಅಳವಂಡಿ ಹೇಳಿದರು.
ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಡಾ.ರಾಜ್ ಅಭಿಮಾನಿಗಳ ಬಳಗ, ಗ್ರಾಪಂ, ಆರೋಗ್ಯ ಇಲಾಖೆ, ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಭಿರದಲ್ಲಿ ಭಾಗವಹಿಸಿ ಮಾತನಾಡಿದರು.
ತಮ್ಮ ಅಕಾಲಿಕ ಜೀವದ ಮಧ್ಯೆಯೂ ಇಂತಹ ಪರೋಪಕಾರ ಮಾಡಿದರೆ ಜೀವನ ಮುಕ್ತಿಯ ಜೊತೆಗೆ ಇತರರಿಗೂ ನೋಡುವ ಭಾಗ್ಯ ನೀಡಿದ ಮಹಾನ್ ಕೀರ್ತಿ ನಿಮ್ಮದಾಗುತ್ತದೆ. ಈ ದಿಸೆಯಲ್ಲಿ ಸರ್ವರೂ ಕಣ್ಣಿನ ಬಗ್ಗೆ ಹೆಚ್ಚಿನ ಜಾಗರೂಕತೆಯ ಜೊತೆಗೆ ದಾನ ನೀಡುವಲ್ಲಿಯೂ ಮುಂದಾಗಬೇಕು ಎಂದರು.
ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನು ತಮ್ಮ ಕಣ್ಣುಗಳನ್ನು ನಿಧನದ ಆನಂತರ ಅಂಧರಿಗೆ ದಾನ ಮಾಡುವುದರಿಂದ ಇನ್ನೊಬ್ಬರ ಬಾಳು ಹಸನಾಗುವುದು. ಕಣ್ಣಿಲ್ಲದವರ ಬಗ್ಗೆ ಯಾರೂ ಕೀಳಾಗಿ ನೋಡುವ ಮನೋಭಾವನೆ ಯಾರಲ್ಲೂ ಬರಬಾರದು ಎಂದರು.
ಗ್ರಾಪಂ ಅಧ್ಯಕ್ಷ ಸುರೇಶ ಬಾನುವಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಗಳು ಮಾಡಬೇಕಾದ ಕಾರ್ಯಗಳನ್ನು ಇಂದು ಬಹುತೇಕವಾಗಿ ಸಂಘ-ಸಂಸ್ಥೆಗಳು, ಸಾಮಾಜಿಕ ಸಾಂಸ್ಕøತಿಕ ಸಂಘಟನೆಗಳು ಮಾಡುತ್ತಲಿವೆ. ಸ್ವಾಕರವೇ ಸಂಘಟನೆ ರಾಜ್ಯವೂ ಸೇರಿದಂತೆ ಉತ್ತರ ಕರ್ನಾಟಕದ ಬಹು ಭಾಗಗಳಲ್ಲಿ ತನ್ನ ಸಾಮಾಜಿಕ ಕಳಕಳಿಯನ್ನು ಹೊತ್ತು ನಾಗರೀಕರ ಅತ್ತ್ಯುತ್ತಮ ಸೇವೆ ಸಲ್ಲಿಸುತ್ತಿರುವುದು ತಾಲೂಕು-ಜಿಲ್ಲೆಗೆ ಹೆಮ್ಮೆ ತರುವ ಸಂಗತಿಯಾಗಿದೆ ಎಂದರು.
200ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಇದರಲ್ಲಿ 76 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆಗೊಂಡರು. ಶಂಕರ್ ಕಣ್ಣಿನ ಆಸ್ಪತ್ರೆಯ ಡಾ.ವಿಕ್ರಂ, ಡಾ ಶರಣರಾಜ್ ಚೌಧರಿ, ಡಾ.ಶಂಕರ, ಡಾ.ತ್ಯಾಗರಾಜ್ರವರುಗಳು ನೇತ್ರ ತಪಾಸಿಸಿದರು. ಪಾಲಾಕ್ಷಪ್ಪ ಕಡೇಮನಿ, ಶ್ಯಾಮರೆಡ್ಡಿ ನ್ಯಾಮತಿ, ಕೊಟ್ರೇಶ ಎಮ್ಮಿ, ಶೇಕಪ್ಪ ನಾಡರ, ರಾಜಶೇಖರಪ್ಪ, ರಾಜು ಅಳಲಗೇರಿ, ನಾಗರಾಜ ಚೌಡಣ್ಣನವರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
