ನೀರಿದ್ದಾಗ ಕಣ್ಣುಮುಚ್ಚಿ, ಇಲ್ಲದಾಗ ಬಡಿದಾಡುವರು..

ತುಮಕೂರು

`     ಗೊರೂರು ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಲ್ಲಿ ನೀರು ಹರಿಸುವಂತೆ ಶನಿವಾರ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಾಲೆಯಲ್ಲಿ ನೀರು ಹರಿಯಲಾರಂಭಿಸಿದೆ .ಪ್ರಾಕೃತಿಕವಾಗಿ ನೀರಿನ ಸೌಲಭ್ಯ ಇದ್ದಾಗ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ ಬರಿದಾದಾಗ ಬಡಿದಾಡುವ ದಾರಿದ್ರ್ಯ ಮನಸ್ಥಿತಿ ನಮ್ಮಲ್ಲಿ ಹಿಂದಿನಿಂದಲೂ ಬೆಳೆದು ಬಂದಿದೆ.

     ಕಳೆದ ಬಾರಿಯಂತೆ ಈ ಬಾರಿಯೂ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಆದರೆ ಕೆರೆಕಟ್ಟೆಗಳಲ್ಲಿ ನೀರು ತುಂಬಿಲ್ಲ. ಕೆಲವು ತಾಲ್ಲೂಕುಗಳಲ್ಲಿ ಮಾತ್ರವೆ ಉತ್ತಮ ಮಳೆಯಾಗಿದ್ದರೆ, ಇನ್ನು ಕೆಲವು ಕಡೆ ಸೋನೆ ಮಳೆಗೆ ಸೀಮಿತವಾಗಿದೆ. ಬೆಳೆ ತೆಗೆಯಲು ರೈತಾಪಿ ವರ್ಗಕ್ಕೆ ಇಷ್ಟು ಮಳೆ ಸಾಕು. ಮಳೆಗಾಲ ಮುಗಿದು ಬೇಸಿಗೆ ಕಾಲ ಸಮೀಪಿಸಿದಾಗ ನೀರಿನ ಹಾಹಾಕಾರ ಉಂಟಾಗಿ ಆ ಭಾಗದ ಜನಪ್ರತಿನಿಧಿಗಳು ಹುಯಿಲು ಎಬ್ಬಿಸುತ್ತಾರೆ.

     ಆದರೆ ನೀರು ಲಭ್ಯ ಇರುವ ಕಾಲದಲ್ಲಿ ಇವರೆಲ್ಲ ಮೌನಿಗಳಾಗಿರುತ್ತಾರೆ. ಇದು ನೀರಿನ ರಾಜಕಾರಣಕ್ಕೂ ಕಾರಣವಾಗುತ್ತಿದೆ.
ಪ್ರಸ್ತುತ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚುತ್ತಿರುವುದರಿಂದ ಹೇಮಾವತಿ ನೀರನ್ನು ಕೆರೆಗಳಿಗೆ ಹರಿಸಿಕೊಳ್ಳುವ ಎಲ್ಲ ಅವಕಾಶಗಳು ಇವೆ. ಒಪ್ಪಿತ ನಿಯಮದ ಪ್ರಕಾರ ಗೊರೂರು ಜಲಾಶಯದಿಂದ ತುಮಕೂರು ನಾಲಾ ವಲಯಕ್ಕೆ 24.183 ಟಿಎಂಸಿ ನೀರು ವಾರ್ಷಿಕವಾಗಿ ಬಿಡುಗಡೆ ಮಾಡಬೇಕು. ಆದರೆ ಇಷ್ಟು ಪ್ರಮಾಣದ ನೀರು ಹರಿಯಲು ಈವರೆಗೆ ಸಾಧ್ಯವೇ ಆಗಿಲ್ಲ. ನಾಲಾ ಅಗಲೀಕರಣ ಆಗಿಲ್ಲದೆ ಇರುವುದೂ ಸೇರಿದಂತೆ ಈ ಸಮಸ್ಯೆಗೆ ನಾನಾ ಕಾರಣಗಳಿವೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಉತ್ತಮವಾಗಿದ್ದು, ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಲ್ಲಿ ಯಥೇಚ್ಛವಾಗಿ ಮಳೆಯಾಗುತ್ತಿರುವುದರಿಂದ ಹೇಮಾವತಿ ನೀರಿನ ಹೆಚ್ಚಳ ಮತ್ತಷ್ಟು ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ.

    ಹೇಮಾವತಿ ನೀರನ್ನು ಕುಡಿಯುವ ನೀರಿನ ಯೋಜನೆ, ಏತ ನೀರಾವರಿ ಯೋಜನೆ, ಅಚ್ಚುಕಟ್ಟು ಪ್ರದೇಶ ಹಾಗೂ ಕೈಗಾರಿಕೆಯೂ ಸೇರಿದಂತೆ ಹಂಚಿಕೆ ಮಾಡಬೇಕು. 2017 ರಲ್ಲಿ ಎದುರಾದ ಭೀಕರ ಜಲಸಂಕಷ್ಟದ ನಂತರ ಕುಡಿಯುವ ನೀರಿಗೆ ಮಾತ್ರವೆ ಆದ್ಯತೆ ನೀಡಲಾಯಿತು. ಹೀಗಾಗಿ ತಾಲ್ಲೂಕುವಾರು ಗುರುತಿಸಿರುವ ಕೆರೆಗಳಿಗೆ ಮಾತ್ರವೆ ನೀರು ಹರಿಸಲಾಯಿತು. ಈಗ ಪರಿಸ್ಥಿತಿ ಬದಲಾಗಿದೆ.
ತುಮಕೂರು ಶಾಖಾ ನಾಲೆಯ ವಲಯದಲ್ಲಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ 246 ಕೆರೆಗಳನ್ನು ಗುರುತಿಸಲಾಗಿದೆ. ಮುಖ್ಯ ನಾಲೆಗೆ ಸಂಪರ್ಕ ಹೊಂದಿರುವ ವಿತರಣಾ ನಾಲೆಗಳಿಂದ ಈ ಕೆರೆಗಳಿಗೆ ನೀರು ಹರಿಸಲಾಗುತ್ತದೆ.

    ಇದರಿಂದ ರೈತರ ಬೆಳೆಗೆ ಅನುಕೂಲವಾಗುತ್ತದೆ. ನೀರು ಲಭ್ಯವಿರುವ ಈ ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಪ್ರಮುಖ ಕೆರೆಗಳಿಗೆ ನೀರು ಹರಿಸುವತ್ತ ಗಮನ ಹರಿಸಬೇಕಿದೆ. ತುಮಕೂರು ಜಿಲ್ಲೆಯಲ್ಲಿ ಪ್ರತಿವರ್ಷವೂ ಹೇಮಾವತಿ ನೀರಿಗಾಗಿ ಬೇಸಿಗೆ ಸಂದರ್ಭದಲ್ಲಿ ಹೋರಾಟ ನಡೆಯುತ್ತದೆ. ನಮ್ಮ ಪಾಲಿನ ನೀರು ಹರಿಸಿ ಎಂದು ಆಯಾ ತಾಲ್ಲೂಕಿನ ರಾಜಕಾರಣಿಗಳು ರೈತರನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಾರೆ. ಕುಣಿಗಲ್ ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ರೈತ ಹೋರಾಟಗಾರರು ನಮಗೆ ನೀರೇ ಹರಿದಿಲ್ಲ ಎನ್ನುತ್ತಾರೆ. ವಾಸ್ತವವಾಗಿ ಹೇಮಾವತಿ ನೀರನ್ನು ಟೈಲ್ ಎಂಡ್ (ಕೊನೆಯ ಹಂತ) ಕೆರೆಗಳಿಗೆ ಆದ್ಯತೆಯಾಗಿ ಹರಿಸಬೇಕು. ಆದರೆ ಇದೂ ಸಹ ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳಿವೆ. ಇಂತಹ ಆರೋಪಗಳಿಂದ ಮುಕ್ತಿ ಹೊಂದಲು ಜಲಾಶಯದಲ್ಲಿ ನೀರು ಲಭ್ಯವಿರುವ ಸಮಯದಲ್ಲಿಯೇ ಕೊರತೆ ಇರುವ ಪ್ರದೇಶಗಳಿಗೆ ನೀರು ತುಂಬಿಸಿಕೊಳ್ಳುವಂತಹ ಕಾರ್ಯ ಆಗಬೇಕಲ್ಲವೆ?

ಬೃಹತ್ ಗಿಡಗಂಟೆಗಳು

    ತುಮಕೂರು ವ್ಯಾಪ್ತಿಯಲ್ಲಿರುವ ನಾಲೆಯು 1445 ಕ್ಯುಸೆಕ್ಸ್ ನೀರು ಹರಿಯುವ ಸಾಮಥ್ರ್ಯ ಹೊಂದಿದೆ. ಎಂದು ವರದಿಗಳು ತಿಳಿಸುತ್ತವೆ. ಆದರೆ ಇಷ್ಟು ಪ್ರಮಾಣದ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಅಲ್ಲಲ್ಲಿ ನಾಲೆ ಒಡೆದು ಹೋಗುತ್ತಲೇ ಇರುವ ಉದಾಹರಣೆಗಳನ್ನು ಕಂಡಿದ್ದೇವೆ. ನಾಲೆಯ ತುಂಬೆಲ್ಲ ಗಿಡಮರಗಳು ಬೆಳೆದುಕೊಂಡು ಮಣ್ಣು ಕುಸಿದಿರುವುದನ್ನು ಇಂದಿಗೂ ಗಮನಿಸಬಹುದಾಗಿದೆ. ಹೀಗಾಗಿ ನಿರೀಕ್ಷಿತ ಪ್ರಮಾಣದ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಹೂಳೆತ್ತುವ ಕಾರ್ಯ ಕೈಗೊಳ್ಳಿ ಎಂದು ಹೇಮಾವತಿ ನೀರು ಸಲಹಾ ಸಮಿತಿ ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಬಂದಿವೆ.

ಅಮಾನಿಕೆರೆಗೂ ನೀರು

    ತುಮಕೂರು ನಗರದ ಜನತೆಗೆ ಬುಗುಡನಹಳ್ಳಿಯ ಜಲಸಂಗ್ರಹಾಗಾರದಿಂದ ನೀರು ಒದಗಿಸಲಾಗುತ್ತಿದೆ. 544 ಎಕರೆ ವಿಸ್ತೀರ್ಣ ಹಾಗೂ 7ಕಿ.ಮೀ. ಸುತ್ತಳತೆ ಹೊಂದಿರುವ ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ 12 ಅಡಿಗಳಷ್ಟು ನೀರಿನ ಸಂಗ್ರಹ ಸಾಮಥ್ರ್ಯವಿದೆ. ಕಳೆದ ವರ್ಷ ಹೂಳೆತ್ತುವ ಕಾಮಗಾರಿ ಆರಂಭಿಸಲಾಯಿತು. ಆದರೆ ಸತತ ಮಳೆಯ ಪರಿಣಾಮ ಈ ಕಾಮಗಾರಿ ಸ್ಥಗಿತಗೊಂಡಿತಾದರೂ ಆಗ ನಡೆದ ಹೂಳೆತ್ತುವ ಕಾಮಗಾರಿಯ ಪರಿಣಾಮವಾಗಿ 44 ಎಂಸಿಎಫ್‍ಟಿಯಷ್ಟು ಹೆಚ್ಚುವರಿ ನೀರಿನ ಸಂಗ್ರಹ ಸಾಮಥ್ರ್ಯ ಸಿಗುವುದೆಂಬ ಆಶಾಭಾವನೆ ಇದೆ. ಜಲಸಂಗ್ರಹಾಗಾರದ ಒಟ್ಟು ಸಾಮಥ್ರ್ಯ 240 ಎಂಸಿಎಫ್‍ಟಿ.

    ಬುಗುಡನಹಳ್ಳಿ ಕೆರೆ ಭರ್ತಿಯಾದ ನಂತರ ಪಕ್ಕದ ಹೆಬ್ಬಾಕ ಕೆರೆ, ಕುಪ್ಪೂರು ಕೆರೆ ಜೊತೆಗೆ ಮೈದಾಳ, ತುಮಕೂರು ಅಮಾನಿಕೆರೆ ಸೇರಿದಂತೆ ಇನ್ನಿತರ ಕೆರೆಗಳಿಗೆ ನೀರು ತುಂಬಿಸಿದರೆ ನೀರಿನ ಸಮಸ್ಯೆ ನೀಗಿಸಬಹುದೆಂಬ ಕನಸು ಇದೀಗ ಸ್ವಲ್ಪ ಮಟ್ಟಿಗೆ ಸಾಕಾರಗೊಳ್ಳುತ್ತಿದೆ. ಜುಲೈ 10 ರಂದು ತುಮಕೂರು ಅಮಾನಿಕೆರೆಗೆ ಬುಗುಡನಹಳ್ಳಿ ಕೆರೆಯಿಂದ ಪೈಪ್‍ಲೈನ್ ಮುಖಾಂತರ ಹೇಮಾವತಿ ನೀರನ್ನು ಪ್ರಯೋಗಿಕವಾಗಿ ಹರಿಸಲಾಗಿದೆ. ಅಮಾನಿಕೆರೆಯು 173 ಎಂಸಿಎಫ್‍ಟಿ ಸಾಮಥ್ರ್ಯ ಹೊಂದಿದ್ದು, ಇಲ್ಲಿ ನೀರು ಸಂಗ್ರಹವಾದರೆ ಸುತ್ತಮುತ್ತಲಿನ ಪ್ರದೇಶದ ಅಂತರ್ ಜಲ ಮಟ್ಟ ಸುಧಾರಣೆಯಾಗಲಿದ್ದು, ಕೊಳವೆ ಬಾವಿಗಳು ಮರುಜೀವ ಪಡೆಯಲಿವೆ ಎಂದು ಹೇಳಲಾಗುತ್ತಿದೆ. ಈ ಸಾಧ್ಯತೆಗಳನ್ನು ಮುಂದಿನ ದಿನಗಳಲ್ಲಿ ನೋಡಬೇಕು.

    ಕುಡಿಯುವ ನೀರಿನ ಜೊತೆಗೆ ದಾಬಸ್‍ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆಗಳು ರೂಪಿತವಾಗಿದ್ದು, ನೀರಿನ ಸಂಗ್ರಹದ ಬಗ್ಗೆ ಹೆಚ್ಚಿನ ಆಧ್ಯತೆ ನೀಡದೆ ಹೋದಲ್ಲಿ ಬೇಸಿಗೆಯ ದಿನಗಳಲ್ಲಿ ಹಾಹಾಕಾರ ಉಂಟಾಗುವ ಸಾಧ್ಯತೆಗಳೇ ಹೆಚ್ಚು. ಈ ನಿಟ್ಟಿನಲ್ಲಿ ಪ್ರಸ್ತುತ ಜಲಾಶಯದಲ್ಲಿರುವ ನೀರಿನ ಸದ್ಬಳಕೆಯೊಂದೆ ನಮ್ಮ ಮುಂದಿರುವ ದಾರಿ. ನೀರು ಪೋಲಾಗಲು ಬಿಡದಂತೆ ನಾಲೆಯಲ್ಲಿ ಸಮರ್ಪಕವಾಗಿ ಹರಿಸಿ ಕೆರೆಗಳಿಗೆ ತುಂಬಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಆಗಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ