ತುಮಕೂರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಬೆಂಗಳೂರಿನ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜೂನ್ 5ರವರೆಗೆ ಐದು ದಿನಗಳ ಕಾಲ ಆಯೋಜಿಸಲಾಗಿರುವ ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಸಸ್ಯಸಂತೆಯ ಮೇಳಕ್ಕೆ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ್ ಅವರು ಇಂದು ಚಾಲನೆ ನೀಡಿದರು.
ಮೇಳಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಮೇಳದಲ್ಲಿ ಬಾದಾಮಿ, ರಸಪುರಿ, ಮಲ್ಲಿಕ, ಮಲಗೋವ, ತೋತಾಪುರಿ, ಬಂಗನಪಲ್ಲಿ ಮುಂತಾದ ಮಾವಿನ ಹಣ್ಣುಗಳು ಹಾಗೂ ದಾಳಿಂಬೆ, ಹಲಸಿನ ಹಣ್ಣು ಸೇರಿದಂತೆ ವಿವಿಧ ಮಾವು ಮತ್ತು ಹಲಸು ತಳಿಗಳ ಪ್ರದರ್ಶನ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ರೈತರಿಂದ ನೇರವಾಗಿ ಉತ್ತಮ ಬೆಲೆಗೆ ಗ್ರಾಹಕರು ಖರೀದಿಸುವ ವ್ಯವಸ್ಥೆ ಈ ಮೇಳದಲ್ಲಿದೆ. ಇಂತಹ ಮೇಳವನ್ನು ಆಯೋಜಿಸುವುದರಿಂದ ರೈತರಿಗೆ ಸಹಕಾರಿಯಾಗಲಿದೆ. ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ಈ ಮೇಳದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿರುವ ಮಾವು ಹಾಗೂ ಹಲಸು ಪ್ರದರ್ಶನ ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ರೀತಿಯಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ತೋಟಗಾರಿಕೆ ಇಲಾಖೆ ಮುಖಾಂತರ ರೈತರು ಬೆಳೆದ ಬೆಳೆಗಳಿಗೆ ಉತ್ತಮ ರೀತಿಯಲ್ಲಿ ಬೆಲೆಸಿಗುವಂತೆ ಆಗಬೇಕು. ತಾತ್ಕಾಲಿಕವಾಗಿ ಇಂತಹ ಮೇಳಗಳನ್ನು ಆಯೋಜಿಸದೆ, ಶಾಶ್ವತವಾದ ಸೌಲಭ್ಯವನ್ನು ಕಲ್ಪಿಸಬೇಕು. ತುಮಕೂರು ನಗರದಲ್ಲಿ ತೋಟಗಾರಿಕೆ ಇಲಾಖೆಯು ಕಾಲು ಎಕರೆ ಜಮೀನು ನೀಡಿ, ಹಣ್ಣು ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ರೈತರು ಸ್ವಸಹಾಯ ಸಂಘಗಳ ಮೂಲಕ ಮಾರಾಟ ಮಾಡುವ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ಈ ಮೇಳದಲ್ಲಿ 22 ಮಳಿಗೆಗಳಿದ್ದು, ತುಮಕೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ವಿವಿಧ ಹಣ್ಣಿನ ಮಾರಾಟಗಾರರು ಬಂದಿದ್ದಾರೆ. ಹಾಪ್‍ಕಾಮ್ಸ್ ಹಾಗೂ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮಾವು, ಹಲಸು, ದಾಳಿಂಬೆ ಹಣ್ಣುಗಳು ಗ್ರಾಹಕರಿಗೆ ದೊರೆಯುತ್ತಿವೆ ಎಂದು ಅವರು ತಿಳಿಸಿದರು.
ಸಂಸದರಾದ ಜಿ.ಎಸ್. ಬಸವರಾಜು ಅವರು ಪ್ರದರ್ಶನದಲ್ಲಿ ತಾಂತ್ರಿಕ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು. ಪ್ರದರ್ಶನದಲ್ಲಿ ವಿವಿಧ ರೀತಿಯ ತರಕಾರಿ-ಸೊಪ್ಪುಗಳು, ಹೂವಿನ ಗಿಡಗಳು ಮುಂತಾದವುಗಳ ಪ್ರದರ್ಶನ ಮತ್ತು ಮಾರಾಟ ಸಾರ್ವಜನಿಕರ ಗಮನ ಸೆಳೆಯಿತು.
ಈ ಮೇಳದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯ ವೈ.ಹೆಚ್.ಹುಚ್ಚಯ್ಯ, ತೋಟಗಾರಿಕೆ ಉಪ ನಿರ್ದೇಶಕ ರಘು.ಬಿ, ಮತ್ತಿತರರು ಹಾಜರಿದ್ದರು.
ಮೇಳದಲ್ಲಿ 1 ಕೆ.ಜಿ.ಬಾದಾಮಿ 70ರೂ., ರಸಪುರಿ 60ರೂ., ಮಲ್ಲಿಕ 70ರೂ., ಬಂಗನಪಲ್ಲಿ 60ರೂ. ಸೇಂದೂರು 40ರೂ. ಮಲಗೋವ 100ರೂ., ತೋತಾಪುರಿ 25ರೂ., ನೀಲಂ 45ರೂ., ದಶೇರಿ 80ರೂ., ಅಮ್ರಪಾಲಿ 70ರೂ., ಹಲಸು 15ರೂ., ದಾಳಿಂಬೆ 130ರೂ., ಸಕ್ಕರೆಗುತ್ತಿ 100 ರೂ.ಗಳಿಗೆ ದೊರೆಯುತ್ತವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
